ಜಿಲ್ಲೆ

ದಾಖಲೆಗಳ ಸಂಗ್ರಹದಲ್ಲಿ 3ನೇ ಸ್ಥಾನ

ಮೈಸೂರು; ಡಿಜಿ ಲಾಕರ್‌ನಲ್ಲಿ ದಾಖಲೆಗಳ ಸಂಗ್ರಹದಲ್ಲಿ ರಾಜ್ಯದಲ್ಲೇ ಮೈಸೂರು ವಿಶ್ವವಿದ್ಯಾಲಯ 3ನೇ ಸ್ಥಾನದಲ್ಲಿದೆ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಆರ್.ಶಿವಪ್ಪ ತಿಳಿಸಿದರು.


ಡಿಜಿ ಲಾಕರ್ ರಾಷ್ಟ್ರೀಯ ಶೈಕ್ಷಣಿಕ ಠೇವಣಿ (ನ್ಯಾಡ್) ವತಿಯಿಂದ ಮಾನಸಗಂಗೋತ್ರಿ ವಿಜ್ಞಾನ ಭವನದಲ್ಲಿ ಗುರುವಾರ ಆಯೋಜಿಸಿದ್ದ ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಡಿಜಿ ಲಾಕರ್ ಜನರಿಗೆ ಸುಲಭವಾಗಿ ಲಭಿಸುತ್ತದೆ. ಬಹಳ ಸುರಕ್ಷಿತವಾಗಿ ದಾಖಲೆ ಸಂಗ್ರಹಿಸಿ ಲಾಕರ್‌ನಲ್ಲಿ ಇಡಬಹುದು. ಭದ್ರತೆ ಸಹ ಇರುತ್ತದೆ. ಈ ಸಂಗ್ರಹದಲ್ಲಿ ರಾಜ್ಯದಲ್ಲೇ ಮೈಸೂರು ವಿವಿ ಮೂರನೇ ಸ್ಥಾನದಲ್ಲಿದೆ. ಮೊದಲ ಸ್ಥಾನ ತಲುಪಲು ಕ್ರಮ ವಹಿಸಲಾಗಿದೆ ಎಂದರು.


ಈಗಾಗಲೇ 12 ಲಕ್ಷ ದಾಖಲೆ ಅಪ್‌ಲೋಡ್ ಮಾಡಲಾಗಿದೆ. ಸ್ನಾತಕ ಪದವಿಯ 3 ಲಕ್ಷ ದಾಖಲೆಗಳು ಹಾಗೂ ಸ್ನಾತಕೋತ್ತರ ಪದವಿಯ 9 ಲಕ್ಷ ದಾಖಲೆಗಳು ಅಪ್‌ಲೋಡ್ ಆಗಿವೆ. ವಿವಿಯು ವಿದ್ಯಾರ್ಥಿಗಳ ಅಗತ್ಯಕ್ಕೆ ತಕ್ಕಂತೆ ಸೌಲಭ್ಯ ನೀಡಲು ಸದಾ ಸಿದ್ಧವಿದೆ. ಬದಲಾದ ಕಾಲಘಟ್ಟಕ್ಕೆ ನಾವೆಲ್ಲರೂ ತೊಡಗಿಸಿಕೊಂಡು ಕೆಲಸ ಮಾಡಬೇಕಿದೆ ಎಂದರು.


ವಿವಿಧ ಸಂಸ್ಥೆಗಳು, ವಿವಿಗಳು ಹಾಗೂ ಸರ್ಕಾರದ ಮಟ್ಟದಿಂದ ಆಗುವ ಅನೇಕ ವಿಳಂಬಗಳಿಗೆ ಡಿಜಿ ಲಾಕರ್ ಪರಿಹಾರ ಒದಗಿಸಬಲ್ಲದು. ಯಾವುದೋ ಸರ್ಟಿಫಿಕೇಟ್ ಅಥವಾ ಇನ್ಯಾವುದೋ ಪ್ರಮಾಣಪತ್ರ ವಿದ್ಯಾರ್ಥಿಗಳಿಗೆ ತುರ್ತಾಗಿ ಬೇಕಿರುತ್ತದೆ. ಕೆಲಸಕ್ಕೆ ಸೇರಲು ನಿಗದಿತ ಸಮಯಕ್ಕೆ ಸಲ್ಲಿಸಬೇಕಾಗಿರುತ್ತದೆ. ಆದರೆ ಸಮಯಕ್ಕೆ ಸರಿಯಾಗಿ ಅದು ಸಿಗುವುದಿಲ್ಲ. ಇದಕ್ಕೆ ಪರಿಹಾರವಾಗಿರುವ ಡಿಜಿ ಲಾಕರ್ ಮೂಲಕ ಸುಲಭವಾಗಿ ವಿದ್ಯಾರ್ಥಿಗಳು ತಮಗೆ ಬೇಕಾದ ದಾಖಲೆ ಪಡೆದುಕೊಳ್ಳಬಹುದು ಎಂದರು.


ಇ- ಆಡಳಿತದ ಮೂಲಕ ಹಲವು ಸೌಲಭ್ಯ ಕಲ್ಪಿಸಲಾಗುತ್ತಿದೆ. ಪ್ರಜಾಪ್ರಭುತ್ವದಲ್ಲಿ ವಿವಿಧ ಸೌಲಭ್ಯಗಳು ಜನರ ಮನೆ ಬಾಗಿಲಿಗೆ ಹೋಗಬೇಕು ಎಂದು ಸಿಎಂ ಆಗಿದ್ದ ರಾಮಕೃಷ್ಣ ಹೆಗಡೆ ಹಲವು ಯೋಜನೆ ಹಮ್ಮಿಕೊಂಡಿದ್ದನ್ನು ನಾವು ಸ್ಮರಿಸಬಹುದು. ಹೀಗಾಗಿ ಯಾವುದೇ ಪಾಲಿಸಿಯನ್ನು ನಾವು ಮೊದಲು ಅರ್ಥ ಮಾಡಿಕೊಳ್ಳಬೇಕು. ವಿಳಂಬ ಇಲ್ಲದೆ ಪಾರದರ್ಶಕವಾಗಿ ಜನರಿಗೆ ಅನುಕೂಲ ಆಗುವ ಕೆಲಸ ಮಾಡಬೇಕು ಎಂದರು.


ನ್ಯಾಡ್ ಪ್ರಾಜೆಕ್ಟ್ ಡೈರೆಕ್ಟರ್ ಎಚ್.ಎಂ.ಶ್ರೀವ್ಯಾಸ ಮಾತನಾಡಿ, ರಾಜ್ಯ ಸರ್ಕಾರ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಇ- ಆಡಳಿತದಲ್ಲೂ ಸಾಧನೆ ಮಾಡಲಾಗಿದೆ. ಗೂಗಲ್ ಡ್ರೈವ್ ರೀತಿ ಡಿಜಿಟಲ್ ಲಾಕರ್ ಭದ್ರತೆ ಒದಗಿಸುತ್ತದೆ. ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳಿಗೆ ಲಾಕರ್ ರಕ್ಷಣೆ ಒದಗಿಸುತ್ತದೆ. ಈಗಾಗಲೇ 30 ಕೋಟಿ ದಾಖಲೆ ಸಂಗ್ರಹಿಸಿ ಸುರಕ್ಷಿತವಾಗಿ ಇಡಲಾಗಿದೆ ಎಂದರು.
ಡಿಜಿಟಲ್ ಇಂಡಿಯಾಗೂ ಇದು ಪೂರಕವಾಗಿ ಕೆಲಸ ಮಾಡುತ್ತದೆ. ರೈತ ವಿದ್ಯಾನಿಧಿಗೆ ಎಷ್ಟೋ ಜನರು ಅರ್ಜಿ ಹಾಕಿಲ್ಲ. ಆದರೂ ಅವರಿಗೆ ಹಣ ಸೇರಿತು. ಇದಕ್ಕೆ ಕಾರಣ ಡಿಜಿ ಲಾಕರ್. ರಾಜ್ಯ ಬಿಟ್ಟು ಬೇರೆ ಯಾವ ರಾಜ್ಯದಲ್ಲೂ ಇದು ಇಲ್ಲ. ನಮ್ಮ ಬಳಿ 80 ಲಕ್ಷ ರೈತರ ದತ್ತಾಂಶದಿಂದ ಇದು ಸಾಧ್ಯವಾಯಿತು ಎಂದರು.


ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ಸಿಡಿಸಿ ನಿರ್ದೇಶಕ ಪ್ರೊ.ಲೋಕನಾಥ್, ಪ್ರಾಜೆಕ್ಟ್ ಮ್ಯಾನೇಜರ್ ಪಿ.ಎನ್.ಕಾರ್ತಿಕ್, ಪ್ರೊ.ರಮೇಶ್ ಕುಮಾರ್ ಸೇರಿದಂತೆ ಇತರರು ಭಾಗವಹಿಸಿದ್ದರು.