ಜಿಲ್ಲೆ

ದಾಕ್ಷಾಯಿಣಿ ಮಂಗಳಗೌರಿ ಉಮಾ ಕಾತ್ಯಾಯನೀ…

ಚಿತ್ರದುರ್ಗ: ದಾಕ್ಷಾಯಿಣಿ, ಉಮಾ ಕಾತ್ಯಾಯನೀ, ಪಾರ್ವತಿ ಸೇರಿ ನಾನಾ ಹೆಸರುಗಳಿಂದ ಭಕ್ತರು ಬಣ್ಣಿಸುವ ‘ಮಂಗಳಗೌರಿ’ ಮಾತೆಯ ವ್ರತಾಚರಣೆಯನ್ನು ಶ್ರಾವಣ ಮಾಸದ ಮೊದಲ ಮಂಗಳವಾರದಿಂದಲೂ ನಗರ ಸೇರಿ ಜಿಲ್ಲಾದ್ಯಂತ ಅನೇಕ ಮಹಿಳೆಯರು ಸಂಭ್ರಮದಿಂದ ಆಚರಿಸಿದ್ದು, ಕೊನೆಯ ವಾರದ ಪೂಜೆಯೊಂದಿಗೆ ಸಂಪನ್ನಗೊಂಡಿತು.

ದೇವರ ಕೋಣೆಯಲ್ಲಿ ಮಂಗಳಗೌರಿ ಮಾತೆಯ ಮೂರ್ತಿ ಪ್ರತಿಷ್ಠಾಪಿಸಿ, ಶ್ರದ್ಧಾ-ಭಕ್ತಿಯಿಂದ ಪೂಜೆ ಸಲ್ಲಿಸಿದರು. ಸಂಬಂಧಿಕರು, ಅಕ್ಕ-ಪಕ್ಕದ ಮನೆಯವರನ್ನು ಕರೆದು ಅರಿಶಿಣ-ಕುಂಕುಮ, ಫಲ-ತಾಂಬೂಲದೊಂದಿಗೆ ಉಡಿ ತುಂಬುವ ಮೂಲಕ ಹಬ್ಬದ ಶುಭಾಶಯ ಪರಸ್ಪರ ವಿನಿಮಯ ಮಾಡಿಕೊಂಡರು.

ನಾಲ್ಕು ವಾರವೂ ಅತ್ಯಂತ ವಿಶೇಷ, ವೈಭವೋಪೇತವಾಗಿ ಪೂಜೆ ನೆರವೇರಿಸುವ ಮೂಲಕ ಮಹಿಳಾ ಭಕ್ತರು ಭಕ್ತಿಯಲ್ಲಿ ಮಿಂದೆದ್ದರು. ಕುಟುಂಬಕ್ಕೆ ಮಂಗಳವನ್ನು ಉಂಟು ಮಾಡಲಿ ಎಂಬ ಪ್ರಾರ್ಥನೆಯೊಂದಿಗೆ ಪರಂಪರೆ ಮುಂದುವರಿದಿರುವುದು ವ್ರತಾಚರಣೆಯ ವಿಶೇಷ.

ಶಕ್ತಿದೇವತೆಗಳಿಗೆ ವಿಶೇಷಾಲಂಕಾರ: ದುರ್ಗದ ಅಧಿದೇವತೆ ಏಕನಾಥೇಶ್ವರಿ ದೇವಿಗೆ ಮಂಗಳವಾರ ವಿವಿಧ ಬಗೆಯ ಪುಷ್ಪಗಳಿಂದ, ಬೃಹತ್ ಹೂವಿನ ಹಾರದಿಂದ ಅರ್ಚಕರು ವಿಶೇಷವಾಗಿ ಅಲಂಕರಿಸಿದ್ದರು. ಸಾವಿರಾರು ಭಕ್ತರು ಕೋಟೆಯನ್ನು ಏರಿ ಭಕ್ತಿ ಸಮರ್ಪಿಸಿದರು. ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿಕೊಂಡರು.

ನಗರದೇವತೆ ಹೊಳಲ್ಕೆರೆ ರಸ್ತೆಯ ಬರಗೇರಮ್ಮ ದೇವಿಗೆ ನೂರಾರು ಸೇಬು ಹಣ್ಣಿನಿಂದ, ರಾಜಮಾತೆ ಉಚ್ಚಂಗಿಯಲ್ಲಮ್ಮ ಸೇರಿ ಶಕ್ತಿದೇವತೆ ದೇಗುಲಗಳಲ್ಲಿ ದೇವಿಯರ ಮೂರ್ತಿಗಳಿಗೆ ಭಕ್ತರ ಕಣ್ಮನ ಸೆಳೆಯುವಂತೆ ಪುಷ್ಪಗಳಿಂದ ವೈಭವೋಪೇತವಾಗಿ ಅಲಂಕಾರ ಸೇವೆ ನೆರವೇರಿದವು. ಹಲವೆಡೆ ಬೆಳಗ್ಗೆ 11ರಿಂದ ರಾತ್ರಿ 9ರವರೆಗೂ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ನೆರೆದಿದ್ದ ಭಕ್ತರಿಗೆ ಮಹಾಮಂಗಳಾರತಿ, ತೀರ್ಥ, ಪ್ರಸಾದ ವಿತರಿಸಲಾಯಿತು.

ದೇವತೆಗಳಿಗೆ ವಿಶೇಷ ಪೂಜೆ: ಕುಂಚಿಗನಾಳ್ ಕಣಿವೆಮಾರಮ್ಮ, ತ್ರಿಪುರಸುಂದರಿ ತಿಪ್ಪಿನಘಟ್ಟಮ್ಮ, ಗೌರಸಂದ್ರ ಮಾರಮ್ಮ, ಚೌಡೇಶ್ವರಿ, ಬನ್ನಿ ಮಹಾಕಾಳಿಕಾಂಬ, ಕುಕ್ಕವಾಡೇಶ್ವರಿ, ಕೆಳಗೋಟೆಯ ಕೊಲ್ಲಾಪುರದ ಮಹಾಲಕ್ಷ್ಮೀ, ಅಂತರಘಟ್ಟಮ್ಮ, ಮಲೆನಾಡು ಚೌಡೇಶ್ವರಿ, ದುರ್ಗಾ ಮಾತೆ, ಅನ್ನಪೂರ್ಣೇಶ್ವರಿ, ಚಾಮುಂಡೇಶ್ವರಿ, ಬುಡ್ಡಮ್ಮ, ಮೈಲಮ್ಮ, ಮಾಸ್ತಮ್ಮ ಒಳಗೊಂಡು ಎಲ್ಲ ಶಕ್ತಿದೇವತೆಗಳ ದೇಗುಲಗಳಲ್ಲಿ ವಿಶೇಷ ಪೂಜೆಯೊಂದಿಗೆ ಅಲಂಕರಿಸಲಾಗಿತ್ತು.