ಮೈಸೂರು: ದಸರಾಕ್ಕೂ ಮುನ್ನವೇ ಮೈಸೂರಿನ ಮನೆಗಳಿಗೆ ಪೈಪ್‌ಲೈನ್ ಮೂಲಕ ಗೃಹ ಬಳಕೆಯ ನೈಸರ್ಗಿಕ ಅನಿಲ ಪೂರೈಕೆ ಮಾಡಲಾಗುವುದು ಎಂದು ಅನಿಲ ವಿತರಣಾ (ಸಿಜಿಡಿ) ಕಂಪನಿಯಾದ ಎಜಿಪಿ ಪ್ರಥಮ್ ಮಾರಾಟ ವಿಭಾಗದ ನಿರ್ದೇಶಕ ನಿತಿನ್ ಹುಯಿಲಗೋಳ ತಿಳಿಸಿದರು.
ಈಗಾಗಲೇ ಕಾಮಗಾರಿ ಶುರುವಾಗಿದೆ. ಎರಡು ತಿಂಗಳಲ್ಲಿ ಪಾಲಿಕೆಯ ವ್ಯಾಪ್ತಿಯ ಮೂರು ವಾರ್ಡ್‌ಗಳಿಗೆ ಅನಿಲ ಸರಬರಾಜು ಮಾಡಲಾಗುವುದು. ಹಂತ ಹಂತವಾಗಿ ವಿಸ್ತರಣೆ ಮಾಡಲಾಗುವುದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ದುಬಾರಿ ಆಟೋ ಎಲ್‌ಪಿಜಿ ಮತ್ತು ಪೆಟ್ರೋಲ್‌ಗಿಂತ ಶೇ.50 ಮತ್ತು ಅಡುಗೆ ಅನಿಲ ಸಿಲಿಂಡರ್‌ಗಳಿಗಿಂತ ಶೇ.20 ಉಳಿತಾಯ ಮಾಡುವ ಮೂಲಕ ಮೈಸೂರಿನ ಜನತೆಗೆ ಅನುಕೂಲವಾಗಲಿದೆ. ಆ ಮೂಲಕ ಜನ ಜೀವನ ಗುಣಮಟ್ಟವನ್ನು ಸುಧಾರಿಸುತ್ತದೆ ಎಂದರು.
ಎಜಿಪಿ ಪ್ರಥಮ್ ಕಂಪನಿ ಈಗಾಗಲೇ ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ 15 ಸಿಎನ್‌ಜಿ ಕೇಂದ್ರಗಳನ್ನು ಸ್ಥಾಪಿಸಿದೆ. ಮೈಸೂರು ನಗರದಲ್ಲಿ 7 ಕೇಂದ್ರಗಳಿವೆ. ಕರ್ನಾಟಕಕ್ಕೆ ತನ್ನ ವ್ಯವಹಾರ ವಿಸ್ತರಣೆ ಕಾರ್ಯತಂತ್ರದ ಭಾಗವಾಗಿ, ಎಜಿಪಿ ಪ್ರಥಮ್ ಮಾರ್ಚ್ 2023ರೊಳಗೆ 42 ಸಿಎನ್‌ಜಿ ಫಿಲ್ಲಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸುವ ಗುರಿಹೊಂದಿದೆ. 2027ರ ಹೊತ್ತಿಗೆ ರಾಜ್ಯದಲ್ಲಿ 5 ಸಾವಿರ ಕೋಟಿ ರೂ. ಹೂಡಿಕೆಯೊಂದಿಗೆ 6 ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ ಒದಗಿಸಲಾಗುವುದು ಎಂದು ಮಾಹಿತಿ ನೀಡಿದರು.
ಮೈಸೂರು ಎಲ್‌ಸಿಎನ್‌ಜಿ ಯೋಜನೆ: ಎಜಿಪಿ ಪ್ರಥಮ್ ನಂಜನಗೂಡು ಕೈಗಾರಿಕಾ ಪ್ರದೇಶದಲ್ಲಿ ಒಂದು ಎಲ್‌ಸಿಎನ್‌ಜಿ ಕೇಂದ್ರವನ್ನು ಹೊಂದಿದೆ. 2ನೇ ಸ್ಟೇಷನ್ ಅನ್ನು ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿ ನಿರ್ಮಿಸಲಾಗಿದೆ ಎಂದು ತಿಳಿಸಿದರು.
ಕಂಪನಿಯು ಪಿಎನ್‌ಜಿಆರ್‌ಜಿ, ಪಿಇಎಸ್‌ಒ, ಫ್ಯಾಕ್ಟರಿಗಳು ಮತ್ತು ಬಾಯ್ಲರ್‌ಗಳು ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಎಲ್ಲ ಮಾನದಂಡಗಳನ್ನು ಅನುಸರಿಸಿ ಮೈಸೂರು ಎಲ್‌ಸಿಎನ್‌ಜಿ ಕೇಂದ್ರವನ್ನು ವಿನ್ಯಾಸಗೊಳಿಸಲಾಗಿದ್ದು, ಅತ್ಯುನ್ನತ ಅಂತಾರಾಷ್ಟ್ರೀಯ ಸುರಕ್ಷತಾ ಮಾನದಂಡಗಳಿಗೆ ಅನುಸಾರವಾಗಿ ನಿರ್ಮಿಸಲಾಗಿದೆ ಎಂದರು.