ಮೈಸೂರು: ಹಿಂದಿನ ವರ್ಷ ನಾಡಹಬ್ಬ ದಸರಾದಲ್ಲಿ ಗರ್ಭಿಣಿ ಆನೆಯನ್ನು ಕರೆತಂದು ಮುಜುಗರಕ್ಕೀಡಾಗಿದ್ದ ಅರಣ್ಯ ಅಧಿಕಾರಿಗಳು ಈ ಬಾರಿ ಎಚ್ಚರಿಕೆಯಿಂದ ಆಯ್ಕೆ ನಡೆಸಿದ್ದಾರೆ. ಅದರಂತೆ, ಕಳೆದ ವರ್ಷ ದಸರಾದಲ್ಲಿ ಭಾಗವಹಿಸಿದ್ದ ಆನೆ ಚೈತ್ರಾ ಗರ್ಭ ಧರಿಸಿರುವುದರಿಂದ ಈ ಬಾರಿ ದಸರಾದಲ್ಲಿ ಭಾಗವಹಿಸುತ್ತಿಲ್ಲ. ಅಂತೆಯೆ, ಮದವೇರಿದ ಕಾರಣಕ್ಕೆ ಗಂಡಾನೆ ವಿಕ್ರಮ ನಾಡಹಬ್ಬದಿಂದ ದೂರು ಉಳಿಯುವಂತಾಗಿದೆ.
ಹೆಣ್ಣಾನೆಗಳ ಗರ್ಭಧಾರಣೆ ಪರೀಕ್ಷೆ ನಡೆಸಲಾಗಿದ್ದು, ಬಂಡೀಪುರದ ರಾಂಪುರ ಕ್ಯಾಂಪ್‌ನ ಚೈತ್ರಾ(50) ಆನೆ ಗರ್ಭ ಧರಿಸಿರುವುದು ದೃಡಪಟ್ಟಿದೆ. ಅಲ್ಲದೆ, ನಾಡಹಬ್ಬದಲ್ಲಿ ಭಾಗವಹಿಸಲು ಆಯ್ಕೆಯಾಗಿ ಅರಮನೆ ಆವರಣಕ್ಕೆ ಬಂದಿದ್ದರೂ ಮದವೇರಿದ್ದರಿಂದ ಎರಡು ವರ್ಷಗಳಿಂದ ಜಂಜೂಸವಾರಿಯಲ್ಲಿ ಭಾಗವಹಿಸದೆ ಹೊರಗೆ ಉಳಿಸಿದ್ದ ಹಾರಂಗಿ ಕ್ಯಾಂಪ್‌ನ ವಿಕ್ರಮ (59) ಆನೆಯನ್ನೂ ಈ ಬಾರಿ ಕೈಬಿಡಲಾಗಿದೆ.
ದುಬಾರೆ ಕ್ಯಾಂಪ್‌ನಲ್ಲಿರುವ ಕಾವೇರಿ(46) ಆನೆ ಮೇಲ್ನೋಟಕ್ಕೆ ಗರ್ಭ ಧರಿಸಿರುವಂತೆ ಕಂಡುಬಂದಿದ್ದ ಹಿನ್ನೆಲೆಯಲ್ಲಿ ಮೊದಲ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ವಿಫಲವಾಗಿತ್ತು. ಆದರೆ ಮತ್ತೆ ನಡೆದ ಪರೀಕ್ಷೆಯಲ್ಲಿ ಗರ್ಭ ಧರಿಸಿಲ್ಲವೆಂಬುದು ದೃಢಪಟ್ಟಿದೆ. ಆದರೆ ಹೊಟ್ಟೆನೋವು ಕಾಣಿಸಿಕೊಂಡಿರುವುದರಿಂದ ಆರೋಗ್ಯ ಸ್ಥಿತಿ ಗಮನಿಸಿ ಎರಡನೇ ತಂಡದಲ್ಲಿ ಕರೆತರುವ ಚಿಂತನೆ ನಡೆಸಲಾಗಿದೆ.
ಜಂಬೂಸವಾರಿಯಲ್ಲಿ ಅಂಬಾರಿ ಹೊತ್ತ ಅಭಿಮನ್ಯುವಿನ ಪಕ್ಕದಲ್ಲಿ ಸಾಗುತ್ತಿದ್ದ ಚೈತ್ರಾ ಹಾಗೂ ಕಾವೇರಿ ಈ ಬಾರಿ ದಸರೆಯಲ್ಲಿ ಭಾಗವಹಿಸುವುದು ಅನುಮಾನವಾಗಿರುವುದರಿಂದ ಅವುಗಳ ಜವಾಬ್ದಾರಿಯನ್ನು ಹಿರಿಯ ಹೆಣ್ಣಾನೆಗಳಿಗೆ ವಹಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. ಈ ಹಿಂದೆ ಹಲವು ಬಾರಿ ದಸರಾ ಮಹೋತ್ಸವದಲ್ಲಿ ಪಾಲ್ಗೊಂಡ ಅನುಭವ ಹೊಂದಿರುವ ದುಬಾರೆ ಶಿಬಿರದ 64 ವರ್ಷದ ವಿಜಯಾ ಹಾಗೂ ಭೀಮನಕಟ್ಟೆ ಶಿಬಿರದ 67 ವರ್ಷದ ವರಲಕ್ಷ್ಮೀ ಆನೆಗಳು ಈ ಸಲ ಕುಮ್ಕಿ ಆನೆಗಳಾಗಿ ಸಾಗುವ ಸಾಧ್ಯತೆ ಇದೆ.
ಈ ಬಾರಿ ವಿಜಯಾ ಹಾಗೂ ವರಲಕ್ಷ್ಮೀ, ಬಂಡೀಪುರದ ರಾಂಪುರ ಕ್ಯಾಂಪ್‌ನಲ್ಲಿರುವ ಹಿರಣ್ಯಾ ಹಾಗೂ ಹರವೆ ಕ್ಯಾಂಪ್‌ನ ಲಕ್ಷ್ಮೀ ಹೆಣ್ಣಾನೆಗಳನ್ನೂ ಕರೆತರಲು ಉದ್ದೇಶಿಸಲಾಗಿದೆ. ಇದರಿಂದ ಎರಡು ಹೊಸ ಹೆಣ್ಣಾನೆಗಳಿಗೆ ಅವಕಾಶ ನೀಡಿ, ಮುಂಬರುವ ವರ್ಷಗಳಲ್ಲಿ ಕುಮ್ಕಿ ಆನೆಗಳನ್ನು ಸಜ್ಜುಗೊಳಿುವ ಉದ್ದೇಶ ಇದೆ. ಸೆ.1ರಂದು ಅಂಬಾರಿ ಆನೆ ಅಭಿಮನ್ಯು ನೇತೃತ್ವದಲ್ಲಿ ಮೊದಲ ತಂಡದ 9 ಆನೆಗಳು ಆಗಮಿಸಲಿವೆ.
ದೂರ ಉಳಿದ ‘ಸೂಪರ್ ಮಾಮ್’:
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ರಾಂಪುರ ಕ್ಯಾಂಪ್‌ನಲ್ಲಿರುವ ಕುಮ್ಕಿ ಆನೆ ಚೈತ್ರಾ ದಸರಾ ಮಹೋತ್ಸವದಲ್ಲಿ ಭಾಗವಹಿಸುವ ಮೂಲಕ ಎಲ್ಲರ ಗಮನ ಸೆಳೆದಿತ್ತು. ಕ್ಯಾಂಪ್‌ನಲ್ಲಿದ್ದ ‘ಗಂಗೆ’ ಆನೆಗೆ ಜನಿಸಿದ್ದ ಚೈತ್ರಾ ಇದುವರೆಗೂ 10 ಬಾರಿ ಜಂಬೂಸವಾರಿಯಲ್ಲಿ ಭಾಗವಹಿಸಿದ ಅನುಭವ ಹೊಂದಿದೆ. ಕ್ಯಾಂಪ್‌ನಲ್ಲಿ ಬೀಡು ಬಿಟ್ಟಿರುವ ಚೈತ್ರಾ ಇದುವರೆಗೂ 13 ಮರಿಗಳಿಗೆ ಜನ್ಮ ನೀಡುವ ಮೂಲಕ ‘ಸೂಪರ್ ಮಾಮ್ (ಅಮ್ಮ)’ ಎಂದು ಅರಣ್ಯಾಧಿಕಾರಿಗಳು, ಸಿಬ್ಬಂದಿಯಿಂದ ಕರೆಸಿಕೊಳ್ಳುತ್ತಿತ್ತು. ಈಗ 14ನೇ ಮರಿಗೆ ಜನ್ಮ ನೀಡುವ ತವಕದಲ್ಲಿರುವ ಚೈತ್ರಾಳಿಗೆ ದಸರಾ ಗಜಪಡೆಯ ಸದಸ್ಯತ್ವದಿಂದ ವಿನಾಯಿತಿ ನೀಡಲಾಗಿದೆ.
ಕಳೆದ ಬಾರಿ ರಾಂಪುರ ಕ್ಯಾಂಪ್‌ನಿಂದ ಬಂದಿದ್ದ ಲಕ್ಷ್ಮೀ ಆನೆ ಜಂಬೂಸವಾರಿಗೆ 15 ದಿನ ಇರುವಂತೆ ಅರಮನೆ ಆವರಣದಲ್ಲೇ ಗಂಡು(ದತ್ತಾತ್ರೇಯ) ಮರಿಗೆ ಜನ್ಮ ನೀಡಿತ್ತು. ಪರೀಕ್ಷೆ ನಡೆಸದೆ ಆನೆಯನ್ನು ಕರೆತಂದಿದ್ದಕ್ಕೆ ಸಾರ್ವಜನಿಕರಿಂದ ತಿವ್ರ ಆಕ್ಷೇಪವೂ ವ್ಯಕ್ತವಾಗಿತ್ತು.
ಮದವೇರಿದ ವಿಕ್ರಮ:
ದಸರಾ ಮಹೋತ್ಸವದಲ್ಲಿ 19 ಬಾರಿ ಪಾಲ್ಗೊಂಡಿರುವ ಅನುಭವ ಹೊಂದಿದ್ದ ವಿಕ್ರಮ(59) ಈ ಬಾರಿಯೂ ಜಂಬೂಸವಾರಿಯಿಂದ ವಂಚಿತವಾಗಿದೆ. 2021 ಹಾಗೂ 2022ರಲ್ಲಿ ಅರಮನೆಗೆ ಬಂದಿದ್ದ ವಿಕ್ರಮನಿಗೆ ಮದ ಕಾಣಿಸಿಕೊಂಡಿದ್ದರಿಂದ ಪ್ರತ್ಯೇಕವಾಗಿ ಇರಿಸಲಾಗಿತ್ತು. ಈ ಬಾರಿಯೂ ಮದದ ಲಕ್ಷಣ ಕಾಣಿಸಿಕೊಂಡಿರುವುದರಿಂದ ದಸರಾಕ್ಕೆ ಆಯ್ಕೆ ಮಾಡದೆ ಹಾರಂಗಿ ಕ್ಯಾಂಪ್‌ನಲ್ಲಿ ಉಳಿಸಲಾಗಿದೆ. ನವರಾತ್ರಿ ಸಮಯದಲ್ಲಿ ಅರಮನೆಯಲ್ಲಿ ರಾಜವಂಶಸ್ಥರು ನಡೆಸುವ ವಿವಿಧ ಪೂಜಾ ಕೈಂಕರ್ಯಗಳಲ್ಲಿ ವಿಕ್ರಮ ಪಟ್ಟದ ಆನೆಯಾಗಿ 2015ರಿಂದ 2019ರವರೆಗೆ ಪಾಲ್ಗೊಳ್ಳುತ್ತಿತ್ತು. ತಂಡದಲ್ಲಿ ಹಿರಿಯನಾದ ಈ ಆನೆ ಅಂಬಾರಿ ಹೊರುವ ಕನಸು ಈಡೇರಲಿಲ್ಲ.
ಕಾವೇರಿ ಅನುಮಾನ:
2009ರಲ್ಲಿ ಸೋಮವಾರಪೇಟೆಯ ಆಡಿನಾಡೂರು ಅರಣ್ಯ ಪ್ರದೇಶದಲ್ಲಿ ಸೆರೆ ಸಿಕಿದ್ದ 45 ವರ್ಷದ ಕಾವೇರಿ ಆನೆ ಹತ್ತು ವರ್ಷದಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸಿಕೊಂಡು ಬರುತ್ತಿದೆ. ಅಂಬಾರಿ ಆನೆಗೆ ಕುಮ್ಕಿ ಆನೆಯಾಗಿ ಜತೆಯಾಗಿ ಸಾಗಿ ಗಮನ ಸೆಳೆದಿದ್ದ ಆನೆ ಮೇಲ್ನೋಟಕ್ಕೆ ಗರ್ಭ ಧರಿಸಿರುವಂತೆ ಕಂಡುಬಂದಿದ್ದರಿಂದ ಮೊದಲ ತಂಡದಲ್ಲಿ ಆಯ್ಕೆ ಮಾಡಿಲ್ಲ. ಕಾಲು ಹಾಗೂ ಹೊಟ್ಟೆನೋವಿನ ಸಮಸ್ಯೆಯಿಂದ ಬಳಲುತ್ತಿರುವುದರಿಂದ ಆ ವೇಳೆಗೆ ಗುಣಮುಖವಾದರೆ ಎರಡನೇ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ.