ಗುಂಡ್ಲುಪೇಟೆ: ಈ ಬಾರಿ ದಸರಾ ಉತ್ಸವದಲ್ಲಿ ಬಂಡೀಪುರದಿಂದ ಮೂರು ಆನೆಗಳು ಭಾಗವಹಿಸಲಿದ್ದು, ಆ.31ರಂದು ಗಜಪಯಣಕ್ಕೆ ಚಾಲನೆ ದೊರೆಯಲಿದೆ.
ಹುಲಿ ಯೋಜನೆಯ ರಾಂಪುರ ಆನೆ ಶಿಬಿರದ ಪಾರ್ಥಸಾರಥಿ(21), ರೋಹಿತ(17) ಹಾಗೂ ಹಿರಣ್ಯ(ಕಲ್ಪನಾ)(47) ದಸರಾದಲ್ಲಿ ಪಾಲ್ಗೊಳ್ಳಲು ಆಯ್ಕೆಯಾಗಿವೆ. ಆ.7ರಂದು ಮೈಸೂರಿನ ಡಿಸಿಎಫ್ ಸೌರಭ್ ಕುಮಾರ್ ನೇತೃತ್ವದ ತಂಡ ಶಿಬಿರದ ಎಲ್ಲ ಆನೆಗಳ ಆರೋಗ್ಯ ಹಾಗೂ ಸ್ಥಿತಿಗತಿ ಪರಿಶೀಲಿಸಿ ಅಂತಿಮವಾಗಿ ಮೂರು ಆನೆಗಳನ್ನು ಆಯ್ಕೆ ಮಾಡಿದ್ದರು. ಪಾರ್ಥಸಾರಥಿ ಹಾಗೂ ರೋಹಿತ ಶಿಬಿರದಲ್ಲೇ ಜನಿಸಿದ ಆನೆಗಳಾಗಿದ್ದರೆ, ಹಿರಣ್ಯಳನ್ನು ಕುಶಾಲನಗರದ ಆನೆ ಮನೆ ಫೌಂಡೇಷನ್‌ನಿಂದ 2021ರಲ್ಲಿ ಅರಣ್ಯ ಇಲಾಖೆಗೆ ನೀಡಲಾಗಿತ್ತು.
ಕಳೆದ ಬಾರಿ ದಸರೆಗೆ ಹೋಗಿದ್ದ ಚೈತ್ರಾ ಮೈಸೂರಿನ ಅರಮನೆಯಲ್ಲಿಯೇ ಮರಿ ಹಾಕಿದ್ದರಿಂದ ಜಂಬೂಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿಲ್ಲ. ಅದರ ಮರಿಗೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರ ಸಲಹೆ ಮೇರೆಗೆ ‘ದತ್ತಾತ್ರೇಯ’ ಎಂದು ನಾಮಕರಣ ಮಾಡಲಾಗಿತ್ತು. ದತ್ತಾತ್ರೇಯನಿಗೆ ಇನ್ನೂ ಒಂದು ವರ್ಷ ತುಂಬಿಲ್ಲದ ಕಾರಣದಿಂದ ಚೈತ್ರಾಳನ್ನು ಈ ಬಾರಿಯ ದಸರೆಗೆ ಆಯ್ಕೆ ಮಾಡಿಲ್ಲ ಎಂದು ಮೂಲಗಳು ತಿಳಿಸಿವೆ.
ಮದ್ದೂರಿನಲ್ಲಿ ಗಜಪಯಣಕ್ಕೆ ಸಿದ್ಧತೆ: ಗುರುವಾರ ಬೆಳಗ್ಗೆ ರಾಂಪುರ ಶಿಬಿರದಿಂದ ಆನೆಗಳನ್ನು ಲಾರಿಗಳಲ್ಲಿ ಮದ್ದೂರು ವಲಯಾರಣ್ಯ ಕಚೇರಿಗೆ ಕರೆತರಲಾಗುವುದು. ಅಲ್ಲಿ ಬೆಳಗ್ಗೆ 11 ಗಂಟೆಗೆ ಅಯೋಜಿಸಿರುವ ಗಜಪಯಣಕ್ಕೆ ಶಾಸಕ ಗಣೇಶ್‌ಪ್ರಸಾದ್ ಆನೆಗಳಿಗೆ ಪೂಜೆ ಸಲ್ಲಿಸುವ ಮೂಲಕ ವೀರನಹೊಸಹಳ್ಳಿಗೆ ಬೀಳ್ಕೊಡುವರು. ಅಲ್ಲಿಂದ ಜಂಬೂಸವಾರಿಗೆ ಆಯ್ಕೆಯಾದ ಎಲ್ಲ ಆನೆಗಳೊಂದಿಗೆ ಈ ಮೂರು ಆನೆಗಳನ್ನು ಸೆ.1 ರಂದು ಮೈಸೂರಿನ ಅರಮನೆಗೆ ಕರೆತರಲಾಗುವುದು ಅಧಿಕಾರಿಗಳು ತಿಳಿಸಿದ್ದಾರೆ.
ನಾಡಹಬ್ಬ ದಸರೆಗೆ ಬಂಡೀಪುರದ ಮೂರು ಆನೆಗಳು ಆಯ್ಕೆಯಾಗಿರುವುದು ತುಂಬಾ ಸಂತಸ ತಂದಿದೆ. ತಾಲೂಕಿನ ಮದ್ದೂರು ವಲಯಾರಣ್ಯ ಕಚೇರಿಯಲ್ಲಿ ಆ.31ರಂದು ಅರಣ್ಯ ಇಲಾಖೆ ಆಯೋಜಿಸಿರುವ ಗಜಪಯಣ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು.
ಎಚ್.ಎಂ.ಗಣೇಶ್‌ಪ್ರಸಾದ್, ಶಾಸಕರು.