ಹುಬ್ಬಳ್ಳಿ: ಹುಬ್ಬಳ್ಳಿಯ ಉಣಕಲ್ಲ ರೈಲು ನಿಲ್ದಾಣದ ಹತ್ತಿರದ ರೈಲ್ವೆ ಕೆಳಸೇತುವೆಯನ್ನು (ರೈಲ್ವೆ ಅಂಡರ್ ಬ್ರಿಜ್ - ಆರ್ಯುುಬಿ) ಕೇವಲ 24 ಗಂಟೆ 30 ನಿಮಿಷಗಳಲ್ಲಿ ನಿರ್ವಿುಸುವ ಮೂಲಕ ನೈಋತ್ಯ ರೈಲ್ವೆ ವಲಯದ ವ್ಯಾಪ್ತಿಯಲ್ಲಿ ಭಾನುವಾರ ಹೊಸ ದಾಖಲೆ ನಿರ್ವಣಗೊಂಡಿದೆ.
ತೌಕ್ತೆ ಚಂಡಮಾರುತ ಮತ್ತು ಕೋವಿಡ್ ಹಾವಳಿಯ ನಡುವೆಯೇ ಈ ಕಾಮಗಾರಿ ಯಶಸ್ವಿಯಾಗಿ ಕೈಗೊಂಡಿದ್ದು ವಿಶೇಷ.
ಸಾಮಾನ್ಯವಾಗಿ ಇಂತಹ ಕಾಮಗಾರಿಗಳಿಗೆ ತಗಲುವ ಸಮಯ ಸುಮಾರು ಒಂದು ತಿಂಗಳು. ಆದರೆ, ಉಣಕಲ್ ಸೇತುವೆ ಕಾಮಗಾರಿಯನ್ನು ಅತಿ ಕಡಿಮೆ ಅವಧಿ ಹಾಗೂ ಗುಣಮಟ್ಟದಿಂದ ನಿರ್ವಿುಸಲಾಗಿದೆ. ಅಲ್ಲದೆ, ಈ ಸೇತುವೆ ನಿರ್ವಣಕ್ಕೆ ರೈಲುಗಳ ಸಂಚಾರ ಸ್ಥಗಿತಗೊಂಡಿದ್ದು ಕೇವಲ 12 ತಾಸು ಮಾತ್ರ.
ಹುಬ್ಬಳ್ಳಿಯ ಸ್ವರ್ಣ ಟೆಕ್ನೊ ಕನ್ಸ್ಟ್ರಕ್ಷನ್ ಪ್ರೖೆವೇಟ್ ಲಿಮಿಟೆಡ್ ಸಂಸ್ಥೆ ಈ ಕಾಮಗಾರಿ ನಿರ್ವಹಿಸಿದೆ. ಈಗಾಗಲೇ ಹುಬ್ಬಳ್ಳಿ-ಗದಗ ರಸ್ತೆ, ದೇಸಾಯಿ ಕ್ರಾಸ್ನಲ್ಲಿ ರೈಲ್ವೆ ಸೇತುವೆಗಳನ್ನು ನಿರ್ವಿುಸಿರುವ ಸ್ವರ್ಣ ಟೆಕ್ನೊ ಕನ್ಸ್ಟ್ರಕ್ಷನ್ ಈಚೆಗೆ ದೇಶಪಾಂಡೆ ನಗರದ ಶ್ರೀ ಕೃಷ್ಣ ಮಂದಿರದ ಬಳಿ 48 ಗಂಟೆಗಳಲ್ಲಿ ರೈಲ್ವೆ ಕೆಳಸೇತುವೆ ನಿರ್ವಿುಸಿತ್ತು. ಇದೀಗ ಈ ಸಂಸ್ಥೆ ತನ್ನದೇ ಹಿಂದಿನ ದಾಖಲೆಯನ್ನು ಮುರಿದು, ಕೇವಲ 24 ಗಂಟೆ 30 ನಿಮಿಷಗಳಲ್ಲಿ ಮತ್ತೊಂದು ಸೇತುವೆ ನಿರ್ವಿುಸಿದೆ. ಹುಬ್ಬಳ್ಳಿ-ಧಾರವಾಡದ ನಡುವೆ ಜೋಡಿ ರೈಲು ಮಾರ್ಗ ಇದ್ದು, ಉಣಕಲ್ ನಿಲ್ದಾಣದಲ್ಲಿ ಈ ಸೇತುವೆ ನಿರ್ಮಾಣ ಸ್ಥಳದಲ್ಲಿ ಒಟ್ಟು 4 ಹಳಿಗಳಿವೆ. ಈ ನಾಲ್ಕೂ ಹಳಿಗಳನ್ನು ಕೇವಲ 12 ತಾಸುಗಳಲ್ಲಿ ಮರಳಿ ಜೋಡಿಸಲಾಗಿದ್ದು ಕೂಡ ವಿಶೇಷ.
ಮೊದಲೇ ಸಿದ್ಧತೆ ಸ್ಥಿತಿಯಲ್ಲಿ ಇಟ್ಟಿರುವ ತಲಾ 100 ಟನ್ ತೂಕದ 22 ಸೆಗ್ಮೆಂಟ್ಗಳನ್ನು (ಚೌಕ) ಸೇತುವೆಗಾಗಿ ತೋಡಿದ್ದ ತಗ್ಗಿನಲ್ಲಿ 400 ಟನ್ ಸಾಮರ್ಥ್ಯದ 2 ಕ್ರೇನ್ಗಳ ಸಹಾಯದ ಮೂಲಕ ಇಡಲಾಯಿತು. ನಂತರ ಮಣ್ಣು ಮುಚ್ಚಿ, ರೈಲು ಹಳಿಗಳನ್ನು ಮೊದಲಿನಂತೆ ಜೋಡಿಸುವ ಮೂಲಕ ಮಾರ್ಗ ಸುಗಮಗೊಳಿಸಲಾಯಿತು.
ದಿ. ಸುರೇಶ ಅಂಗಡಿಯವರ ಕನಸು: ಉಣಕಲ್ಲ ಯಾರ್ಡ್ನಲ್ಲಿ ನಿರ್ವಣಗೊಂಡಿರುವ ರೈಲ್ವೆ ಕೆಳಸೇತುವೆಯು ಈ ಹಿಂದಿನ ರೈಲ್ವೆ ರಾಜ್ಯ ಸಚಿವರಾಗಿದ್ದ ದಿ. ಸುರೇಶ ಅಂಗಡಿ ಅವರ ಕನಸು. ಈ ಕಾಮಗಾರಿಗೆ ಬೇಕಾದ ಸಂಪೂರ್ಣ ವೆಚ್ಚವನ್ನು ರೈಲ್ವೆ ಇಲಾಖೆಯೇ ಭರಿಸುವಂತೆ ಅವರು ಮಂಜೂರಾತಿ ಕೊಡಿಸಿದ್ದರು. ರೇಲ್ ವಿಕಾಸ್ ನಿಗಮದಿಂದ ಈ ಕಾಮಗಾರಿ ಮಂಜೂರಾಗಿತ್ತು.
ಸಮಯ, ಇಂಧನ ಉಳಿತಾಯ
ಈ ರೈಲ್ವೆ ಕೆಳಸೇತುವೆಯಿಂದಾಗಿ ಉಣಕಲ್ಲನ ಟಿಂಬರ್ಯಾರ್ಡ್ನಿಂದ ಶಿರಡಿ ನಗರಕ್ಕೆ ನೇರ ಸಂಪರ್ಕ ರಸ್ತೆ ನಿರ್ವಣವಾಗಿದೆ. ಟಿಂಬರ್ ಯಾರ್ಡ್, ಶ್ರೀ ನಗರ ಭಾಗ
ಹಾಗೂ ನೃಪತುಂಗ ಬೆಟ್ಟ, ವಿಶ್ವೇಶ್ವರ ನಗರ, ಕೇಶ್ವಾಪುರ ಭಾಗದ ಬಡಾವಣೆಗಳ ನಡುವೆ ಸಂಚರಿಸಲು ಅನುಕೂಲಕರ. ಇದರಿಂದ ಪ್ರಯಾಣಿಕರಿಗೆ ಸಾಕಷ್ಟು ಸಮಯ ಹಾಗೂ ಇಂಧನ ಉಳಿತಾಯವಾಗಲಿದೆ. ಸಂಚಾರ ದಟ್ಟಣೆಯ ಸಮಸ್ಯೆ ತಪ್ಪಲಿದೆ. ರಾಜನಗರದಲ್ಲಿರುವ ಕೆಎಸ್ಸಿಎ ಕ್ರಿಕೆಟ್ ಮೈದಾನಕ್ಕೂ ಈ ರೈಲ್ವೆ ಕೆಳಸೇತುವೆ ಮೂಲಕ ತೆರಳಲು ಅನುಕೂಲಕರ.
ಒಂದು ರೈಲಿಗೆ ಮಾತ್ರ ವ್ಯತ್ಯಯ
ಉಣಕಲ್ಲನ ಈ ರೈಲ್ವೆ ಕೆಳಸೇತುವೆ ನಿರ್ವಣದ ಸಮಯದಲ್ಲಿ ಧಾರವಾಡ-ಮೈಸೂರು ರೈಲು ಮಾತ್ರ ಧಾರವಾಡದ ಬದಲು ಹುಬ್ಬಳ್ಳಿಯಿಂದ ಸಂಚಾರ ಪ್ರಾರಂಭಿಸಿತು. ಇನ್ನುಳಿದ ಯಾವುದೇ ರೈಲುಗಳ ಸಂಚಾರಕ್ಕೆ ವ್ಯತ್ಯಯವೇ ಆಗಲಿಲ್ಲ.
ಸಾಮಾನ್ಯವಾಗಿ ಇಂತಹ ಕೆಳ ಸೇತುವೆಗಳ ನಿರ್ವಣಕ್ಕೆ ಒಂದು ತಿಂಗಳ ಕಾಲಾವಧಿ ಬೇಕಾಗುತ್ತದೆ. ರೈಲ್ವೆ ಅಧಿಕಾರಿಗಳ ಸಹಕಾರದಿಂದ ಕಡಿಮೆ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಂಡಿತು. ಹೆಬ್ಬಳ್ಳಿ ರಸ್ತೆಯ ಜೈನ್ ಕಾಲೇಜ್ ಬಳಿಯೂ 9 ಮೀ. ಅಗಲದ ರೈಲ್ವೆ ಕೆಳ ಸೇತುವೆ ನಿರ್ಮಾಣ ಕಾಮಗಾರಿಯನ್ನು 5 ಕೋಟಿ ರೂ. ವೆಚ್ಚದಲ್ಲಿ 2 ತಿಂಗಳ ಒಳಗೆ ಪ್ರಾರಂಭಿಸುತ್ತೇವೆ.| ಡಾ. ವಿ.ಎಸ್.ವಿ. ಪ್ರಸಾದವ್ಯವಸ್ಥಾಪಕ ನಿರ್ದೇಶಕ, ಸ್ವರ್ಣ ಟೆಕ್ನೊ ಕನ್ಸ್ಟ್ರಕ್ಸನ್
ದಾಖಲೆ ಅವಧಿಯಲ್ಲಿ ಉಣಕಲ್ಲ ಯಾರ್ಡ್ ಬಳಿ ರೈಲ್ವೆ ಕೆಳ ಸೇತುವೆ ನಿರ್ವಿುಸಲಾಗಿದೆ. ಕಾಮಗಾರಿ ಸಂದರ್ಭದಲ್ಲಿ ರೈಲುಗಳ ಸಂಚಾರಕ್ಕೆ ಯಾವುದೇ ರೀತಿಯ ಅಡೆತಡೆ ಆಗಲಿಲ್ಲ.| ಅನಿಶ ಹೆಗಡೆಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ, ನೈಋತ್ಯ ರೈಲ್ವೆ ವಲಯ