ಜಿಲ್ಲೆ

ದಾಖಲೆಗಳೇ ಮೇಳೈಸಿದ ಅಥ್ಲೆಟಿಕ್ಸ್ ಕೂಟ: ಆಳ್ವಾಸ್‌ನ ಅಚ್ಚುಕಟ್ಟುತನ, ಸಿಂಥೆಟಿಕ್ ಟ್ರಾೃಕ್ ನಿರ್ವಹಣೆ ಕಾರಣ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆತಿಥ್ಯದಲ್ಲಿ ಮೂಡುಬಿದಿರೆ ಸ್ವರಾಜ್ಯ ಮೈದಾನದಲ್ಲಿ ನಡೆದ ನಾಲ್ಕು ದಿನಗಳ 81ನೇ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಪುರುಷರ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಕೂಟ ದಾಖಲೆಗಳ ಮೇಲೆ ದಾಖಲೆಗಳು ನಿರ್ಮಾಣವಾಗಿವೆ. ಆಳ್ವಾಸ್ ಸಂಸ್ಥೆಯ ಅಚ್ಚುಕಟ್ಟುತನ, ಡಾ.ಎಂ.ಮೋಹನ ಆಳ್ವರ ಪ್ರೋತ್ಸಾಹ ಧನ ಬಹುಮಾನ ಮತ್ತು ಸಿಂಥೆಟಿಕ್ ಟ್ರಾೃಕ್‌ನ ನಿರ್ವಹಣೆಯಲ್ಲಿ ಆಳ್ವಾಸ್ ಸಂಸ್ಥೆ ತೋರಿಸುತ್ತಿರುವ ಮುತುವರ್ಜಿ ಇದರ ಹಿಂದಿರುವ ಗುಟ್ಟು.
ಈ ಕ್ರೀಡಾಕೂಟದಲ್ಲಿ ಅಥ್ಲೀಟ್‌ಗಳಿಗೆ ಪ್ರೋತ್ಸಾಹ ನೀಡುವಲ್ಲಿಯಿಂದ ಅವರ ಟ್ರಾೃಕ್ ರೆಕಾರ್ಡ್ ತನಕ ಎಲ್ಲವನ್ನೂ ಶಿಸ್ತಿನಿಂದ ನಿಭಾಯಿಸಿದ ಆಳ್ವಾಸ್ ಸರ್ವತ್ರ ಪ್ರಶಂಸೆಗೊಳಗಾಯಿತು. ಸ್ವತಃ ಡಾ.ಎಂ.ಮೋಹನ ಆಳ್ವರೇ ಎಲ್ಲ ವಿಭಾಗಗಳ ಮೇಲುಸ್ತುವಾರಿ ವಹಿಸಿಕೊಂಡು ಕ್ರೀಡಾಕೂಟ ಯಾವುದೇ ಗೊಂದಲವಿಲ್ಲದೆ ನಡೆಯುವಲ್ಲಿ ಶ್ರಮಿಸಿದರು.

ಸ್ವರಾಜ್ಯ ಮೈದಾನದ ಸಿಂಥೆಟಿಕ್ ಟ್ರಾೃಕ್ ನಿರ್ವಹಣೆ ಸರ್ಕಾರದ ಮಟ್ಟದ್ದಾದರೂ, ಆಳ್ವಾಸ್ ಶಿಕ್ಷಣ ಸಂಸ್ಥೆ ಈ ವಿಷಯದಲ್ಲಿ ವಿಶೇಷ ಗಮನ ಹರಿಸಿತ್ತು. ಈ ಕ್ರೀಡಾಕೂಟಕ್ಕಾಗಿಯೇ ಸಿಂಥೆಟಿಕ್ ಟ್ರಾೃಕ್ ನವೀಕರಿಸಲಾಗಿತ್ತು. ಜತೆಗೆ ರಾಜ್ಯದ 23 ಸಿಂಥೆಟಿಕ್ ಟ್ರಾೃಕ್ ಪೈಕಿ ಅತ್ಯುನ್ನತ ದರ್ಜೆಯ ಮೈದಾನವಿದು ಎಂಬ ಹೆಗ್ಗಳಿಕೆಯೂ ಇಲ್ಲಿಯದು.

 ನಗದು ಬಹುಮಾನದ ಪ್ರೋತ್ಸಾಹ: ಕ್ರೀಡಾಕೂಟದಲ್ಲಿ ಪದಕ ವಿಜೇತರಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ವತಿಯಿಂದ ನಗದು ಪುರಸ್ಕಾರ ನೀಡಲಾಗುತ್ತಿದೆ. ಇದು ಕೂಡ ದಾಖಲೆಗಳ ಮೇಲೆ ದಾಖಲೆ ನಿರ್ಮಾಣವಾಗುತ್ತಿರುವುದಕ್ಕೆ ಕಾರಣವಾಗುತ್ತಿದೆ. ಮೊದಲ ಸ್ಥಾನ ಪಡೆದವರಿಗೆ 25 ಸಾವಿರ ರೂ, ದ್ವಿತೀಯ 15 ಸಾವಿರ ರೂ, ತೃತೀಯ 10 ಸಾವಿರ ರೂ. ನೀಡಲಾಗಿದೆ. ಕೂಟ ದಾಖಲೆ ನಿರ್ಮಿಸಿದವರಿಗೆ 25 ಸಾವಿರ ರೂ, ಸಮಗ್ರ ಪ್ರಶಸ್ತಿ ವಿಜೇತ ತಂಡಕ್ಕೆ 50 ಸಾವಿರ ರೂ, ರನ್ನರ್ ಅಪ್ 30 ಸಾವಿರ ರೂ, ತೃತಿಯ ಸ್ಥಾನ 20 ಸಾವಿರ ರೂ. ನಗದು ಪುರಸ್ಕಾರ ನೀಡುವುದಾಗಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಘೋಷಿಸಿದ್ದರು. ಈ ಪೋತ್ಸಾಹ ಅಥ್ಲೀಟ್‌ಗಳ ಸಾಧನೆಗೆ ಹೆಚ್ಚಿನ ಪುಷ್ಠಿ ನೀಡಿತು. ಈ ಪ್ರೋತ್ಸಾಹದ ಕಾರಣದಿಂದಲೇ ಸ್ಟೀಪಲ್‌ಚೇಸ್ ಸ್ಪರ್ಧೆಯಲ್ಲಿ ನೂತನ ಕೂಟ ದಾಖಲೆಯೊಂದಿಗೆ ಮೊದಲ ಆರು ಸ್ಥಾನ ಪಡೆದ ಸ್ಪರ್ಧಿಗಳು ಈ ಹಿಂದಿನ ಕೂಟ ದಾಖಲೆಯನ್ನು ಹಿಮ್ಮೆಟ್ಟಿಸುವಂಥ ನಿರ್ವಹಣೆ ತೋರಿಸಿದ್ದರು. 1500 ಮೀ. ಓಟದಲ್ಲಿ ಕೂಟ ದಾಖಲೆ ಸಹಿತ ಐವರು ಸ್ಪರ್ಧಿಗಳು ಈ ಹಿಂದಿನ ಸಾಧನೆ ಹಿಮ್ಮೆಟ್ಟಿಸಿದ್ದರು. ಒಟ್ಟು ಎಂಟು ಕೂಟ ದಾಖಲೆಗಳು ನಿರ್ಮಾಣಗೊಂಡಿದ್ದು ವಿಶೇಷ.

ಮಹಿಳೆಯರ ಕ್ರೀಡಾಕೂಟಕ್ಕೂ ಆತಿಥ್ಯ: ಈ ಮಧ್ಯೆ ಒಡಿಶಾದ ಭುವನೇಶ್ವರದಲ್ಲಿ ಜ.12ರಿಂದ ನಡೆಯಬೇಕಿದ್ದ ಮಹಿಳೆಯರ ಅಂತರ ವಿವಿ ಅಥ್ಲೆಟಿಕ್ಸ್ ಕೂಟ ಕೋವಿಡ್-19 ಉಲ್ಬಣ ಕಾರಣ ಮುಂದೂಡಲಾಗಿದೆ. ಈ ಕೂಟವನ್ನು ಆಳ್ವಾಸ್ ಆತಿಥ್ಯಕ್ಕೆ ನೀಡಿದರೆ ನಾವು ಸಿದ್ಧ ಎಂದು ಡಾ.ಎಂ.ಮೋಹನ ಆಳ್ವ ತಿಳಿಸಿದರು. ಈ ಹಿಂದೆ ಪುರುಷರ ಮತ್ತು ಮಹಿಳೆಯರ ಕ್ರೀಡಾಕೂಟ ಒಟ್ಟಾಗಿ ನಡೆಯುತ್ತಿತ್ತು. ಆದರೆ ಈ ಬಾರಿ ಬೇರೆ ಬೇರೆ ನಡೆಸಲಾಗುತ್ತಿದೆ. ನಾವು ಈ ಎರಡೂ ಕ್ರೀಡಾಕೂಟವನ್ನು ಏಕಕಾಲದಲ್ಲಿ ನಡೆಸಲು ಸಿದ್ಧರಿದ್ದೆವು. ಈಗ ಕೊಟ್ಟರೂ ಅದೇ ದಿನಕ್ಕೆ ನಾವು ಮಹಿಳೆಯರ ಕ್ರೀಡಾಕೂಟ ನಡೆಸಲು ಸಿದ್ಧ ಎಂದು ಹೇಳಿದರು.

ಅಥ್ಲೆಟಿಕ್ಸ್‌ನಂಥ ಕೂಟಗಳು ಒಮ್ಮೆ ಮುಂದೂಡಿದರೆ ಮತ್ತೆ ಆಯೋಜಿಸುವುದು ತುಂಬ ಕಷ್ಟ. ಅಥ್ಲೀಟ್‌ಗಳೂ ಈಗ ಇರುವ ಲಯ ಉಳಿಸಿಕೊಳ್ಳುವುದು ಕಷ್ಟವೇ. ಭುವನೇಶ್ವರದಲ್ಲಿ ನಡೆಯಬೇಕಿದ್ದ ಮಹಿಳೆಯರ ಅಥ್ಲೆಟಿಕ್ಸ್ ಕೂಟದ ಆತಿಥ್ಯ ಈಗಲೂ ನಮಗೆ ನೀಡಿದರೆ ನಾವು ಹಿಂದಿನ ದಿನಾಂಕಕ್ಕೇ ನಡೆಸಿಕೊಡುವೆವು. ಅಥ್ಲೀಟ್‌ಗಳು ತಮ್ಮ ಕ್ರೀಡೆಯ ಉಚ್ಛ್ರಾಯ ಲಯದಲ್ಲಿರುವಾಗಲೇ ಕ್ರೀಡಾಕೂಟಗಳು ನಡೆಯಬೇಕು. ಟಿಕೆಟ್‌ನಂಥ ಸಮಸ್ಯೆಗಳು ಎದುರಾದರೆ ಸ್ವಲ್ಪ ದಿನಾಂಕದಲ್ಲಿ ಬದಲಾವಣೆ ತರಲಿ. ಆದರೆ ಕ್ರೀಡಾಕೂಟ ನಿಲ್ಲುವಂತಾಗಬಾರದು.
ಡಾ.ಎಂ.ಮೋಹನ ಆಳ್ವ, ಅಧ್ಯಕ್ಷ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡುಬಿದಿರೆ