ಮಲೆಮಹದೇಶ್ವರ ಬೆಟ್ಟದ ಸಾಲೂರು ಬೃಹನ್ಮಠದಲ್ಲಿ ಸೋಮವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ. 
ಜಿಲ್ಲೆ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಏಳು ಜೋಡಿ

ಹನೂರು: ಶ್ರೀ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ನಡೆಯಬೇಕಿದ್ದ ಉಚಿತ ಸಾಮೂಹಿಕ ವಿವಾಹ 2 ಬಾರಿ ಮುಂದೂಡಿಕೆಯಾದ ಹಿನ್ನೆಲೆಯಲ್ಲಿ ಅರ್ಜಿ ಸಲ್ಲಿಸಿದ್ದ 7 ಜೋಡಿ ಸೋಮವಾರ ಸಾಲೂರು ಬೃಹನ್ಮಠದಲ್ಲಿ ವಿವಾಹವಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಪ್ರಾಧಿಕಾರ ವತಿಯಿಂದ ಆ.23 ರಂದು ಬೆಳಗ್ಗೆ 9.30 ರಿಂದ 9.50ರೊಳಗೆ ಸಲ್ಲುವ ಶುಭ ಕನ್ಯಾ ಲಗ್ನದಲ್ಲಿ ಸಾಮೂಹಿಕ ವಿವಾಹವನ್ನು ನಿಗದಿಪಡಿಸಲಾಗಿತ್ತು. ಆದರೆ ಕಾರಣಾಂತರದಿಂದ 28ಕ್ಕೆ ಮುಂದೂಡಲಾಗಿತ್ತು. ಈ ವೇಳೆಗೆ ಸುಮಾರು 65 ಜೋಡಿಗಳಿಂದ ಅರ್ಜಿ ಸಲ್ಲಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ಈಗಾಗಲೇ ಕೆಲವರು ಲಗ್ನ ಪತ್ರಿಕೆಯನ್ನು ಹಂಚಿದ್ದರು. ಇನ್ನು ಲಗ್ನಪತ್ರಿಕೆ ಮಾಡಿಸದ ಕೆಲವರು ವಿವಾಹಕ್ಕೆ ಆಗಮಿಸುವಂತೆ ಸಂಬಂಧಿಕರಿಗೆ 2 ಬಾರಿ ತಿಳಿಸಿದ್ದರು. ಆದರೆ ಪ್ರಾಧಿಕಾರ ಮುಂದೂಡಲಾದ ಮದುವೆಗೆ ದಿನಾಂಕವನ್ನು ನಿಗದಿಪಡಿಸಿ ಖಚಿತ ಪಡಿಸಿಲ್ಲ. ಇದರಿಂದ ಗೊಂದಲಕ್ಕೆ ಸಿಲುಕಿದ್ದ 8 ವಧು-ವರರು ದೃಢ ನಿರ್ಧಾರ ಹೊಂದಿ ಸ್ವಂತ ಖರ್ಚಿನಲ್ಲಿ ಬೆಟ್ಟದಲ್ಲೇ ವಿವಾಹವಾದರು.

ದಾಂಪತ್ಯ ಜೀವನಕ್ಕೆ ಕಾಲಿಟ್ಟ 8 ಜೋಡಿಗಳು: ಬಹುತೇಕ ಬಡ ವರ್ಗದ ವಧು-ವರರು ಮ.ಬೆಟ್ಟದಲ್ಲಿ ಪ್ರಾಧಿಕಾರ ವತಿಯಿಂದ ನಡೆಯುವ ಉಚಿತ ಸಾಮೂಹಿಕ ವಿವಾಹದಲ್ಲಿ ಮದುವೆಯಾಗಲು ಅರ್ಜಿ ಸಲ್ಲಿಸುವುದು ವಾಡಿಕೆ. ಆದರೆ 2 ಬಾರಿ ವಿವಾಹ ಮುಂದೂಡಿಕೆಯಾಗಿದ್ದ ಹಿನ್ನೆಲೆಯಲ್ಲಿ ಚಾಮರಾಜನಗರದ ಜಗದೀಶ್- ನಂಜನಗೂಡಿನ ಕಾವ್ಯಾಶ್ರೀ, ಪಿಜಿ ಪಾಳ್ಯದ ಮಹೇಶ್‌ಕುಮಾರ್ ಮೈಸೂರಿನ ಹೊರಳವಾಡಿಯ ರಮ್ಯಾ, ತಾಳವಾಡಿಯ ಉದಯಕುಮಾರ್, ಇದೇ ಗ್ರಾಮದ ಸ್ನೇಹ, ನರಸೀಪುರದ ದಿನೇಶ್ ಮೈಸೂರಿನ ನಿರ್ಮಲಾ, ನಂಜನಗೂಡು ತಾಲೂಕಿನ ಹಳೇಪುರದ ಮಹೇಂದ್ರ, ಚಾಮರಾಜನಗರ ತಾಲೂಕಿನ ಅರಳೀಪುರ ಗ್ರಾಮದ ಮಂಗಳಮ್ಮ, ಮೈಸೂರಿನ ಸಂಜಯ್ - ಸೌಭಾಗ್ಯ ಹಾಗೂ ಚಾಮರಾಜನಗರದ ರವಿ-ಸೌಮ್ಯ ಜೋಡಿ ಸಾಲೂರು ಬೃಹನ್ಮಠದಲ್ಲಿ ವಿವಾಹವಾದರು. ಅಂತೆಯೆ ಮ.ಬೆಟ್ಟದ ಬೊಮ್ಮೇಶ್ವರ ದೇಗುಲದಲ್ಲಿ ಮಹದೇವಪ್ಪ - ಸವಿತಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ದಿನಾಂಕ ನಿಗದಿಗೆ ಒತ್ತಾಯ: ಈಗಾಗಲೇ 2 ಬಾರಿ ವಿವಾಹ ಮಂದೂಡಿಕೆಯಾಗಿರುವುದರಿಂದ ಅರ್ಜಿ ಸಲ್ಲಿಸಿರುವ ವಧು- ವರರು ಹಾಗೂ ಕುಟುಂಬಸ್ಥರು ಪ್ರಾಧಿಕಾರದ ಕಾರ್ಯವೈಖರಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ದಿನಾಂಕವನ್ನು ಶೀಘ್ರ ನಿಗದಿಪಡಿಸುವಂತೆ ಒತ್ತಾಯಿಸಿದ್ದು, ಕಾದು ಕುಳಿತಿದ್ದಾರೆ. ಫೋಟೋ 28 ಹನೂರು 1 ಮಲೆಮಹದೇಶ್ವರ ಬೆಟ್ಟದ ಸಾಲೂರು ಬೃಹನ್ಮಠದಲ್ಲಿ ಸೋಮವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ. 28 ಹನೂರು 1 ಎ ಮಹದೇಶ್ವರ ಬೆಟ್ಟದ ಬೊಮ್ಮೇಶ್ವರ ದೇಗುಲದಲ್ಲಿ ಚಾಮರಾಜನಗರದ ಸವಿತಾ-ಮಹದೇವಪ್ಪ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.