ಜಿಲ್ಲೆ

ದಾಖಲೆಗಷ್ಟೇ ಕುಂದುಕೊರತೆ ಸಭೆ, ಸಮಸ್ಯೆ ಪರಿಹಾರಕ್ಕಲ್ಲ!

ಚಿಕ್ಕಬಳ್ಳಾಪುರ : ರೈತರ ಅರ್ಜಿ ವಿಲೇವಾರಿಯಲ್ಲಿ ಅನಗತ್ಯ ವಿಳಂಬ, ಬೆಳೆ ವಿಮೆ ಬಾಕಿ, ಕೆರೆ ಮತ್ತು ಕಾಲುವೆಗಳ ಅಕ್ರಮ ಒತ್ತುವರಿ, ಕೃಷಿ ಜಮೀನಿಗೆ ತೋಟದ ಸಮಸ್ಯೆ, ಒತ್ತುವರಿ ತೆರವಿನ ನೆಪದಲ್ಲಿ ಅಧಿಕಾರಿಗಳ ಕಿರುಕುಳ

ಇವು ಹಲವು ತಿಂಗಳ ಬಳಿಕ ನಗರದ ಅಂಬೇಡ್ಕರ್ ಭವನದಲ್ಲಿ ತಹಸೀಲ್ದಾರ್ ನಾಗಪ್ರಶಾಂತ್ ನೇತೃತ್ವದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರೈತರ ಕುಂದುಕೊರತೆ ಸಭೆಯಲ್ಲಿ ಕೇಳಿ ಬಂದ ಸಾಲು ಸಾಲು ಆರೋಪಗಳು.

ಕೇವಲ ದಾಖಲೆಗಾಗಿ ಸಭೆಗಳನ್ನು ನಡೆಸಿ, ಕೈ ತೊಳೆದುಕೊಳ್ಳಲಾಗುತ್ತಿದೆ, ಸಮಸ್ಯೆಗಳು ಮಾತ್ರ ಬಗೆಹರಿಯುತ್ತಿಲ್ಲ ಎಂದು ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ವಿರುದ್ಧ ಅಸಮಾಧಾನ ವ್ಯಕ್ತವಾಯಿತು.ರಸ್ತೆ ಸಮಸ್ಯೆಯಿಂದಾಗಿ ತಾಲೂಕಿನ ಅಂಗಟ್ಟದ ರೈತ ಮೋಹನ್ ಕುಮಾರ್ ಎಂಬಾತನ ಜಮೀನು ಬೀಳು ಬಿದ್ದಿದೆ, ಒಂದೆಡೆ ಕೆರೆ ನೀರಿನಿಂದ ತುಂಬಿದೆ, ಮತ್ತೊಂದೆಡೆ ರಿಯಲ್ ಎಸ್ಟೇಟ್ ವ್ಯವಹಾರಸ್ಥರು ಬಡಾವಣೆಗೆ ಕಾಂಪೌಂಡ್ ನಿರ್ಮಿಸಿದ್ದು ಓಡಾಡಲು ಸಾಧ್ಯವಾಗದೇ ತೊಂದರೆ ಅನುಭವಿಸುವಂತಾಗಿದೆ ಎಂದು ರೈತ ಸಂಘದ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಭೈರೇಗೌಡ ಅಸಮಾಧಾನ ವ್ಯಕ್ತಪಡಿಸಿದರು.

ಹಲವೆಡೆ ಕಾಲುವೆಗಳು ಅಕ್ರಮ ಒತ್ತುವರಿಯಾಗಿವೆ. ಆದರೆ ಸಣ್ಣ ನೀರಾವರಿ ಇಲಾಖೆ ಒತ್ತುವರಿ ತೆರವುಗೊಳಿಸಿಲ್ಲ. ಹೀಗಾದರೆ ಕೆರೆಗಳಿಗೆ ನೀರು ಹರಿದು ಬರುವುದಾದರೂ ಹೇಗೆ ಎಂದು ಪ್ರಶ್ನಿಸಿದರು.ಬಹುತೇಕ ಇಲಾಖೆಗಳಲ್ಲಿ ರೈತರ ಕೆಲಸವನ್ನು ಮಾಡಿಕೊಡಲು ನಿರ್ಲಕ್ಷಿಸಲಾಗುತ್ತಿದೆ. ಪೋಡಿ, ಬರಖಾಸ್ತ್ ಸೇರಿ ಹಲವು ಸೇವೆಗಳಿಗೆ ಅಲೆದಾಟ ತಪ್ಪುತ್ತಿಲ್ಲ. ಕೆಲವೆಡೆ ರೈತರ ದಿಕ್ಕು ತಪ್ಪಿಸಲಾಗುತ್ತಿದೆ ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಬಿ.ಎಚ್.ನರಸಿಂಹಯ್ಯ ಆರೋಪಿಸಿದರು.ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ವ್ಯವಸ್ಥಾಪಕ ಬಸವರಾಜ್, ರೈತ ಮುಖಂಡರಾದ ರಾಮಾಂಜಿನಪ್ಪ, ಮಂಜುನಾಥ್, ಮನೋಹರ್, ಮೋಹನ್, ವಾಸುದೇವ್, ಮುನಿರಾಜು ಮತ್ತಿತರರು ಇದ್ದರು.

ಅಲೆದಾಟ ತಪ್ಪಿಲ್ಲ...: ಕೃಷಿ ಇಲಾಖೆಯಲ್ಲಿ 2018-19ನೇ ಸಾಲಿನಲ್ಲಿ 26 ಕೋಟಿ ರೂ. ಬೆಳೆ ವಿಮೆ ಪೈಕಿ 22.75 ಕೋಟಿ ರೂ ಪಾವತಿಯಾಗಿದೆ, ಜಂಟಿ ಸರ್ವೇ ಹೆಸರಿನಲ್ಲಿ 3.25 ಕೋಟಿ ರೂ ಬಾಕಿ ಉಳಿಸಿಕೊಂಡಿದ್ದಾರೆ, ರೈತರು ನಿತ್ಯ ಕಚೇರಿಗೆ ಅಲೆದಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಭಕ್ತರಹಳ್ಳಿ ಭೈರೇಗೌಡ ಆಕ್ರೋಶ ವ್ಯಕ್ತಪಡಿಸಿದರು. ರೈತನ ಮದುವೆ ದಿನದಂದೇ ಅರಣ್ಯ ಇಲಾಖೆ ಕೃಷಿ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾಗಿರುವುದು ಅಂಗರೇಖನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿನಡೆದಿದೆ ಎಂದು ಕಿಡಿಕಾರಿದರು.

ಶಾಸಕ್ಕೆ ಸಭೆ...!: ಕುಂದುಕೊರತೆ ಸಭೆಯಲ್ಲಿ ರೇಷ್ಮೆ, ಆರೋಗ್ಯ. ಕಂದಾಯ, ಸಮಾಜ ಕಲ್ಯಾಣ ಸೇರಿ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು. ಆದರೆ, ಪ್ರಚಾರದ ಕೊರತೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ರೈತರೇ ಭಾಗವಹಿಸಿರಲಿಲ್ಲ. ಬಹುತೇಕ ಕುರ್ಚಿಗಳು ಖಾಲಿ ಇದ್ದವು. ಕೊನೇ ಕ್ಷಣದಲ್ಲಿ ಸಂಘಟನೆಯ ಮುಖಂಡರ ಮೂಲಕ ತರಾತುರಿಯಲ್ಲಿ ರೈತರನ್ನು ಕರೆಸಿಕೊಳ್ಳಲಾಯಿತು. ಹಲವು ಮಂದಿ ಸಭೆಯ ಬಗ್ಗೆ ಮಾಹಿತಿ ಇಲ್ಲದ ಹಿನ್ನೆಲೆಯಲ್ಲಿ ಸಮಸ್ಯೆಯನ್ನು ಹೇಳಿಕೊಳ್ಳಲು ಸಾಧ್ಯವಾಗಿಲ್ಲ. ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸುವ ಏಕಮಾತ್ರ ಉದ್ದೇಶದಿಂದ ಶಾಸ್ತ್ರಕ್ಕೆ ಸಭೆ ನಡೆಸಲಾಗಿದೆ ಎಂಬ ಆರೋಪ ಕೇಳಿ ಬಂತು.