ಕೋಲಾರ: ಜಿಲ್ಲೆಯಲ್ಲಿನ ಅಪರೂಪದ ಜೀವ ವೈವಿಧ್ಯತೆ, ಸಾಮಾಜಿಕ, ಧಾರ್ಮಿಕ, ಐತಿಹಾಸಿಕ ಚಾರಿತ್ರಿಕವಾದ ವೈಶಿಷ್ಠ್ಯತೆ ದಾಖಲಿಸುವ ಕಾರ್ಯ ಉತ್ತಮವಾಗಿ ನಡೆಯಬೇಕು ಎಂದು ಜಿಲ್ಲಾಧಿಕಾರಿ ಸಿ. ಸತ್ಯಭಾಮ ಹೇಳಿದರು.
ರಾಜ್ಯ ಜೀವ ವೈವಿಧ್ಯ ಮಂಡಳಿ, ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಇಲಾಖೆಯಿಂದ ಜಿಪಂ ಸಭಾಂಗಣದಲ್ಲಿ ಬುಧವಾರ ನಡೆದ ಜೀವವೈವಿಧ್ಯ ನಿರ್ವಹಣಾ ಸಮಿತಿಯ ಜಿಲ್ಲಾಮಟ್ಟದ ಸಭೆಯಲ್ಲಿ ಮಾತನಾಡಿದರು.
ಮಾಸ್ತಿ , ಡಿವಿಜಿ ಸೇರಿ ಜಿಲ್ಲೆಯ ಕಲೆ, ಸಾಹಿತ್ಯ, ಸಂಸ್ಕೃತಿಗೆ ಕೊಡುಗೆ ನೀಡಿದ ಮಹನೀಯರು, ಪ್ರಥಮ ಸಿಎಂ ಕೆ.ಸಿ.ರೆಡ್ಡಿ, ಎಂ.ವಿ. ಕೃಷ್ಣಪ್ಪ ಇನ್ನಿತರರು, ವೀರಗಲ್ಲುಗಳು, ಪಾಳೆಗಾರರ ಆಳ್ವಿಕೆ, ಚಿನ್ನದ ಗಣಿ, ಪಶುಪಾಲನೆ, ರೇಷ್ಮೆ ಇಲಾಖೆ, ಕೃಷಿ, ತೋಟಗಾರಿಕೆಯಲ್ಲಿ ಮಾವು ಇನ್ನಿತರ ವೈಶಿಷ್ಠ್ಯ ಪೂರ್ಣ ತಳಿಗಳು, ಸ್ಥಳೀಯ ಔಷಧೀಯ ಸಸ್ಯ, ಮಂದಿರ, ಮಸೀದಿ, ಚರ್ಚ್ ಸೇರಿ ಎಲ್ಲ ಧಾರ್ಮಿಕ ಕೇಂದ್ರಗಳಲ್ಲಿ ವಿಶೇಷತೆಗಳನ್ನು ದಾಖಲಿಸಬೇಕು ಎಂದರು.
ಜಿಲ್ಲಾ ಸಮಿತಿ ಸದಸ್ಯ ಕಾರ್ಯದರ್ಶಿ, ಸಾಮಾಜಿಕ ಅರಣ್ಯ ಉಪಸಂರಕ್ಷಣಾಧಿಕಾರಿ ವಿ.ದೇವರಾಜ್ ಮಾತನಾಡಿ, ನಮ್ಮ ಸುತ್ತಮುತ್ತ ಪ್ರದೇಶದಲ್ಲಿ ಅನೇಕ ಔಷಧೀಯ ಸಸ್ಯಗಳಿವೆ. ಸ್ಥಳೀಯವಾಗಿ ಅನೇಕ ವಿಶಿಷ್ಟತೆ ಒಳಗೊಂಡ ಅಂಶಗಳಿರುತ್ತವೆ. ಇವುಗಳ ಸಂರಕ್ಷಣೆಗಾಗಿ ಕೇಂದ್ರ ಸರ್ಕಾರ ಜೀವವೈವಿಧ್ಯತೆ ಕಾಯ್ದೆ ರೂಪಿಸಿ 2004ರಲ್ಲಿ ಜಾರಿಗೆ ತಂದಿದೆ. ಜೀವವೈವಿಧ್ಯತೆಗಳನ್ನು ಜನರೇ ದಾಖಲೀಕರಣಗೊಳಿಸುವ ದಿಸೆಯಲ್ಲಿ ಗ್ರಾಪಂ, ತಾಪಂ, ಜಿಪಂ ಹಾಗೂ ರಾಜ್ಯಮಟ್ಟದಲ್ಲಿ ಮಂಡಳಿ ರಚನೆಯಾಗಿವೆ ಎಂದರು.
ಗ್ರಾಪಂನಿಂದ ದಾಖಲೀಕರಣಗೊಂಡ ವಿಷಯಗಳನ್ನು ಜಿಪಂ ಮಟ್ಟದಲ್ಲಿ ಪರಿಶೀಲಿಸಿ ರಾಜ್ಯಮಟ್ಟಕ್ಕೆ ಕಳುಹಿಸಿದರೆ ಪುಸ್ತಕ ರೂಪದಲ್ಲಿ ಪ್ರಕಟವಾಗಲಿದೆ. ಇದು ಪ್ರಮುಖ ದಾಖಲೆಯಾಗಿ ನೆರವಿಗೆ ಬರುತ್ತದೆ. ಜಿಲ್ಲೆಯಲ್ಲಿ ಆರೇಳು ತಿಂಗಳಿನಿಂದ ಜನತಾ ಜೀವವೈವಿಧ್ಯ ದಾಖಲಾತಿ ಆರಂಭಗೊಂಡು ಅಂತಿಮ ಹಂತಕ್ಕೆ ಬಂದಿದೆ. ಪುಸ್ತಕ ರೂಪದಲ್ಲಿ ಪ್ರಕಟವಾದ ನಂತರವೂ ಹೊಸ ಅಂಶಗಳಿದ್ದರೆ ಸೇರ್ಪಡೆಗೆ ಅವಕಾಶವಿದೆ ಎಂದು ವಿವರಿಸಿದರು.
ಮುಳಬಾಗಲಿನಲ್ಲಿ 220ಕ್ಕೂ ಹೆಚ್ಚು ಧಾನ್ಯ ಬೀಜ ಸಂಗ್ರಹಿಸಿರುವ ಪಾಪಮ್ಮ, ಹನುಮನಹಳ್ಳಿಯಲ್ಲಿನ ಎಲೆಮೂತಿ ಬಾವಲಿ, ವಿಶಿಷ್ಟ ತಳಿ ಬೈರುನೆಲ್ಲು, ನಾಟಿವೈದ್ಯರು, ಸೂಲಗಿತ್ತಿಯರು ಹೀಗೆ ಅನೇಕ ಅಂಶಗಳನ್ನು ದಾಖಲಿಸಿಕೊಳ್ಳಾಗಿದೆ ಎಂದರು.
ಕೋಲಾರದ ಧನಮಟ್ನಹಳ್ಳಿಯ ನಾಟಿ ವೈದ್ಯ ವೆಂಕಟೇಶಮೂರ್ತಿ ಕುರಿತು ದಾಖಲಿಸುವಂತೆ ಜಿಪಂ ಅಧ್ಯಕ್ಷ ಸಿ.ಎಸ್.ವೆಂಕಟೇಶ್ ಸಲಹೆ ನೀಡಿದರೆ, ಬೂದಿಕೋಟೆಯ ಗುಟ್ಟೂರಿನಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಬಾವಲಿಗಳು, ಕೆಜಿಎಫ್‌ನ ಕೃಷ್ಣಾವರಂ ಬಳಿಯ ಕೃಷ್ಣಮೃಗ, ಪೆದ್ದಪಲ್ಲಿ ಎಂಬಲ್ಲಿನ ಚಿನ್ನಕ್ಕಿಂತಲೂ ವಿಶಿಷ್ಟ ಖನಿಜ ಒಳಗೊಂಡಿರುವ ಬಂಡೆಯ ಕುರಿತು ದಾಖಲಿಸುವಂತೆ ಸದಸ್ಯ ಬಿ.ವಿ.ಮಹೇಶ್ ಹೇಳಿದರು.
ಮೈಸೂರಿನ ಮಾನಸ ಗಂಗೋತ್ರಿ ಸಸ್ಯಶಾಸ್ತ್ರ ವಿಭಾಗದ ಕೆ.ವಿ.ಅಮರ್ ಜನತಾ ಜೀವ ವೈವಿಧ್ಯ ದಾಖಲೀಕರಣದ ಕುರಿತು ಪವರ್ ಪಾಯಿಂಟ್ ಪ್ರಸಂಟೇಷನ್ ನೀಡಿದರು. ಜಿಪಂ ಸದಸ್ಯೆ ಭಾಗ್ಯವತಿ, ಉಪ ಕಾರ್ಯದರ್ಶಿ ಕೆ.ಪಿ.ಸಂಜೀವಪ್ಪ ಇತರರು ಹಾಜರಿದ್ದರು.
ಮುಡಿಯನೂರಲ್ಲಿ ನಕ್ಷತ್ರ ಆಮೆ: ಮುಳಬಾಗಿಲಿನ ಹರಪನಾಯಕನಹಳ್ಳಿಯ ಬಿಸ್ಸೇಗೌಡರ ಕೋಟೆ, ಮುಡಿಯನೂರಿನ ಅರಹಳ್ಳಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ನಕ್ಷತ್ರ ಆಮೆಗಳನ್ನು ಸ್ಥಳೀಯರೇ ರಕ್ಷಿಸುತ್ತಿರುವ ಕುರಿತು ಸದಸ್ಯ ವಿ.ಎಸ್.ಅರವಿಂದ್ ಕುಮಾರ್ ಗಮನ ಸೆಳೆದರೆ, ಸದಸ್ಯ ಆರ್.ಕೃಷ್ಣಪ್ಪ ಆವಣಿಯ ವಾಲ್ಮೀಕಿ ಆಶ್ರಮದ ಕುರಿತು ದಾಖಲೆ ಮಾಡುವಂತೆ ಕೋರಿದರು.