ರಮೇಶ ಜಹಗೀರದಾರ್ ದಾವಣಗೆರೆ : ಈ ಗ್ರಾಮದಲ್ಲಿ ಕುಡಿಯುವ ನೀರು ಸಮಸ್ಯೆಯೇ ಅಲ್ಲ. ನೀರಿನ ವಿಚಾರಕ್ಕೆ ಜಗಳ, ತಂಟೆಗೆ ಅವಕಾಶವಿಲ್ಲ. ‘ಮನೆ ಮನೆಗೆ ಗಂಗೆ’ ಹರಿದು ಬರುವುದರಿಂದ ಸಮೃದ್ಧ ಜಲ ಸಿರಿ ಇದೆ. ಜನ ಸಮುದಾಯದಲ್ಲಿ ಜಾಗೃತಿ ಮೂಡಿರುವುದರಿಂದ ನೀರು ಪೋಲಾಗುವುದಿಲ್ಲ. ನ್ಯಾಮತಿ ತಾಲೂಕು ದಾನಿಹಳ್ಳಿ ಗ್ರಾಮದ ವಿಶೇಷತೆ ಇದು. ಜಲಜೀವನ್ ಮಿಷನ್ ಯೋಜನೆಯನ್ನು ಅಚ್ಚುಕಟ್ಟಾಗಿ ಅನುಷ್ಠಾನಕ್ಕೆ ತರುವ ಮೂಲಕ ಇತರ ಹಳ್ಳಿಗಳಿಗೆ ಮಾದರಿಯಾಗಿದೆ. ಗಂಗನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ದಾನಿಹಳ್ಳಿ, ಅರೆಹಳ್ಳಿ, ಕೊಡಚಗೊಂಡನಹಳ್ಳಿ, ಬಿಜೋಗಟ್ಟೆ, ಕಂಕನಹಳ್ಳಿ ಜತೆಗೆ ಕಂಕನಹಳ್ಳಿ ತಾಂಡಾ ಮತ್ತು ದಾನಿಹಳ್ಳಿ ಕೊರಚರ ಕಾಲನಿಗಳು ಬರುತ್ತವೆ. ಈ ಪೈಕಿ ದಾನಿಹಳ್ಳಿ ಎದ್ದು ಕಾಣುವುದು ಅಲ್ಲಿ ಆಗಿರುವ ಜಲಕ್ರಾಂತಿಯಿಂದ. ದಾನಿಹಳ್ಳಿಯಲ್ಲಿ 1240 ಜನಸಂಖ್ಯೆ ಇದೆ. 275 ಮನೆಗಳಿವೆ. ಒಟ್ಟು 330 ನಲ್ಲಿ ಸಂಪರ್ಕಗಳನ್ನು ಜಲಜೀವನ್ ಮಿಷನ್ ಅಡಿಯಲ್ಲಿ ಕಲ್ಪಿಸಲಾಗಿದೆ. 2 ಕೊಳವೆ ಬಾವಿಗಳಿಂದ ನೀರು ಪಡೆಯಲಾಗುತ್ತದೆ. 1 ಲಕ್ಷ ಲೀಟರ್ ಸಾಮರ್ಥ್ಯದ ನೀರು ಸಂಗ್ರಹಣಾ ಟ್ಯಾಂಕ್ ಇದೆ. ಮನೆಗೆ ದೊರೆಯುವ ನೀರಿನ ಸೌಲಭ್ಯಕ್ಕೆ ತಿಂಗಳಿಗೆ 50 ರೂ. ಶುಲ್ಕ ವಿಧಿಸಲಾಗುತ್ತದೆ. ಗ್ರಾಮದ ದೇವಸ್ಥಾನ, ಶಾಲೆ, ಅಂಗನವಾಡಿ, ಹಾಲಿನ ಡೈರಿಗಳಿಗೆ ಉಚಿತವಾಗಿ ನೀರು ಒದಗಿಸಲಾಗುತ್ತಿದೆ. ಈ ಹಿಂದಿನ ವ್ಯವಸ್ಥೆಯಲ್ಲಿ ಹಳೇ ಪೈಪ್‌ಲೈನ್‌ಗಳಿದ್ದವು. ನೀರು ಪೋಲಾಗಿ ಚರಂಡಿ ಸೇರುತ್ತಿತ್ತು. ಕಳೆದ ಒಂದು ವರ್ಷದಿಂದ ಜಲಜೀವನ್ ಮಿಷನ್ ಯೋಜನೆ ಜಾರಿಗೆ ಬಂದಿದ್ದು ಅದರಿಂದ ಊರಿನ ಚಿತ್ರಣವೇ ಬದಲಾಗಿದೆ. ಎಚ್‌ಡಿ ಪೈಪ್‌ಗಳನ್ನು ಅಳವಡಿಸಲಾಗಿದೆ. ದಿನದ 24 ಗಂಟೆಯೂ ಮನೆಯ ಮುಂದೆಯೇ ನೀರು ಸಿಗುತ್ತಿದೆ. ಜನರ ಮನೋಭಾವವೂ ಬದಲಾಗಿದೆ. ನೀರಿನ ಮಹತ್ವ ಅರಿತಿರುವ ಅವರು ಪೋಲು ಮಾಡುತ್ತಿಲ್ಲ. ಅಗತ್ಯವಿದ್ದಾಗ ಉಪಯೋಗಿಸಿ ವಾಲ್ವ್ ಬಂದ್ ಮಾಡುತ್ತಾರೆ. ಗ್ರಾಮದಲ್ಲಿ ಆಗಿರುವ ಸಾಧನೆಯನ್ನು ನೋಡಲು ಕೇಂದ್ರ ಮತ್ತು ರಾಜ್ಯ ತಂಡಗಳು, ನಬಾರ್ಡ್ ಇಂಜಿನಿಯರ್‌ಗಳು, ಜಿಲ್ಲಾ ಪಂಚಾಯಿತಿ ಅಧಿಕಾರಿಗಳ ತಂಡ ಈ ಗ್ರಾಮಕ್ಕೆ ಭೇಟಿ ನೀಡಿ ಯೋಜನೆಯ ಯಶಸ್ಸಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿವೆ. ... (ಬಾಕ್ಸ್) ಎಸ್‌ಎಂಎಸ್ ಸ್ಟಾರ್ಟರ್ ಆ್ಯಪ್ ನೀರು ಪೂರೈಕೆ ವ್ಯವಸ್ಥೆಯನ್ನು ತಂತ್ರಜ್ಞಾನದ ನೆರವಿನಿಂದ ನಿರ್ವಹಣೆ ಮಾಡಲಾಗುತ್ತಿದೆ. ಎಸ್‌ಎಂಎಸ್ ಸ್ಟಾರ್ಟರ್ ಆ್ಯಪ್ ಬಳಸಿ, ಇರುವ ಜಾಗದಿಂದಲೇ ಮೋಟಾರ್ ಆನ್ ಮತ್ತು ಆಫ್ ಮಾಡುವ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಪಂಪ್‌ಹೌಸ್‌ನಲ್ಲಿರುವ ವಿದ್ಯುತ್ ಬಾಕ್ಸ್‌ನಲ್ಲಿ ಒಂದು ಸಿಮ್ ಅಳವಡಿಸಲಾಗಿದ್ದು ನೀರುಗಂಟಿಯ ಫೋನ್‌ನಲ್ಲಿ ಸಂಬಂಧಿಸಿದ ಇನ್ನೊಂದು ಸಿಮ್ ಇದೆ. ಸಿಬ್ಬಂದಿ ಎಲ್ಲೇ ಇದ್ದರೂ ಆ್ಯಪ್ ನೆರವಿನಿಂದ ಆ ಸ್ಥಳದಿಂದಲೇ ಆನ್ ಅಥವಾ ಆಫ್ ಮಾಡಬಹುದಾಗಿದೆ. ವಿದ್ಯುತ್ ಬೋರ್ಡ್‌ನಲ್ಲಿ ಫ್ಯೂಸ್ ಹೋಗಿದ್ದರೆ ಈ ಆ್ಯಪ್ ಮಾಹಿತಿ ನೀಡುತ್ತದೆ. ಪ್ಯಾನಲ್ ಬೋರ್ಡ್ ಅಥವಾ ಇನ್ನಿತರ ವಸ್ತುಗಳು ಕಳವಾದರೆ ಮೊಬೈಲ್‌ಗೆ ಮೆಸೇಜ್ ಬರುತ್ತದೆ. ಒಮ್ಮೆ ಆ ರೀತಿ ಆಗಿರುವ ಉದಾಹರಣೆಯೂ ಇದೆಯಂತೆ. ಕಳ್ಳತನದ ಪ್ರಯತ್ನ ನಡೆದಾಗ ಮೆಸೇಜ್ ಬಂದಿತ್ತು. ಕೂಡಲೇ ಸ್ಥಳಕ್ಕೆ ಧಾವಿಸಿದಾಗ ಕಳ್ಳರು ಓಡಿಹೋದರು ಎಂದು ನೀರುಗಂಟಿ ಪಿ.ಜಿ. ಉಮೇಶ್ ತಿಳಿಸಿದರು. ಧಾರವಾಡದಲ್ಲಿ ನಡೆದ ಕೃಷಿ ಮೇಳದಲ್ಲಿ ಭಾಗವಹಿಸಿದ್ದಾಗ ಆ್ಯಪ್ ಬಗ್ಗೆ ತಿಳಿಯಿತು. ಆ ತಂತ್ರಜ್ಞಾನವನ್ನು ನೀರಿನ ನಿರ್ವಹಣೆಗೆ ಬಳಸಿ ಯಶಸ್ವಿಯಾಗಿರುವುದಾಗಿ ಹೇಳಿದರು. ... (ಕೋಟ್) ಗ್ರಾ.ಪಂ. ಸದಸ್ಯರು, ಸಿಬ್ಬಂದಿ, ಗ್ರಾಮಸ್ಥರು ಆಸಕ್ತಿ ವಹಿಸಿದರೆ ಗುಣಮಟ್ಟದ ಕೆಲಸಗಳಾಗುತ್ತವೆ ಎಂಬುದಕ್ಕೆ ದಾನಿಹಳ್ಳಿ ಉದಾಹರಣೆಯಾಗಿದೆ. ಜಿಲ್ಲೆಯ 20 ಹಳ್ಳಿಗಳಲ್ಲಿ ಈ ರೀತಿ 24*7 ನೀರಿನ ಸೌಲಭ್ಯ ಕಲ್ಪಿಸುವ ಗುರಿ ಹೊಂದಲಾಗಿದೆ. ಇತರ ಗ್ರಾಮಗಳಿಗೆ ಇವು ಮಾದರಿಯಾಗಲಿವೆ. ಸುರೇಶ ಬಿ. ಇಟ್ನಾಳ್, ಜಿ.ಪಂ. ಸಿಇಒ (ಮಗ್‌ಶಾಟ್: ಸುರೇಶ ಬಿ. ಇಟ್ನಾಳ್)