ಕೊಕಟನೂರ: ಗ್ರಾಮದಲ್ಲಿ ನರೇಗಾ ಯೋಜನೆಯಡಿ ನಿರ್ಮಿಸಲಾಗುತ್ತಿರುವ ಪವಿತ್ರ ವನ ಪರಿಶೀಲನೆ, ಬಾಗಿನ ಅರ್ಪಣೆ ಹಾಗೂ ಗ್ರಾಪಂ ಕಟ್ಟಡ ಅಡಿಗಲ್ಲು ನೆರವೇರಿಸಲು ಅ.5 ರಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಆಗಮಿಸಲಿರುವ ಹಿನ್ನೆಲೆಯಲ್ಲಿ ಸ್ಥಳೀಯ ಗ್ರಾಪಂ ಕಾರ್ಯಾಲಯದಲ್ಲಿ ಶುಕ್ರವಾರ ಪೂರ್ವಭಾವಿ ಸಭೆ ಜರುಗಿತು. ತಾಪಂ ಇಒ ಶೇಖರ ಕರಿಬಸಪ್ಪಗೋಳ ಮಾತನಾಡಿ, ಇಲ್ಲಿಯವರೆಗೆ ಗ್ರಾಪಂ ವತಿಯಿಂದ ಗ್ರಾಮದಲ್ಲಿ ಕೈಗೊಂಡ ಕಾಮಗಾರಿಗಳ ಫೋಟೋ, ನೀಲಿನಕ್ಷೆ ಸಮೇತ ದಾಖಲೆಗಳ ಫೈಲ್ ಮತ್ತು ಗ್ರಾಮ ಅಭಿವೃದ್ಧಿಗಾಗಿ ಪ್ರಪೋಸಲ್ ತಯಾರಿಸಿಕೊಳ್ಳಬೇಕು ಎಂದು ಗ್ರಾಪಂ ಅಧಿಕಾರಿಗಳಿಗೆ ಸೂಚಿಸಿದರು. ಜಿಪಂ ಎಇಇ ಈರಣ್ಣ ವಾಲಿ ಮಾತನಾಡಿ, ಗ್ರಾಪಂ ಸದಸ್ಯರು ಪಕ್ಷ ಬೇಧ ಮರೆತು ಗ್ರಾಮ ಅಭಿವೃದ್ಧಿಗೆ ಶ್ರಮಿಸಬೇಕು, ರಾಜ್ಯ ಮಂತ್ರಿಗಳು ಬಂದಾಗ ಅಸ್ತವ್ಯಸ್ತವಾಗಬಾರದು. ಗ್ರಾಮದಲ್ಲಿರುವ ಮುಖ್ಯರಸ್ತೆ ಪಕ್ಕದಲ್ಲಿರುವ ಗಿಡಗಂಟಿಗಳನ್ನು ತೆಗೆದು ಸುಗಮ ಸಂಚಾರಕ್ಕೆ ಅನುಕೂಲ ಮಾಡಬೇಕು ಎಂದರು.
ಬಳಿಕ ಗ್ರಾಪಂ ವತಿಯಿಂದ ಇಲ್ಲಿಯವರೆಗೆ ಕೈಗೊಂಡ ಕಾಮಗಾರಿಗಳ ಎಲ್ಲ ದಾಖಲೆಗಳನ್ನು ತಾಲೂಕಾಧಿಕಾರಿಗಳು ಪರಿಶೀಲಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಳಾಸಾಹೇಬ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಬಾಬುರಾವ್ ಪರಾಂಡೆ, ಮಹೇಶ ಕಾಡದೇವರಮಠ, ಪಿಡಿಒ ಸಿದ್ದಪ್ಪ ತುಂಗಳ, ಕಾರ್ಯದರ್ಶಿ ಜಯಪಾಲ ದುರ್ಗಣ್ಣವರ, ಕುಮಾರ ವೀರಗೌಡ, ಶ್ರೀಶೈಲ ದೊಡಮನಿ, ಚಿದಾನಂದ ಭಜಂತ್ರಿ, ಸತೀಶ ದೊಡಮನಿ, ಸದಾಶಿವ ಭಜಂತ್ರಿ, ಗೋಪಾಲ ಬಣಜ, ರಾಜು ರೊಡ್ಡ ಇತರರು ಉಪಸ್ಥಿತರಿದ್ದರು.