ಜಿಲ್ಲೆ

ದಸರಾ ಸಭೆಯಲ್ಲಿ ಸಚಿವ-ಎಂಎಲ್ಸಿ ನಡುವೆ ಜಟಾಪಟಿ

ಮೈಸೂರು: ದಸರಾ ಗಜಪಡೆಯನ್ನು ಮೈಸೂರಿಗೆ ಕರೆತರುವ ಕುರಿತು ಸಚಿವ ಎಸ್.ಟಿ. ಸೋಮಶೇಖರ್ ಮತ್ತು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ನಡುವೆ ತುರುಸಿನ ಚರ್ಚೆ ನಡೆಯಿತು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಕರೆದಿದ್ದ ದಸರಾ ಮಹೋತ್ಸವದ ಜಿಲ್ಲಾ ಮಟ್ಟದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ವಿಶ್ವನಾಥ್, ದಸರಾಕ್ಕೆ ಗಜಪಯಣವೇ ಕೇಂದ್ರಬಿಂದು ಆಗಿದೆ. ದಸರಾ ಶುರುವಾಯಿತು ಎಂಬ ಸಂದೇಶ ಈ ಮೂಲಕ ರವಾನೆ ಆಗಲಿದೆ. ಆದರೆ, ಆನೆಗಳಿಗೆ ಪೂಜೆ ಮಾಡಿ ಅವುಗಳನ್ನು ವೀರನಹೊಸಳ್ಳಿಯಿಂದ ಮೈಸೂರಿಗೆ ಲಾರಿಗಳಲ್ಲಿ ಸಾಗಿಸಲಾಗುತ್ತಿದೆ. ಇದರಿಂದ ಗಜಪಯಣದ ಆಶಯವೇ ಸಾಕಾರವಾಗಲ್ಲ. ಕಾಲ್ನಡಿಗೆಯಲ್ಲಿ ಕರೆತರಲು ಇರುವ ಸಮಸ್ಯೆಯಾದರೂ ಏನು ಎಂದು ಸಿಟ್ಟಿನಿಂದ ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಎಫ್ ಡಾ.ವಿ.ಕರಿಕಾಳನ್, ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಆನೆಗಳನ್ನು ನಿತ್ಯ 15 ಕಿ.ಮೀ.ಗಿಂತ ಹೆಚ್ಚು ನಡೆಸುವಂತಿಲ್ಲ. ರಕ್ಷಣೆಯ ದೃಷ್ಟಿಯಿಂದ ಜನನಿಬಿಡ ರಸ್ತೆಯಲ್ಲಿ ನಡೆಸಿಕೊಂಡು ಬರುವಂತಿಲ್ಲ. ವೀರನಹೊಸಳ್ಳಿಯಿಂದ ಮೈಸೂರಿಗೆ 72 ಕಿ.ಮೀ. ಆಗುತ್ತದೆ. ಆ.10ರಂದು ಅರಮನೆಯಲ್ಲಿ ಆನೆಗಳ ಸ್ವಾಗತ ಕಾರ್ಯಕ್ರಮ ನಿಗದಿಯಾಗಿದೆ. ಆದ್ದರಿಂದ ಆ ಸಮಯಕ್ಕೆ ತಲುಪಲು ಆನೆಗಳನ್ನು ನಿತ್ಯ 26 ಕಿ.ಮೀ. ನಡೆಸಬೇಕಾಗುತ್ತದೆ ಎಂದು ವಿವರಿಸಿ ಮನವೊಲಿಕೆಗೆ ಯತ್ನಿಸಿದರು.
ಆದರೆ, ಇದರಿಂದ ಇನ್ನಷ್ಟು ಕೆರಳಿದ ವಿಶ್ವನಾಥ್, ನೆಪ ಹೇಳಬೇಡಿ. ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಜಿಲ್ಲಾಧಿಕಾರಿ ಇಲ್ಲೇ ಇದ್ದಾರೆ. ಈಗಲೇ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಇಲ್ಲೇ ತೀರ್ಮಾನಿಸಿ. ಇಲ್ಲವಾದರೆ ಗಜಪಯಣದ ವೇಳೆ ನಾನು ರಸ್ತೆಯಲ್ಲಿ ಮಲಗಿ ಪ್ರತಿಭಟನೆ ದಾಖಲಿಸುವೆ ಎಂದು ಎಚ್ಚರಿಸಿದರು.

ಆಗ ಮಧ್ಯಪ್ರವೇಶಿಸಿದ ಶಾಸಕ ತನ್ವೀರ್‌ಸೇಠ್, ಈಗಾಗಲೇ ಗಜಪಯಣ ಹಾಗೂ ಸ್ವಾಗತ ಕಾರ್ಯಕ್ರಮದ ದಿನಾಂಕ ನಿಗದಿಯಾಗಿದೆ. ಆನೆಗಳನ್ನು ನಡೆಸಿಕೊಂಡು ಬರುವ ಕುರಿತು ಮುಂದಿನ ವರ್ಷ ನೋಡೋಣ ಎಂದರು. ಅದನ್ನು ಒಪ್ಪದ ವಿಶ್ವನಾಥ್, ಆನೆಗಳನ್ನು ಸ್ವಾಗತಿಸುವುದನ್ನು ಎರಡು ದಿನ ಮುಂದೂಡಬಹುದು. ಇದರಿಂದ ಯಾವುದೇ ಸಮಸ್ಯೆಯಾಗಲ್ಲ ಎಂದು ವಾದಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಎಸ್.ಟಿ.ಸೋಮಶೇಖರ್, ಡಿಸಿ, ಡಿಸಿಎಫ್ ಮೇಲೆ ಒತ್ತಡ ಹೇರಲಾಗದು. ಅರಣ್ಯ ಸಚಿವರ ಜತೆ ಚರ್ಚಿಸಿ ತೀರ್ಮಾನಿಸಲಾಗುವುದು. ಹಿರಿಯ ಅಧಿಕಾರಿಗಳು ಇಲ್ಲದೆ ಇಂತಹ ತೀರ್ಮಾನ ಅಸಾಧ್ಯ ಎಂದರು. ಆದರೂ ವಿಶ್ವನಾಥ್ ಸಮಾಧಾನಗೊಳ್ಳಲಿಲ್ಲ.

ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಎಸ್.ಟಿ.ಸೋಮಶೇಖರ್, ಗಜಪಯಣ ಕಾರ್ಯಕ್ರಮಕ್ಕಾಗಿ ಅರಣ್ಯ ಸಚಿವರು ಈಗಾಗಲೇ ಜಿಲ್ಲೆಗೆ ಬಂದಿದ್ದು, ಅವರೊಂದಿಗೆ ಚರ್ಚಿಸಿ ಈ ಕುರಿತು ನಿರ್ಧಾರಕ್ಕೆ ಬರಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ದಸರಾ ಕಾರ್ಯಕ್ರಮ ಆಯೋಜನೆ, ಅನುದಾನ ಬಿಡುಗಡೆ ಕುರಿತು ಚರ್ಚೆ ನಡೆಯಿತು. ಈ ಬಾರಿಯ ದಸರಾದಲ್ಲಿ ಪ್ರವಾಸೋದ್ಯಮ, ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಒತ್ತು ನೀಡುವುದು ಮಾತ್ರವಲ್ಲದೆ ‘ಬ್ರ್ಯಾಂಡ್ ಮೈಸೂರು’ಗೆ ಪೂರಕವಾಗಿ ಯೋಜನೆ ರೂಪಿಸುವಂತೆ ಸಚಿವರು ಸಲಹೆ ನೀಡಿದರು.
ಗಜಪಡೆ ಮಾಹಿತಿಯನ್ನು ಒಳಗೊಂಡ ಪೋಸ್ಟರ್ ಬಿಡುಗಡೆಗೊಳಿಸಲಾಯಿತು. ಎಂಎಲ್‌ಸಿ ಡಾ. ತಿಮ್ಮಯ್ಯ, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಎಸ್‌ಪಿ ಆರ್.ಚೇತನ್ ಇನ್ನಿತರರು ಪಾಲ್ಗೊಂಡಿದ್ದರು.

ದಸರಾ ಸಂದರ್ಭದಲ್ಲಿ ನಿತ್ಯ ಒಂದೊಂದು ಉದ್ಯಾನದಲ್ಲಿ ಕಾರ್ಯಕ್ರಮ ನಡೆಸಬೇಕು. ಇದರಿಂದ ಸ್ಥಳೀಯ ಜನರಿಗೆ ವೀಕ್ಷಿಸಲು ಮತ್ತು ಸಂಭ್ರಮಿಸಲು ಅವಕಾಶ ದೊರೆಯಲಿದೆ. ರಂಗೋಲಿ, ನೃತ್ಯ, ಸಂಗೀತ ಮೊದಲಾದ ಕಾರ್ಯಕ್ರಮ ಆಯೋಜಿಸಿದರೆ ನಗರದ ಹೃದಯ ಭಾಗಕ್ಕೆ ಬರುವ ಜನರ ಒತ್ತಡ ಕಡಿಮೆಯಾಗುತ್ತದೆ.
ತನ್ವೀರ್ ಸೇಠ್, ಶಾಸಕ

ಸಮ್ಮಿಶ್ರ ಸರ್ಕಾರ ಇದ್ದಾಗ ಹಲವು ಗೊಂದಲದಿಂದ ಅಧಿಕಾರೇತರ ಉಪ ಸಮಿತಿಗಳನ್ನು ರಚನೆ ಮಾಡಿರಲಿಲ್ಲ. ಈ ಸಲ ಉಪಸಮಿತಿಗಳನ್ನು ರಚಿಸಿ ಮುಖಂಡರು, ಕಾರ್ಯಕರ್ತರನ್ನು ನೇಮಿಸಿದರೆ ತಪ್ಪೇನೂ ಇಲ್ಲ. ಸಮಿತಿಯಲ್ಲಿ ಎಲ್ಲರಿಗೂ ಅವಕಾಶ ಮಾಡಿಕೊಡಬೇಕು. ಮಳೆಯಿಂದ ಹಾನಿಗೊಳಗಾದ ನಗರದ ರಸ್ತೆಗಳನ್ನು ದುರಸ್ತಿ ಮಾಡಬೇಕು.
ಸಾ.ರಾ.ಮಹೇಶ್, ಶಾಸಕ

ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಇರುವ ಪುರಸಭೆ, ನಗರಸಭೆ, ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿ ಸದಸ್ಯರಿಗೆ ದಸರೆಗೆ 2 ಪಾಸ್ ನೀಡಬೇಕು. ಆನ್‌ಲೈನ್ ಟಿಕೆಟ್ ಎಲ್ಲರಿಗೂ ಸಿಗಲ್ಲ. ಸ್ಥಳೀಯ ಚುನಾಯಿತ ಪ್ರತಿನಿಧಿಗಳಿಗೆ ಇದು ಸಿಗುವಂತೆ ಮಾಡಬೇಕು.
ಬಿ.ಹರ್ಷವರ್ಧನ್, ಶಾಸಕ

ದಸರಾ ಸಂದರ್ಭದಲ್ಲಿ ಮೈಸೂರು, ಚಾಮರಾಜನಗರ, ಮಂಡ್ಯ, ಕೊಡಗು ಜಿಲ್ಲೆಗಳಿಗೆ ತೆರಳುವ ವಿವಿಧ ರೀತಿಯ 13 ಪ್ಯಾಕೇಜ್ ಟೂರ್ ರೂಪಿಸಲಾಗಿದೆ. ನಗರದಲ್ಲಿ ಅಂಬಾರಿ ಬಸ್ ಓಡಾಟಕ್ಕೆ ಅನುಕೂಲ ಮಾಡಿಕೊಡಲು ವಿದ್ಯುತ್ ಅಲಂಕಾರ ಮಾಡುವಾಗ ಎತ್ತರಕ್ಕೆ ಅಳವಡಿಸಬೇಕು.
ಕಾ.ಪು.ಸಿದ್ದಲಿಂಗಸ್ವಾಮಿ, ಅಧ್ಯಕ್ಷ, ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ

ದಸರಾ ಉದ್ಘಾಟನೆಗೆ ಹಿರಿಯ ನಟ ರಜನಿಕಾಂತ್ ಮತ್ತು ಸಂಗೀತ ನಿರ್ದೇಶಕ ಇಳಯರಾಜ್ ಅವರನ್ನು ಪರಿಗಣಿಸಬೇಕು. ಅರಮನೆ ಇತಿಹಾಸ ಬಿಂಬಿಸುವ ಸ್ತಬ್ಧಚಿತ್ರ ರಚಿಸಬೇಕು. ಹೊರರಾಜ್ಯದ ಸ್ತಬ್ಧಚಿತ್ರಗಳು ಪಾಲ್ಗೊಳ್ಳುವಂತೆ ಮಾಡಬೇಕು.
ಆರ್.ರಘು, ಅಧ್ಯಕ್ಷ, ಮೈಲ್ಯಾಕ್

ಮೈಸೂರು ವಿಮಾನ ನಿಲ್ದಾಣದಿಂದ ವಿಶೇಷ ವಿಮಾನಗಳ ಹಾರಾಟ ವ್ಯವಸ್ಥೆ ಮಾಡಬೇಕು. ಇದರಿಂದಾಗಿ ಹೊರರಾಜ್ಯದಿಂದ ಬರುವ ಪ್ರವಾಸಿಗರಿಗೆ ಅನುಕೂಲ ಆಗಲಿದೆ.
ಜಿ.ನಿಜಗುಣರಾಜು, ಅಧ್ಯಕ್ಷ, ಕಾಡಾ

ದಸರಾಕ್ಕೂ ಮುನ್ನ ಮೈಸೂರಿನ ರಸ್ತೆಗಳ ಗುಂಡಿ ಮುಚ್ಚಬೇಕು. ಜಂಬೂಸವಾರಿ ಹಾದು ಹೋಗುವ ಮೂರು ವೃತ್ತಗಳು ಹಾಳಾಗಿರುವುದರಿಂದ ತಕ್ಷಣವೇ ದುರಸ್ತಿ ಮಾಡಿಸಬೇಕು. ಪಾಲಿಕೆಗೆ ಹೆಚ್ಚುವರಿ ಅನುದಾನ ಕೊಡಬೇಕು.
ಸುನಂದಾ ಪಾಲನೇತ್ರ, ಮೇಯರ್

ಮೈಸೂರು- ಬೆಂಗಳೂರು ನಡುವೆ ವಿಮಾನದಲ್ಲಿ ಸಂಚರಿಸುವ ಪ್ರಯಾಣಿಕರಿಗೆ ದಸರಾ ಸಂದರ್ಭದಲ್ಲಿ ವಿನಾಯಿತಿ ಕೊಡಬೇಕು. ಹಿಂದಿನ ವರ್ಷಗಳಲ್ಲಿ ಒಂದು ಸಾವಿರ ರೂ. ನಿಗದಿಪಡಿಸಿ ಕರ್ನಾಟಕ ಪ್ರವಾಸೋದ್ಯಮ ನಿಗಮದಿಂದ ಉಳಿದ ಮೊತ್ತ ಪಾವತಿಸಲಾಗಿತ್ತು. ಇದು ಈ ಸಲವೂ ಮುಂದುವರಿಯಲಿ.

ಸಿ.ಎನ್.ಮಂಜೇಗೌಡ, ಎಂಎಲ್‌ಸಿ