ಮಂಜುನಾಥ ಟಿ.ಭೋವಿ ಮೈಸೂರು
ಅಂಗಾತ ಮಲಗಿರುವ ಶವ, ಸ್ವಾಗತ ಕೋರುವ ಅಸ್ಥಿಪಂಜರಗಳು, ಸುಮಾರು 10 ವರ್ಷದಿಂದ ಸಂಸ್ಕರಿಸಿಟ್ಟಿರುವ ಶವ, ಮಾನವನ ದೇಹದ ಅಂಗಾಂಗಳ ಮಾಹಿತಿ…!
ಈ ಎಲ್ಲವನ್ನೂ ನೋಡುವ, ತಿಳಿದುಕೊಳ್ಳುವ ಆಸಕ್ತಿ ಇದ್ದರೆ ಒಮ್ಮೆ ಆರೋಗ್ಯ ದಸರಾಕ್ಕೆ ಭೇಟಿ ನೀಡಿ. ನಾಡಹಬ್ಬ ದಸರಾ ಮಹೋತ್ಸವದಲ್ಲಿ ಇದೇ ಮೊದಲ ಬಾರಿಗೆ ಆರೋಗ್ಯ ದಸರಾ ಆಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಗರದ ಮೈಸೂರು ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಏರ್ಪಡಿಸಿರುವ ವೈದ್ಯಕೀಯ ವಸ್ತುಪ್ರದರ್ಶನದಲ್ಲಿ ಇದೆಲ್ಲವನ್ನೂ ವೀಕ್ಷಿಸಬಹುದು.
ಮೇಳಕ್ಕೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮಂಗಳವಾರ ಚಾಲನೆ ನೀಡಿದರು. ಅಕ್ಟೋಬರ್ 3ರ ವರೆಗೆ ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದೆ.
ಅಸ್ಥಿಪಂಜಗಳೇ ಸ್ವಾಗತಕಾರ:
ಪ್ರದರ್ಶನದ ಒಳಗೆ ಪ್ರವೇಶಿಸಿದ ತಕ್ಷಣ ಅಸ್ಥಿಪಂಜರಗಳು ನಿಮ್ಮನ್ನು ಸ್ವಾಗತಿಸುತ್ತವೆ. ಅಲ್ಲೊಂದು ಇಲ್ಲೊಂದು ಅಸ್ಥಿಪಂಜರಗಳಿದ್ದು ಭಯ ಪಟ್ಟುಕೊಳ್ಳಬಾರದಷ್ಟೇ. ಹಾಗೆ ಮುಂದೆ ಹೋದರೆ ಅಂಗಾತ ಮಲಗಿರುವ ಎರಡು ಶವಗಳಿವೆ. ಅದರಲ್ಲಿ ಒಂದು ಸುಮಾರು 10 ವರ್ಷದಷ್ಟು ಹಳೆಯದು. ಕಣ್ಣು, ಹೃದಯ ಇನ್ನಿತರ ಸೂಕ್ಷ್ಮಅಂಗಾಂಗಗಳನ್ನು ಹೊರ ತೆಗೆದು, ಎಲ್ಲ ರಕ್ತವನ್ನೂ ಬಸಿದು ಕೊಳೆಯದಂತೆ ದೇಹವನ್ನು ಸಂಸ್ಕರಣೆ ಮಾಡಲಾಗಿದೆ. ಈ ರೀತಿ ಸಂಗ್ರಹಿಸಲ್ಪಟ್ಟ ಮೃತದೇಹಗಳು ಕೊಳೆಯುವುದಿಲ್ಲ, ದುರ್ವಾಸನೆಯೂ ಬೀರುವುದಿಲ್ಲ. ಹಲವು ವರ್ಷಗಳ ಕಾಲ ಸುರಕ್ಷಿತವಾಗಿ ಇಡಬಹುದು ಎಂಬುದನ್ನು ಇಲ್ಲಿ ಪ್ರಾತ್ಯಕ್ಷಿಕೆಯಾಗಿ ತೋರಿಸಲಾಗಿದೆ.
ಒಂದು ದೇಹವನ್ನಂತೂ ಬಾಳೆಹಣ್ಣಿನಂತೆ ಸುಲಿದು ಇಡಲಾಗಿದೆ. ಸಣ್ಣ ಕರುಳು, ದೊಡ್ಡಕರುಳು, ಹೊಟ್ಟೆ, ಶ್ವಾಸಕೋಶ, ಹೃದಯ… ಹೀಗೆ ವಿವಿಧ ಅಂಗಾಂಗಗಳನ್ನು ನೈಜವಾಗಿ ವೀಕ್ಷಿಸಬಹುದು. ಧೈರ್ಯವಿದ್ದರೆ ಇದನ್ನು ಮುಟ್ಟಿ ಕೂಡ ನೋಡಬಹುದು. ಈ ರೀತಿ ಸಂಸ್ಕರಣೆ ಮಾಡಿದ ದೇಹ ವೈದ್ಯಕೀಯ ವಿದ್ಯಾರ್ಥಿಗಳ ಅಧ್ಯಯನ ಮತ್ತು ಸಂಶೋಧನೆಗೆ ಅನುಕೂಲವಾಗುತ್ತದೆ. ಆದ್ದರಿಂದ ದೇಹದಾನ ಮಾಡಲು ಸಾರ್ವಜನಿಕರು ಮುಂದಾಗಬೇಕು ಎಂದು ಈ ಮೂಲಕ ಅರಿವು ಮೂಡಿಸಲಾಗುತ್ತಿದೆ.
ದೇಹದೊಳಗಿನ ವಿವಿಧ ಅಂಗಾಂಗಗಳು, ಅವುಗಳ ಕಾರ್ಯವಿಧಾನ, ಕಾಯಿಲೆಯಿಂದ ಶರೀರಕ್ಕೆ ಆಗುವ ಬಾಧೆ ಏನು? ಇಂತಹ ಹತ್ತು ಹಲವು ಪ್ರಶ್ನೆಗಳಿಗೆ ಇಲ್ಲಿ ಉತ್ತರ ಕಂಡುಕೊಳ್ಳಬಹುದು. ದೇಹದ ಕುರಿತು ಅನೇಕ ಕೌತುಕ ಸಂಗತಿಗಳನ್ನೂ ಅರಿತುಕೊಳ್ಳಬಹುದು.
ಸಾಲು ಸಾಲು ಅಂಗಾಂಗಗಳು:
ಪ್ರತಿ ಟೇಬಲ್ ಮೇಲೆಯೂ ಸಂಸ್ಕರಣೆ ಮಾಡಿದ ಮಾನವನ ವಿವಿಧ ಅಂಗಾಂಗಗಳು, ಭ್ರೂಣಗಳನ್ನು ಗಾಜಿನ ಬಾಟಲಿನಲ್ಲಿ ಸಂಸ್ಕರಣೆ ಮಾಡಿ ಇಡಲಾಗಿದೆ. ನೀರು ತುಂಬಿದ ತಲೆಬುರುಡೆ ಇಲ್ಲಿದೆ. ಗರ್ಭಿಣಿಯಾಗಿದ್ದಾಗ ವೈದ್ಯರ ಸೂಚನೆಯಿಲ್ಲದೆ ತೆಗೆದುಕೊಂಡ ಔಷಧ ಸೇವಿಸಿದ ತಾಯಿಗೆ ಜನಿಸಿದ ಥಾಲಿಡೋಮೈಡ್ ಶಿಶು ಇದೆ. ನಿದ್ರೆಮಾತ್ರೆ (ಥಾಲಿಡೋಮೈಡ್) ಸೇವನೆಯಿಂದಾಗುವ ಅಂಗ, ಮುಖದ ವಿರೂಪ, ಜನನಾಂಗ, ಆಂತರಿಕ ಅಂಗಗಳ ಅಸಾಮಾನ್ಯ ಕ್ರಿಯೆಗಳು ಸಾಮಾನ್ಯ ಲಕ್ಷಣದ ರೂಪವನ್ನು ನೈಜವಾಗಿ ನೋಡಬಹುದು.
ಕ್ಯಾನ್ಸರ್‌ನಿಂದ ನರಳಿದ ಕರುಳು:
ಎರಡು ಅಂಡಾಣುಗಳು ಒಂದೇ ಅಂಡಾಂಶದ ಚಕ್ರದಲ್ಲಿ ಎರಡು ವಿಭಿನ್ನ ವೀರ್ಯಗಳಿಂದ ಫಲವತ್ತಾದಾಗ ಸಂಭವಿಸುವ ಡೈ ಜೈಗೋಟಿಕ್ ಅವಳಿ ಮಕ್ಕಳ ಭ್ರೂಣ ಇಲ್ಲಿದೆ. ಹುಟ್ಟಿನಿಂದ ಬಂದಿರುವ ವೈಪರೀತ್ಯಗಳಿಗೆ ಕಾರಣ ತಿಳಿಸುವ ಅಸ್ವಾಭಾವಿಕ ಭ್ರೂಣವೂ ಇದೆ. ಹುಣ್ಣು ಬಾಧಿತ ಜಠರ, ಕ್ಯಾನ್ಸರ್‌ನಿಂದ ನರಳಿದ ಸಣ್ಣ ಕರುಳು, ದೊಡ್ಡ ಕರುಳನ್ನೂ ಇಡಲಾಗಿದೆ. ಕ್ಷಯ ರೋಗದಿಂದ ಮೃತಪಟ್ಟ ವ್ಯಕ್ತಿಯ ಶ್ವಾಸಕೋಶ, ಕ್ಯಾನ್ಸರ್ ತುತ್ತಾದ ಶ್ವಾಸಕೋಶ ಇಲ್ಲಿದೆ. ಮೂತ್ರಪಿಂಡದಲ್ಲಿ ಕಲ್ಲು ಮತ್ತು ಮೂತ್ರಪಿಂಡದ ಸೋಂಕಿನ ಪರಿಣಾಮವನ್ನು ಇಲ್ಲಿ ಪ್ರತ್ಯಕ್ಷವಾಗಿ ವೀಕ್ಷಿಸಬಹುದು.
ಹೃದಯ, ಶ್ವಾಸಕೋಶ…!
ಕ್ಯಾನ್ಸರ್ ರೋಗಕ್ಕೆ ಒಳಗಾದ ಮೂಳೆಯೊಂದಿಗೆ ಸಾಮಾನ್ಯ ಮೂಳೆಯನ್ನು ನೋಡುವ ಮೂಲಕ ಎರಡರ ನಡುವಿನ ವ್ಯತ್ಯಾಸವನ್ನು ತಿಳಿದುಕೊಳ್ಳಬಹುದು. ಸೂಕ್ಷ್ಮ ಅಂಗವಾದ ಗಂಟಲು, ಕೊಬ್ಬಿನ ಗೆಡ್ಡೆಗಳು ಇಲ್ಲಿವೆ. ಚರ್ಮಕ್ಕೆ ಹೇಗೆ ಕ್ಯಾನ್ಸರ್ ಬರಲಿದೆ ಎಂಬ ವಿವರ ನೀಡುವ ಚರ್ಮಾಂಗ ನೋಡಲು ದೊರೆಯಲಿದೆ. ಇದರೊಂದಿಗೆ ಹೃದಯ, ಶ್ವಾಸಕೋಶ, ಯಕೃತ್ತು, ಮೂತ್ರಪಿಂಡ, ಮಿದುಳು ಸೇರಿದಂತೆ ವಿವಿಧ ಅಂಗಗಳ ಸಾಮಾನ್ಯ ಮತ್ತು ಅಸಾಮಾನ್ಯ ರೂಪಗಳು ಗಮನ ಸೆಳೆಯುತ್ತವೆ.
ದೇಹಕ್ಕೆ ಬರುವ ರೋಗಗಳು, ಅವುಗಳು ಹೇಗೆ ಅಂಗಾಂಗಳ ಮೇಲೆ ದುಷ್ಪರಿಣಾಮ ಬೀರುತ್ತವೆ? ಆ ರೋಗದ ಲಕ್ಷಣಗಳೇನು? ರೋಗ ಬರದಂತೆ ತಡೆಯಲು ಏನು ಮಾಡಬೇಕು? ಇಂತಹ ಆರೋಗ್ಯ ಸಂಬಂಧಿತ ಮಾಹಿತಿಗಳನ್ನು ಆಯಾ ಅಂಗಾಂಗಳ ಎದುರು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪ್ರದರ್ಶಿಸಲಾಗಿದೆ. ಪ್ರತಿ ಅಂಗಾಂಗ ಕುರಿತು ವೈದ್ಯಕೀಯ ವಿದ್ಯಾರ್ಥಿಗಳು ಮಾಹಿತಿ ನೀಡುತ್ತಾರೆ.