ಮಂಡ್ಯ : ರೈತರ ಬೆಳೆಗಳಿಗೆ ಸರ್ಕಾರ ನ್ಯಾಯಯುತ ಬೆಲೆ ನೀಡಬೇಕು ಮತ್ತು ಕಬ್ಬಿಗೆ ಎಫ್.ಆರ್.ಪಿ. ದರ ನಿಗದಿ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಮದ್ದೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಪ್ರತಿಭಟನೆ ಮಾಡಲಾಯಿತು.
ಇಲ್ಲದಿದ್ದರೆ ನಾಡಹಬ್ಬ ದಸರಾಕ್ಕೆ ಸಾರ್ವಜನಿಕರು ಹೋಗದಂತೆ ಬೆಂಗಳೂರು -ಮೈಸೂರು ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಎಲ್ಲ ಮಾರ್ಗಗಳಲ್ಲಿ ವಾಹನ ಸಂಚಾರ ತಡೆಯಲಾಗುವುದು ಎಂದು ಎಚ್ಚರಿಸಿದರು.
ರೈತ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಮಧುಚಂದನ್ ಮಾತನಾಡಿ, ವಿದ್ಯುತ್ ಖಾಸಗೀಕರಣ, ಕಬ್ಬಿಗೆ ಬೆಂಬಲ ಬೆಲೆ, ಕೆಆರ್‌ಎಸ್ ಸುತ್ತಮುತ್ತ ಅಕ್ರಮವಾಗಿ ನಡೆಯುತ್ತಿರುವ ಗಣಿಗಾರಿಕೆಯನ್ನು ಶಾಶ್ವತವಾಗಿ ರದ್ದುಗೊಳಿಸಬೇಕೆಂದು ಒತ್ತಾಯಿಸಿ ಮೈಸೂರು ನಗರಕ್ಕೆ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳನ್ನು ಬಂದ್ ಮಾಡಿ ನಾಡಹಬ್ಬ ದಸರಾಗೆ ಹೋಗದಂತೆ ತಡೆಯಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ರೈತರು ಇಂದು ಹಲವು ರೀತಿಯ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಸಮಸ್ಯೆಗಳನ್ನು ಸರ್ಕಾರ ಸರಿಪಡಿಸದೆ ಮೈಸೂರಿನಲ್ಲಿ ಆಡಂಬರ ದಸರಾ ಮಾಡುವುದು ಎಷ್ಟು ಸರಿ? ರೈತರ ಬೇಡಿಕೆಗಳನ್ನು ಸರ್ಕಾರದ ಈಡೇರಿಸದೆ ಹೋದರೆ ದಸರಾಗೆ ಅಡ್ಡಿಪಡಿಸುವುದು ಖಚಿತ ಎಂದರು.
ಸೆ.12 ರಂದು ಮಂಡ್ಯದ ಸಿಲ್ವರ್ ಜ್ಯುಬಿಲಿ ಉದ್ಯಾನವನದಲ್ಲಿ ಬೃಹತ್ ರೈತ ಸಮಾವೇಶ ಆಯೋಜಿಸಲಾಗಿದೆ. ಸಮಾವೇಶದಲ್ಲಿ 15 ಸಾವಿರಕ್ಕೂ ಹೆಚ್ಚು ರೈತರು ಭಾಗವಹಿಸಲಿದ್ದಾರೆ. ಸಮಾವೇಶದಲ್ಲಿ ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಿ ಮುಂದಿನ ಹೋರಾಟಗಳ ಬಗ್ಗೆ ರೂಪುರೇಷೆ ಕೈಗೊಂಡು ಸಂಘಟನೆಯನ್ನು ಬಲಗೊಳಿಸುವುದಾಗಿ ಹೇಳಿದರು.
ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷ ರಾಮಕೃಷ್ಣ, ಕಾರ್ಯದರ್ಶಿ ವಿನೋದ್ ಬಾಬು, ಮುಖಂಡರಾದ ಜಿ.ಎ.ಶಂಕರ್, ಲಿಂಗಾಪ್ಪಾಜಿ, ರವಿಕುಮಾರ್, ವರದರಾಜು, ಪುಟ್ಟಸ್ವಾಮಿ, ದಯಾನಂದ, ನಾಗರಾಜ್, ರವಿ, ಸಿದ್ದೇಗೌಡ, ಶ್ರೀನಿವಾಸ್ ಇತರರಿದ್ದರು.