ಮಧುಗಿರಿ: ಭೂಮಿಯ ದಾಖಲೆಗಳನ್ನು ಡಿಜಿಟಲೀಕರಣ ಮಾಡುವಾಗ ಎಚ್ಚರಿಕೆ ವಹಿಸಬೇಕು ಎಂದು ಶಾಖೆಯ ಸಿಬ್ಬಂದಿಗಳಿಗೆ ಸಹಕಾರ ಸಚಿವ ಕೆ.ಎನ್.ರಾಜಣ್ಣ ಸೂಚಿಸಿದರು.
ಪಟ್ಟಣದ ಆಡಳಿತ ಸೌಧದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಂದಾಯ ಇಲಾಖೆಯ ದಾಖಲೆಗಳ ಗಣಕೀಕರಣ, ಕರ್ನಾಟಕ ಸರ್ಕಾರದ ಭೂ ಸುರಕ್ಷಾ ಯೋಜನೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ನಂತರ ಶಾಸಕರ ಕಚೇರಿಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿ, ರಾಜ್ಯದಲ್ಲಿನ 209 ತಾಲೂಕುಗಳಲ್ಲಿ ಈ ಯೋಜನೆಗೆ ಕೋಲಾರ ತಾಲೂಕಿನ ಗುಡಿಬಂಡೆಯಲ್ಲಿ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಈಗಾಗಲೇ ಚಾಲನೆ ನೀಡಿದ್ದು, ನಮ್ಮ ಕ್ಷೇತ್ರದಲ್ಲಿಯೂ ಚಾಲನೆ ನೀಡಲಾಗಿದೆ. ಕಂದಾಯ ಸಿಬ್ಬಂದಿ ಯಾವುದೇ ದಾಖಲೆಗಳನ್ನು ಕಂಪೂಟ್ಯರ್ಗೆ ದಾಖಲು ಮಾಡುವಾಗ ಎಚ್ಚರ ವಹಿಸಬೇಕು. ಮತ್ತೊಬ್ಬರು ಪರಿಶೀಲಿಸಬೇಕು. ಹಳೆಯ ದಾಖಲೆಗಳ ನಿರ್ವಹಣೆಯಲ್ಲಿ ಲೋಪದೋಷ ಉಂಟಾಗುವುದಿಲ್ಲ ಹಾಗೂ ತಿದ್ದುಪಡಿ ಮಾಡಲು ಆಗುವುದಿಲ್ಲ. ಆದ್ದರಿಂದ ಈ ಕಾರ್ಯಕ್ರಮದ ಅನುಷ್ಠಾನದಿಂದ ರೈತರಿಗೆ ಅನೂಕೂಲವಾಗಲಿದೆ ಎಂದರು.
ಎಲ್ಲ ತಾಲೂಕುಮಟ್ಟದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿರುವಂತೆ ತಹಸೀಲ್ದಾರ್ಗೆ ಸೂಚಿಸಿದ ಸಚಿವರು, ಜ.22ರಂದು ಜನಸಂಪರ್ಕ ಸಭೆ ಆಯೋಜಿಸಲಾಗಿದೆ. ಎಲ್ಲ ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸುವಂತಾಗಬೇಕು ಎಂದರು. ಸಚಿವರು ಅಹವಾಲು ಸ್ವೀಕರಿಸುತ್ತಿದ್ದಾಗ, ಕಚೇರಿಗೆ ಅಂಗವಿಕಲರೊಬ್ಬರು ಆಗಮಿಸಿ ತಮಗೆ ಒಂದು ನಿವೇಶನ ಮಂಜೂರು ಮಾಡಿಸಿಕೊಡಿ ಎಂದು ಮನವಿ ಮಾಡಿದರು. ತಾಲೂಕಿನಲ್ಲಿ ಎಷ್ಟು ಜನ ಅಂಗವಿಕಲರಿದ್ದಾರೆ ಎಂಬ ಬಗ್ಗೆ ಪಟ್ಟಿ ತಯಾರಿಸಿ, ಅಂಗವಿಕಲರಿಗೆ ಹಾಗೂ ತಳ ಸಮುದಾಯದ ಆರ್ಹ ಫಲಾನುಭವಿಗಳನ್ನು ಗುರುತಿಸಿ ಸಂಬಂಧಪಟ್ಟ ಗ್ರಾಮ ವ್ಯಾಪ್ತಿಯಲ್ಲಿ ನಿವೇಶನಗಳನ್ನು ನೀಡಬೇಕು ಎಂದು ತಾಪಂ ಇಒ ಲಕ್ಷಣ್ಗೆ ಸೂಚಿಸಿದರು. ತಹಸೀಲ್ದಾರ್ ಶಿರೀನ್ ತಾಜ್, ತಾಪಂ ಇಒ ಲಕ್ಷ್ಮಣ್, ಪುರಸಭೆ ಅಧ್ಯಕ್ಷ ಲಾಲಾಪೇಟೆ ಮಂಜುನಾಥ್, ಮಾಜಿ ಅಧ್ಯಕ್ಷ ಎಂ.ಕೆ. ನಂಜುಂಡಯ್ಯ ಇದ್ದರು.