ಜಿಲ್ಲೆ

ದಸರಾದಲ್ಲಿ ಮೃಗಾಲಯಕ್ಕೆ ಹರಿದುಬಂದ ಜನಸಾಗರ

ಮೈಸೂರು: ಕರೊನೋತ್ತರ ಬಳಿಕ ದಸರಾ ಸಂದರ್ಭದಲ್ಲಿ ನಗರದ ಚಾಮರಾಜೇಂದ್ರ ಮೃಗಾಲಯದ ವೀಕ್ಷಕರ ಸಂಖ್ಯೆ ಗಣನೀಯ ಏರಿಕೆಯಾಗಿದ್ದು, ಆದಾಯದಲ್ಲೂ ಹೆಚ್ಚಳವಾಗಿದೆ.

ಕರೊನಾದಿಂದ ಎರಡು ವರ್ಷ ಸರಳವಾಗಿ ದಸರಾ ಆಚರಣೆ ಮಾಡಲಾಗಿತ್ತು. ಜತೆಗೆ, ಕೋವಿಡ್ ಭಯದಿಂದ ಪ್ರವಾಸಿಗರು ಮೈಸೂರಿಗೆ ಭೇಟಿ ನೀಡಿರಲಿಲ್ಲ. ಆಗ ಮೃಗಾಲಯದ ವೀಕ್ಷಕರ ಸಂಖ್ಯೆ ಪಾತಾಳಕ್ಕೆ ಕುಸಿದಿತ್ತು. ಆದಾಯವೂ ಖೋತಾ ಆಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಂಡಿತ್ತು. ಇಷ್ಟು ಕಡಿಮೆ ವೀಕ್ಷಕರು, ಆದಾಯ ಕುಸಿತ ಮೃಗಾಲಯ ಇತಿಹಾಸದಲ್ಲೇ ಮೊದಲು ಎನಿಸಿತ್ತು.

ಕೋವಿಡ್ ಸಂಕ್ರಮಣ ತೆರೆಮರೆಗೆ ಸರಿದು ಸಹಜ ಸ್ಥಿತಿ ನಿರ್ಮಾಣವಾಗಿದ್ದರಿಂದ ಈ ಸಲ ಅದ್ದೂರಿಯಾಗಿ ದಸರಾ ಆಚರಣೆ ಮಾಡಲಾಗಿದೆ. ನಾಡಹಬ್ಬ ವೀಕ್ಷಣೆಗೆ ವಿವಿಧೆಡೆಯಿಂದ ಜನಸಾಗರವೇ ಮೈಸೂರಿಗೆ ಹರಿದುಬಂದಿದ್ದು, ಮೃಗಾಲಯಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಸಂದರ್ಶಕರು ಭೇಟಿ ನೀಡಿದ್ದಾರೆ.
ಸೆ. 26ರಿಂದ ಅ.4ರ ವರೆಗೆ ದಸರಾ ಸಂದರ್ಭದಲ್ಲಿ ಮೃಗಾಲಯಕ್ಕೆ ಬರೋಬ್ಬರಿ 1.55 ಲಕ್ಷ ಜನರು ಭೇಟಿ ಕೊಟ್ಟಿದ್ದಾರೆ. ಇದು ಕಳೆದ 3 ವರ್ಷದಲ್ಲೇ ಅಧಿಕ. ಪ್ರವೇಶ ಶುಲ್ಕದಿಂದ 1.53 ಕೋಟಿ ರೂ. ಆದಾಯ ಬಂದಿದೆ. ಆಯುಧಪೂಜೆ(ಅ.4) ದಿನ 23,350 ಜನರು ಭೇಟಿ ಮತ್ತು 23.16 ಲಕ್ಷ ರೂ. ಆದಾಯ ಸಂಗ್ರಹವಾಗಿದೆ. ವಿಜಯದಶಮಿ(ಅ.5) ದಿನ 36,420 ಜನರು ಭೇಟಿ, 35.92 ಲಕ್ಷ ರೂ. ಆದಾಯ ಬಂದಿದೆ.

ಇದೇ ಅವಧಿಯಲ್ಲಿ 2016ರಲ್ಲಿ 1.24 ಲಕ್ಷ ಪ್ರವಾಸಿಗರು ಭೇಟಿ, 70.53 ಲಕ್ಷ ರೂ. ಆದಾಯ ಬಂದಿತ್ತು. 2017ರಲ್ಲಿ 1.23 ಲಕ್ಷ ಜನರ ಆಗಮನದಿಂದ 69.17 ಲಕ್ಷ ರೂ. ಬಂದಿತ್ತು. 2018ರಲ್ಲಿ 1.53 ಲಕ್ಷ ಜನರು ಭೇಟಿ ನೀಡಿದ್ದರಿಂದ 1.05 ಕೋಟಿ ರೂ. ಆದಾಯ ಸಂಗ್ರಹವಾಗಿತ್ತು.

2019ರಲ್ಲಿ 1.65 ಲಕ್ಷ ಸಾರ್ವಜನಿಕರು ಭೇಟಿ ನೀಡಿದ್ದರಿಂದ 1.59 ಕೋಟಿ ರೂ. ಆದಾಯ ಕ್ರೋಡೀಕರಣವಾಗಿತ್ತು. ಇದು ಈ ವರಿನ ದಾಖಲೆಯಾಗಿದೆ. ಕರೊನಾದಿಂದ 2020ರಲ್ಲಿ 20,217 ಪ್ರವಾಸಿಗರು ಭೇಟಿ ನೀಡಿದ್ದರೆ, 19.56 ಲಕ್ಷ ರೂ. ಆದಾಯ ಬಂದಿತ್ತು. 2021ರಲ್ಲೂ 75 ಸಾವಿರ ವೀಕ್ಷಕರಿಂದ 77.63 ಲಕ್ಷ ರೂ. ಸಂಗ್ರಹವಾಗಿತ್ತು. ಕರೊನಾ ಬಳಿಕ ವೀಕ್ಷಕರ ಸಂಖ್ಯೆ ಮತ್ತು ಆದಾಯದಲ್ಲೂ ವೃದ್ಧಿಯಾಗಿದೆ.
ನವರಾತ್ರಿ ಮೊದಲ ದಿನದಿಂದ ವಿಜಯದಶಮಿವರೆಗೂ ಮೃಗಾಲಯಕ್ಕೆ ಭೇಟಿ ನೀಡುವವರ ಸಂಖ್ಯೆ ಯಾವಾಗಲೂ ಏರುಗತಿಯಲ್ಲೇ ಇರುತ್ತದೆ. ಆಯುಧ ಪೂಜೆ ದಿನ ಮತ್ತು ಜಂಬೂಸವಾರಿ ದಿನ ಮಾತ್ರ ಮೂರು-ನಾಲ್ಕು ಪಟ್ಟು ಹೆಚ್ಚಾಗುತ್ತದೆ.

2016ರ ಆಯುಧ ಪೂಜೆ ದಿನ 26,191 ಜನರು ಭೇಟಿ ನೀಡಿದ್ದರಿಂದ 15.26 ಲಕ್ಷ ರೂ., 2017ರಲ್ಲಿ 15,449 ಜನರ ಭೇಟಿ ಯಿಂದ 9.36 ಲಕ್ಷ ರೂ., 2018ರಲ್ಲಿ 22,398 ಜನರು ಮತ್ತು 17.74 ಲಕ್ಷ ರೂ. ಆದಾಯ ಬಂದಿತ್ತು. 2019ರಲ್ಲಿ 30,159 ಜನರ ಆಗಮನದಿಂದ 30.22 ಲಕ್ಷ ರೂ. ಬಂದಿತ್ತು. ಆದರೆ, ಕರೊನಾದಿಂದ 2020ರಲ್ಲಿ ಆಯುಧ ಪೂಜೆ ದಿನ ಕೇವಲ 3,534 ಜನರು ಬಂದಿದ್ದು, 3,05,440 ರೂ. ಬಂದಿತ್ತು. 2021ರಲ್ಲಿ ಈ ದಿನ 9033 ಜನರ ಭೇಟಿಯಿಂದಾಗಿ 27,093 ರೂ. ಸಂಗ್ರಹವಾಗಿತ್ತು.
ಅದೇ ರೀತಿ ವಿಜಯದಶಮಿ ದಿನ 2016ರಲ್ಲಿ 25,504 ಜನರು, 15,08 ಲಕ್ಷ ರೂ.ಆದಾಯ, 2017ರಲ್ಲಿ 31,722 ವೀಕ್ಷಕರು, 18.81 ಲಕ್ಷ ರೂ. ಆದಾಯ, 2018ರಲ್ಲಿ 32,301 ವೀಕ್ಷಕರು, 25.39 ಲಕ್ಷ ರೂ. ಆದಾಯ, 2019ರಲ್ಲಿ 28,386 ಜನರು, 28.28 ಲಕ್ಷ ರೂ. ಆದಾಯ ಹರಿದು ಬಂದಿತ್ತು. ಆದರೆ, 2020ರಲ್ಲಿ 28,386 ಜನರಿಂದ 7.33 ಲಕ್ಷ ರೂ. ಬಂದಿದ್ದರು. 2021ರಲ್ಲಿ ಈ ದಿನ 27,093 ಜನರು ಬಂದಿದ್ದರೆ, 26.67 ಲಕ್ಷ ರೂ. ಕ್ರೋಡೀಕರಣಗೊಂಡಿತ್ತು.

ಅರಮನೆಗೂ ಜನಸಾಗರ
ದಸರಾದಲ್ಲಿ ಮೈಸೂರು ಅರಮನೆಗೂ ಜನಸಾಗರ ಹರಿದು ಬಂದಿದೆ. ಕಳೆದ 10 ದಿನಗಳಿಂದ 98,142 ಜನರು ಆಗಮಿಸಿದ್ದು, ಹೆಚ್ಚಿನ ಪ್ರಮಾಣದಲ್ಲಿ ಆದಾಯ ಹರಿದು ಬಂದಿದೆ. ಸೆ.26ರಂದು 4099, ಸೆ.27ರಂದು 5799, ಸೆ.28ರಂದು 5798, ಸೆ.29ರಂದು 7600 ಮತ್ತು ಸೆ.30ರಂದು 7547, ಅ.1ರಂದು 15,242, ಅ.2ರಂದು 21,062, ಅ.3ರಂದು 18,119., ಅ.4ರಂದು 12,876 ಜನರು ಅರಮನೆ ಭೇಟಿ ನೀಡಿದ್ದಾರೆ. ಆದರೆ, ಅರಮನೆಯ ವೇದಿಕೆಯ ಸಾಂಸ್ಕೃತಿಕ ಕಾರ್ಯಕ್ರಮ, ಫಲಪುಷ್ಟ ಪ್ರದರ್ಶನ, ಜಂಬೂಸವಾರಿ ಮೆರವಣಿಗೆ ವೀಕ್ಷಣೆಗಾಗಿ ಅರಮನೆಗೆ ಬಂದ ಪ್ರವಾಸಿಗರ, ಜನರ ಲೆಕ್ಕ ಇದರಲ್ಲಿ ಇಲ್ಲ.

ದಸರಾ ಸಂದರ್ಭದಲ್ಲಿ ಮೃಗಾಲಯದ ವೀಕ್ಷಕರ, ಆದಾಯದ ವಿವರ
ವರ್ಷ ವೀಕ್ಷಕರ ಸಂಖ್ಯೆ ಆದಾಯ
2016 1.24 ಲಕ್ಷ 70.53 ಲಕ್ಷ ರೂ
2017 1.23 ಲಕ್ಷ 69.17 ಲಕ್ಷ ರೂ
2018 1.53 ಲಕ್ಷ 1.05 ಕೋಟಿ ರೂ
2019 1.65 ಲಕ್ಷ 1.59 ಕೋಟಿ ರೂ
2020 20,217 19.56 ಲಕ್ಷ ರೂ
2021 75,000 77.63 ಲಕ್ಷ ರೂ
2022 1.55 ಲಕ್ಷ 1.53 ಕೋಟಿ ರೂ.