ಮೈಸೂರು: ಗ್ಯಾರಂಟಿ ಯೋಜನೆ ಕುರಿತು ಪ್ರತಿಪಕ್ಷಗಳು ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗುಡುಗಿದರು.
ತುಮಕೂರಿನ ಸಿದ್ಧಾರ್ಥ ಎಜುಕೇಷನ್‌ಸೊಸೈಟಿಯ ವತಿಯಿಂದ ಸುಭಾಷ್‌ನಗರದಲ್ಲಿ ನಿರ್ಮಾಣಗೊಂಡಿರುವ ‘ಕ್ವೆಸ್ಟ್ ಅಕಾಡೆಮಿ’ಯನ್ನು ಉದ್ಘಾಟಿಸಿ ಮಾತನಾಡಿದರು.
ಸರ್ಕಾರಿ ನೌಕರರು, ತೆರಿಗೆದಾರರ ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡಲಾಗಿದೆ. ಬಡವರ ಬಿಪಿಎಲ್ ಕಾರ್ಡ್ ರದ್ದು ಮಾಡಿಲ್ಲ. ಹಿಂದೆ ಉಚಿತವಾಗಿ 7 ಕೆಜಿ ಅಕ್ಕಿ ಕೊಟ್ಟಿದ್ದು ಸಿದ್ದರಾಮಯ್ಯ. 7ರಿಂದ 5 ಕೆಜಿ ಇಳಿಸಿದ್ದು ಬಿ.ಎಸ್.ಯಡಿಯೂರಪ್ಪ. ಈಗ 10 ಕೆಜಿ ಅಕ್ಕಿ ಕೊಡುತ್ತಿರುವುದು ಸಿದ್ದರಾಮಯ್ಯ ಎಂದು ಗುಡುಗಿದರು.
ಅತ್ತೆ-ಸೊಸೆ ಜಗಳವಾಡಲು ಗೃಹಲಕ್ಷ್ಮಿ ಯೋಜನೆ ತಂದಿಲ್ಲ. ದುಡ್ಡಿಲ್ಲದೆಯೇ ಇದನ್ನು ಜಾರಿಯೂ ಮಾಡಿಲ್ಲ. ಈ ಯೋಜನೆಯಡಿ 32 ಸಾವಿರ ಕೋಟಿ ರೂ. ಮಹಿಳೆಯರಿಗೆ ಕೊಡಲಾಗುತ್ತಿದೆ. ಗ್ಯಾರಂಟಿ ಯೋಜನೆಯನ್ನು ಪ್ರತಿಪಕ್ಷಗಳು ನೇರವಾಗಿ ವಿರೋಧಿಸುತ್ತಿಲ್ಲ. ಮಹಿಳೆಯರ, ಬಡವರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ ಎಂಬ ಕಾರಣಕ್ಕೆ ನೆಪ ಹುಡುಕುತ್ತಿವೆ ಎಂದು ಹರಿಹಾಯ್ದರು.
ಆಹಾರ ಭದ್ರತಾ ಕಾಯ್ದೆ ಜಾರಿ ಮಾಡಿದ್ದು ಬಿಜೆಪಿಯಲ್ಲ, ಕಾಂಗ್ರೆಸ್ ಪಕ್ಷ. ಪ್ರಧಾನಿಯಾಗಿದ್ದ ಮನಮೋಹನ ಸಿಂಗ್ ಅವರು ಇದನ್ನು ಜಾರಿ ಮಾಡಿದಾಗ ಬಿಜೆಪಿಯ ಮುರುಳಿ ಮನೋಹರ್ ಜೋಶಿ ಈ ಕಾಯ್ದೆಯನ್ನು ‘ವೋಟ್ ಭದ್ರತಾ ಕಾಯ್ದೆ’ ಎಂದು ವಿರೋಧಿಸಿದ್ದರು ಎಂದರು.
ಜಾತಿ ನೋಡು, ಓಟು ಹಾಕು ಅಷ್ಟೆ:
ಹೇಳಿಕೊಳ್ಳೋಕೆ ವಿದ್ಯಾವಂತರು. ಆದರೆ, ‘ಇವನು ನಮ್ ಜಾತಿಯವನಲ್ಲ, ವೋಟು ಹಾಕೋದು ಬೇಡ’ ಅಂತಾರೆ. ಮತ್ತೆ ಕೆಲವರು ‘ಇವನು ನಮ್ಮ ಜಾತಿಯವನು, ಅದಕ್ಕೆ ವೋಟು ಹಾಕಿ’ ಅಂತಾರೆ. ಅವನಿಗೆ ರಾಜಕೀಯ ಪ್ರಜ್ಞೆ, ತಿಳಿವಳಿಕೆ ಇದೆಯೋ, ಇಲ್ವೋ ಗೊತ್ತಿಲ್ಲ. ಕಾಳಜಿ ಇದೆಯೋ, ಇಲ್ವೋ ಗೊತ್ತಿಲ್ಲ. ಜಾತಿ ನೋಡು, ಓಟು ಹಾಕು ಅಷ್ಟೆ. ಇದಕ್ಕೆ ವಿದ್ಯೆ ಕಲಿಬೇಕಾ? ಎಂದು ಜರಿದರು.
ಇದೇ ಸಂದರ್ಭದಲ್ಲಿ ಶಾಸಕರೊಬ್ಬರ ಮಾತನ್ನು ಸ್ಮರಿಸಿದ ಸಿಎಂ, ಅವರು ರಾತ್ರಿ ಮಲಗುವಾಗಲೂ ಕೈ ಮುಗಿಯುತ್ತಲೇ ಮಲಗೋದಂತೆ. ಕೈ ಮುಗಿಯೋದು ರೂಢಿ ಆಗಿಹೋಗಿತ್ತು. ಇಂತಹವರೆಲ್ಲ ಈಗ ರಾಜಕಾರಣಕ್ಕೆ ಬರುತ್ತಿದ್ದಾರೆ. ವಿದ್ಯಾವಂತ ಜಾತಿವಾದಿಗಳಿಂದ ಇಂಥವರು ಬರ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಸಿದ್ಧಾರ್ಥ ಸಂಸ್ಥೆಯ ಅಧ್ಯಕ್ಷ, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿ, ದನದ ಕೊಟ್ಟಿಯಲ್ಲಿ ಪ್ರಾರಂಭವಾದ ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಈಗ 85 ವಿದ್ಯಾಸಂಸ್ಥೆಗಳಿವೆ. 36 ಸಾವಿರ ಇಂಜಿನಿಯರಿಂಗ್ ಪದವಿ, 6 ಸಾವಿರ ವೈದ್ಯಕೀಯ ಪದವಿ ಸೇರಿದಂತೆ ಲಕ್ಷಾಂತರ ವಿದ್ಯಾರ್ಥಿಗಳು ಶಿಕ್ಷಣ ಪಡೆದುಕೊಂಡಿದ್ದಾರೆ. ಗ್ರಾಮಾಂತರ ಪ್ರದೇಶದಲ್ಲಿ 40 ಪ್ರೌಢಶಾಲೆಗಳಿವೆ. ಗುಣಮಟ್ಟ ಶಿಕ್ಷಣ ನೀಡಲು ನಾವು ಬದ್ಧ ಎಂದರು.
ಶಾಸಕ ತನ್ವೀರ್ ಸೇಠ್ ಮಾತನಾಡಿ, ಖಾಸಗಿ ಸಂಸ್ಥೆಗಳು ನೀಡುತ್ತಿರುವ ಶಿಕ್ಷಣಕ್ಕೆ ದರ ನಿಗದಿ ಪಡಿಸಬೇಕಿದೆ. ಹೊಸ ರಾಜ್ಯ ಶಿಕ್ಷಣ ನೀತಿಯಡಿ ಅಂಕಕ್ಕಿಂತ ಮೌಲ್ಯಾಧಾರಿತ ಶಿಕ್ಷಣ ಆದ್ಯತೆ ನೀಡಬೇಕಿದೆ. ಅದಕ್ಕಾಗಿ ಯೋಜನೆ ರೂಪಿಸಬೇಕು. ಶಿಕ್ಷಣ ಮತ್ತು ಆರೋಗ್ಯ ಒತ್ತು ನೀಡಬೇಕಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್, ಶಾಸಕ ಎ.ಆರ್.ಕೃಷ್ಣಮೂರ್ತಿ, ಶಿಕ್ಷಣ ತಜ್ಞ ಡಾ.ಅಬ್ರಾಹಂ ಎಬನೇಜರ್, ಸಂಸ್ಥೆಯ ನಿರ್ದೇಶಕಿ ಕನ್ನಿಕಾಪರಮೇಶ್ವರಿ, ಆಡಳಿತ ಮಂಡಳಿಯ ಸದಸ್ಯ, ಮಾಜಿ ಸಚಿವ ಎಚ್.ಕೆ.ಕುಮಾರಸ್ವಾಮಿ, ಎಂಎಲ್‌ಸಿ ಡಾ.ಡಿ.ತಿಮ್ಮಯ್ಯ ಇತತರರಿದ್ದರು.