ಕೋಲಾರ: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರಲು ಪಣತೊಟ್ಟಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಸೆಗೆ
ಜಿಲ್ಲೆಯ ಕಾಂಗ್ರೆಸ್ಸಿಗರಲ್ಲಿನ ದಾಯಾದಿ ಮತ್ಸರ ಅಡ್ಡಿಯಾಗುವ ಸಾಧ್ಯತೆಗಳಿವೆ ಎಂಬುದು ನಿಷ್ಠಾವಂತ ಕಾರ್ಯಕರ್ತರಲ್ಲಿ ದುಗುಡ ಉಂಟುಮಾಡಿದೆ.
ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಮತ್ತು ವಿರೋಧಿ ಬಣದ ನಡುವೆ ಕಳೆದ 10 ವರ್ಷಗಳಿಂದ ನಡೆದಿರುವ ಜಟಾಪಟಿ ಏನೇ ಮಾಡಿದರೂ ನಿಂತಿಲ್ಲ, ಲೋಕಸಮರದಲ್ಲಿ ಮುನಿಯಪ್ಪ ಅವರನ್ನು ಸೋಲಿಸಿ ಸೇಡು ತೀರಿಸಿಕೊಂಡ ವಿರೋಧಿಗಳಿಗೆ ಇನ್ನೂ ಸಮಾಧಾನವಾಗಿಲ್ಲ, ಸೋಲಿನಿಂದ ಕಂಗೆಟ್ಟಿರುವ ಮುನಿಯಪ್ಪ 2023ರಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಪ್ರತೀಕಾರ ತೀರಿಸಿಕೊಳ್ಳಲು ರಣತಂತ್ರ ಹೆಣೆಯುತ್ತಿರುವ ಸುಳಿವು ಸಿಕ್ಕಿರುವುದರಿಂದ ಡ್ಯಾಮೇಜ್ ಕಂಟ್ರೋಲ್ಗಾಗಿ ವಿರೋಧಿಗಳು ಪ್ರತಿತಂತ್ರ ಹೆಣೆಯುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
ಮುನಿಯಪ್ಪ ಅವರೊಂದಿಗೆ ರಾಜಿ ಮಾಡಿಕೊಂಡರೂ ಚುನಾವಣೆ ಸಂದರ್ಭದಲ್ಲಿ ನಮ್ಮ ಸೋಲಿಗೆ ಎಲ್ಲ ಸಂಚು ರೂಪಿಸುವುದು ಗ್ಯಾರಂಟಿ, ಜತೆಗೆ ಪಕ್ಷದ ವರಿಷ್ಠರ ಮೇಲೆ ಒತ್ತಡ ತಂದು ಟಿಕೆಟ್ ತಪ್ಪಿಸುವುದಕ್ಕೆ ಯತ್ನಿಸುತ್ತಾರೆ, ಹಾಗಾಗಿ ಕೋಲಾರ ಜಿಲ್ಲೆಯ ವಿಚಾರದಲ್ಲಿ ಮುನಿಯಪ್ಪ ಆಟ ನಡೆಯದಂತೆ ನೋಡಿಕೊಳ್ಳಲು ಶಾಸಕ ಕೆ.ಆರ್.ರಮೇಶ್ ಕುಮಾರ್, ಎಂಎಲ್ಸಿ ನಾಸಿರ್ ಅಹಮದ್ ಇನ್ನಿತರರು ನಿರ್ಧರಿಸಿದ್ದು, ವಿಷಯ ಡಿಕೆಶಿ ಕಿವಿಗೆ ಬಿದ್ದಿರುವುದರಿಂದ ದಾಯಾದಿ ಕಲಹಕ್ಕೆ ಪರಿಹಾರ ಕಂಡುಕೊಳ್ಳಲಾಗದೆ ಹೈರಾಣಾಗಿದ್ದಾರೆ ಎನ್ನಲಾಗಿದೆ.
ಜಿಪಂ, ತಾಪಂ ಚುನಾವಣೆಯಲ್ಲಿ ಪಕ್ಷಕ್ಕೆ ಬಹುಮತ ಸಿಕ್ಕಿದಲ್ಲಿ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಅಧಿಕಾರಕ್ಕೆ ಬರಲು ಅನುಕೂಲವಾಗುತ್ತದೆ, ಆದರೆ ಜಿಲ್ಲೆಯ ಮುಖಂಡರು ಒಂದಾಗುವ ಲಕ್ಷಣ ಕಂಡು ಬರುತ್ತಿಲ್ಲ ಎಂದು ಆಪ್ತರಲ್ಲಿ ಹೇಳಿಕೊಂಡಿರುವ ಶಿವಕುಮಾರ್, ಸಮಸ್ಯೆ ಬಗೆಹರಿಸಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜವಾಬ್ದಾರಿ ವಹಿಸಬಹುದು ಎಂದು ತಿಳಿದುಬಂದಿದೆ.
ಮುನಿಯಪ್ಪ ಕೆಜಿಎ್ ಮತ್ತು ಮಾಲೂರು ಹೊರತುಪಡಿಸಿ ಉಳಿದ ಎಲ್ಲ ಕ್ಷೇತ್ರಗಳಲ್ಲೂ ವಿರೋಧಿಗಳನ್ನು ಸೋಲಿಸಬೇಕು, ಇಲ್ಲವೇ ಟಿಕೆಟ್ ತಪ್ಪಿಸಬೇಕೆಂಬ ಉದ್ದೇಶ ಹೊಂದಿರುವುದರಿಂದ ಮತ್ಸರಕ್ಕೆ ತೆರೆ ಎಳೆಯಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ.
ರಾಜಿ ಸಂಧಾನಕ್ಕಾಗಿಯೇ ತುಮಕೂರಿನಲ್ಲಿ ನಡೆದ ಸಭೆಗೆ ಜಿಲ್ಲೆಯ ಎಲ್ಲ ಮುಖಂಡರನ್ನು ಆಹ್ವಾನಿಸಲಾಗಿತ್ತು. ಮುನಿಯಪ್ಪ ಹಳೇ ವಿಚಾರ ಕೆದಕದೆ ಹೋಗಿದ್ದರೆ ಪರಿಹಾರ ಸಿಗುತ್ತಿತ್ತು, ಶಿವಕುಮಾರ್ ಮುನಿಯಪ್ಪ ಅವರಿಗೆ ಮಾತನಾಡಲು ಅವಕಾಶ ನೀಡಿದ್ದರಿಂದ ಸಮಸ್ಯೆ ಸಮಸ್ಯೆಯಾಗಿಯೇ ಉಳಿಯುವಂತಾಗಿದೆ ಎಂದು ನಿಷ್ಠಾವಂತ ಕಾರ್ಯಕರ್ತರ ಅಭಿಪ್ರಾಯವಾಗಿದೆ.
ಜಿಲ್ಲೆಯಲ್ಲಿ ಕಾಂಗ್ರೆಸ್ ಗೆಲ್ಲಿಸಲು ಮುನಿಯಪ್ಪ ಬಂಟರಿಗೆ ಅಧಿಕಾರ ನೀಡಬಾರದು, ಟಿಕೆಟ್ ಹಂಚಿಕೆಯ ವಿಷಯದಲ್ಲಿ ಮುನಿಯಪ್ಪ ಮೂಗು ತೂರಿಸಬಾರದು, ಮುನಿಯಪ್ಪ ವಿಧಾನಸಭಾ ಚುನಾವಣೆಗೆ ಕೋಲಾರ ಜಿಲ್ಲೆಯ ಯಾವುದೇ ಕ್ಷೇತ್ರದಿಂದಲೂ ಸ್ಪರ್ಧೆ ಮಾಡಬಾರದು, ಚುನಾವಣೆ ವಿಷಯದಲ್ಲಿ ಹಸ್ತಕ್ಷೇಪ ಮಾಡಲು ಅವಕಾಶ ನೀಡದಿದ್ದರೆ ಜಿಲ್ಲೆಯ 6 ಕ್ಷೇತ್ರ ಮಾತ್ರವಲ್ಲದೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ ಕೈ ಜಯಭೇರಿಯ ಹೊಣೆ ಹೋರುವುದಾಗಿ ರಮೇಶ್ ಕುಮಾರ್ ಬಣದ ಮುಖಂಡರು ಹೇಳಿರುವುದು ಡಿಕೆ ಶಿವಕುಮಾರ್‌ಗೆ ಕಬ್ಬಿಣದ ಕಡಲೆಯಾಗಿ ಪರಿಣಮಿಸಿದೆ ಎನ್ನಲಾಗಿದೆ.
ಬೆಕ್ಕಿಗೆ ಗಂಟೆ ಕಟ್ಟುವವರ‌್ಯಾರು?: ಶ್ರೀನಿವಾಸಪುರದಲ್ಲಿ ರಮೇಶ್‌ಕುಮಾರ್ ವಿರುದ್ಧ ಮಾಜಿ ಶಾಸಕ ವೆಂಕಟಶಿವಾರೆಡ್ಡಿ, ಮುಳಬಾಗಿಲು ಕ್ಷೇತ್ರದಲ್ಲಿ ತಾವೇ ಸ್ಪರ್ಧೆ ಮಾಡುವುದು, ಕೋಲಾರದಿಂದ ತಮಗೆ ಬೇಕಾದ ಆಪ್ತರನ್ನು ಕಣಕ್ಕಿಳಿಸಲು, ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ ತಪ್ಪು ತಿದ್ದಿಕೊಂಡು ಕ್ಷಮೆ ಕೇಳಿದಲ್ಲಿ ಅವರ ಪರ ಬ್ಯಾಟಿಂಗ್ ಆಡಲು ಮುನಿಯಪ್ಪ ಲೆಕ್ಕಾಚಾರ ಹಾಕಿದ್ದಾರೆ ಎನ್ನಲಾಗಿದ್ದು, ಮುಖಂಡರು ತಮ್ಮ ನಿಲುವುಗಳಿಗೆ ಅಂಟಿಕೊಂಡು ರಾಜಕೀಯ ಜಿದ್ದು ಬಿಡದಿದ್ದರೆ ಪಕ್ಷದ ಆಸೆಗೆ ಭಂಗ ಉಂಟಾಗುವ ಸಾಧ್ಯತೆಗಳಿವೆ ಎಂಬ ಕಾರಣಕ್ಕೆ ಬೆಕ್ಕಿಗೆ ಗಂಟೆ ಕಟ್ಟಲು ಸೂಕ್ತ ವ್ಯಕ್ತಿಗಾಗಿ ಸಿದ್ದರಾಮಯ್ಯ ಅವರ ಮೊರೆ ಹೋಗಿದ್ದು, ಈ ಕೆಲಸ ಮಾಡಲು ಸಿದ್ದರಾಮಯ್ಯ ಒಪ್ಪುತ್ತಾರೆಯೇ ನೋಡಬೇಕಿದೆ.