ಚಿಕ್ಕಮಗಳೂರು: ಹಲವಾರು ಮಹಾನ್ ದಾರ್ಶನಿಕರು ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಫಲವಾಗಿ ಇಂದು ಎಲ್ಲ ಬಡವರ್ಗದ ಜನರನ್ನು ಸಮಾಜದ ಮುನ್ನಲೆಗೆ ತರಲು ಪ್ರಯತ್ನಿಸಲಾಗುತ್ತಿದೆ ಎಂದು ಶಾಸಕ ಎಚ್.ಡಿ. ತಮ್ಮಯ್ಯ ತಿಳಿಸಿದರು.
ನಗರದ ಲಯನ್ಸ್ ಸೇವಾ ಭವನದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಹಾಗೂ ಲಯನ್ಸ್ ಸೇವಾ ಸಂಸ್ಥೆ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ನ್ಯಾಯದ ಹರಿಕಾರ ಪ್ರವಾದಿ ಮಹಮದ್ ಕುರಿತ ವಿಚಾರಗೋಷ್ಠಿಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಬುದ್ಧ, ಬಸವ, ಅಬೇಡ್ಕರ್, ಕನಕದಾಸರು, ಪ್ರವಾದಿ ಮಹಮದ್ ಪೈಗಂಬರ್, ಕುವೆಂಪು, ಸ್ವಾಮಿ ವಿವೇಕಾನಂದ, ವಾಲ್ಮೀಕಿ ಮುಂತಾದ ಹಲವಾರು ದಾರ್ಶನಿಕರು ಎಲ್ಲ ಧರ್ಮದ ಶೋಷಿತರನ್ನು ಸಮಾಜದ ಮುನ್ನಲೆಗೆ ತರುವ ಪ್ರಯತ್ನ ಮಾಡಿ ಮೂಢನಂಬಿಕೆ, ಮೌಢ್ಯ, ಕಂದಾಚಾರಗಳಿAದ ಹೊರತರುವ ಕೆಲಸ ಮಾಡಿದ್ದಾರೆ ಎಂದು ಶ್ಲಾಘಿಸಿದರು.
ಮಹಾನ್ ದಾರ್ಶನಿಕರ ವಿಚಾರಧಾರೆ, ತತ್ವಾದರ್ಶಗಳಿಗೆ ಇಂದೂ ಸಹ ಬೆಂಬಲ ವ್ಯಕ್ತವಾಗುತ್ತಿರುವುದು ಅಭಿನಂದನೀಯ. ಸರ್ವಧರ್ಮಗಳ ದೇಶ ಭಾರತ. ಏಕತೆ, ಐಕ್ಯತೆ, ಭಾವೈಕ್ಯತೆಯನ್ನು ಹೊಂದಿದೆ. ಈ ನಿಟ್ಟಿನಲ್ಲಿ ನಾವೆಲ್ಲಾ ಭಾರತೀಯರು ಎಂಬ ಮನೋಭಾವವನ್ನು ಮಕ್ಕಳಲ್ಲಿ ತಿಳಿವಳಿಕೆ ಮೂಡಿಸಬೇಕು ಎಂದು ಕರೆನೀಡಿದರು.
ದೇಶವಾಸಿಗಳ ನೆಮ್ಮದಿ ಬದುಕಿಗೆ ನಾಂದಿಯಾಗಿರುವ ಸೈನಿಕರನ್ನು ಗೌರವಿಸಬೇಕಾಗಿದೆ. ಯಾವುದೇ ವ್ಯಕ್ತಿ ಯಾವುದೇ ಧರ್ಮದಲ್ಲಿ ಜನಿಸಿದ್ದರೂ ನಾವು ದೇಶವನ್ನು ಗೌರವಿಸಬೇಕು. ಇನ್ನೊಂದು ಧರ್ಮವನ್ನು ಪ್ರೀತಿಸಬೇಕು ಎಂಬುದನ್ನು ದಾರ್ಶನಿಕರು ಹೇಳಿದ್ದು, ಇದು ಆಚರಣೆಗೆ ಬಂದಾಗ ದೇಶದಲ್ಲಿ ಶಾಂತಿ ಮೂಡುತ್ತದೆ ಎಂದರು.
ನಿವೃತ್ತ ಉಪನ್ಯಾಸಕ ಹಾಗೂ ಸಾಹಿತಿ ಬಿ.ತಿಪ್ಪೇರುದ್ರಪ್ಪ ಮಾತನಾಡಿ, ಕೆಟ್ಟ ಪ್ರಚೋದನೆಗಳಿಗೆ ಅವಕಾಶ ನೀಡದೆ ಹಿಂದೂ, ಮುಸ್ಲಿಂ ಸಮುದಾಯ ಒಟ್ಟಿಗೆ ಸೇರಿದಾಗ ಭಾವೈಕ್ಯತೆ ಬೆಳೆಯುತ್ತದೆ. ಜಗತ್ತಿನಲ್ಲಿ, ನಾಡಿನಲ್ಲಿ ಅನ್ಯಾಯ, ಅಶಾಂತಿ, ಮೌಢ್ಯತೆ ನಡೆಯುತ್ತಿದ್ದಾಗ ಏಸುಕ್ರಿಸ್ತ, ಪ್ರವಾದಿ ಮಹಮದ್ ಪೈಗಂಬರ್, ಬಸವಣ್ಣ ಮುಂತಾದವರು ಆಯಾ ಕಾಲಘಟ್ಟದಲ್ಲಿ ಈ ಸಮುದಾಯಗಳ ಮಧ್ಯೆ ಇದ್ದ ಅಡ್ಡಗೋಡೆಯನ್ನು ಕೆಡವಿ ನಾವೆಲ್ಲಾ ಒಂದು ಎಂಬ ಭಾವನೆ ಮೂಡಿಸಿದ್ದರು ಎಂದು ವಿಶ್ಲೇಷಿಸಿದರು.
ಜಾತಿ, ಮತ, ಕುಲ, ಗೋತ್ರ, ಧರ್ಮ ಇವೆಲ್ಲವನ್ನು ಮೀರಿ ಒಂದು ಮಾನವೀಯ ಮೌಲ್ಯದ ಮನುಷ್ಯತ್ವದ ಧರ್ಮ ಪಾಲಿಸಿಕೊಂಡು ಹೋಗಬೇಕು ಎಂದು ಎಲ್ಲ ದಾರ್ಶನಿಕರು ಸಂದೇಶ ನೀಡಿದ್ದಾರೆ ಎಂದು ಹೇಳಿದರು.
ಈ ಅವತಾರ ಪುರುಷರು ಆಗಾಗ್ಗೆ ಈ ಭೂಮಿ ಮೇಲೆ ಜನಿಸಿ ಎಲ್ಲರೂ ಒಂದೇ ಎಂಬ ಸಮ ಸಮಾಜ ನಿರ್ಮಾಣ ಮಾಡಲು ಕಾರಣೀಭೂತರಾಗಿದ್ದಾರೆ. ಧರ್ಮದ ಹೆಸರಿನಲ್ಲಿ ತಿದ್ದಿತೀಡಿ ಜಾಗೃತಿ ಮೂಡಿಸಿದ ಪರಿಣಾಮ ದೇಶದಲ್ಲಿ ಇಂದು ಧಾರ್ಮಿಕತೆ ಕಾಣಲು ಸಾಧ್ಯವಾಗಿದೆ ಎಂದರು.
ಸಮಾಜದ ಕಟ್ಟುಪಾಡುಗಳು ಇಂದು ಮಕ್ಕಳನ್ನು ಬಂಧಿಸುತ್ತಿದ್ದು, ಇಂತಹ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳು ಪುನಹಾ ವಿಶ್ವಮಾನವರಾಗಲು ಕಾರಣವಾಗಿದೆ ಎಂದು ಶ್ಲಾಘಿಸಿದರು.
ಜಮಾಅತೆ ಇಸ್ಲಾಮಿ ಹಿಂದ್ ರಿಯಾಜ್ ಅಹಮದ್, ನಿವೃತ್ತ ಪ್ರಾಚಾರ್ಯ ಗಫಾರ್ ಬೇಗ್, ಲಯನ್ಸ್ ಅಧ್ಯಕ್ಷ ಕುಮಾರ್, ಸಿಡಿಎ ಅಧ್ಯಕ್ಷ ನಯಾಜ್ ಅಹಮದ್, ಪ್ರಮುಖರಾದ ಡಾ.ಮಹಮದ್ ಸಾಲಿ ಉಪಸ್ಥಿತರಿದ್ದರು. ಜಿಲ್ಲಾ ಸಂಘದ ರಿಜ್ವಾನ್ ಅಹಮದ್ ಸ್ವಾಗತಿಸಿದರು.