ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಮೂರು ತಿಂಗಳು ನಡೆಯುವ ದಸರಾ ವಸ್ತುಪ್ರದರ್ಶನ ನಿರ್ವಹಣೆಯ ಜವಾಬ್ದಾರಿ ಫನ್ ವರ್ಲ್ಡ್ ಸಂಸ್ಥೆ ವಹಿಸಿಕೊಂಡಿದೆ. 11.54 ಕೋಟಿ ರೂ.ಟೆಂಡರ್ ಆಗಿದೆ.
ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರವು ಜಾಗತಿಕ ಟೆಂಡರ್ ಕರೆದಿತ್ತು. ಈ ಬಾರಿ ಪ್ರಾಧಿಕಾರವು 11.50 ಕೋಟಿ ರೂ.ಮೊತ್ತ ಟೆಂಡರ್ ನಿಗದಿ ಮಾಡಿತ್ತು. ಟೆಂಡರ್ ಪ್ರಕ್ರಿಯೆಯಲ್ಲಿ ಎರಡು ಸಂಸ್ಥೆಗಳು ಮಾತ್ರ ಪಾಲ್ಗೊಂಡಿದ್ದವು.
ನಿಯಮಾನುಸಾರ ಹಣಕಾಸಿನ ಬಿಡ್ ತೆರೆದಾಗ 11.54 ಕೋಟಿ ರೂ.ಗೆ ಟೆಂಡರ್‌ನ ಮೊತ್ತ ನಮೂದಿಸಿದ್ದ ಫನ್ ವರ್ಲ್ಡ್ ಸಂಸ್ಥೆಗೆ ಪ್ರಸಕ್ತ ಸಾಲಿನ ದಸರಾವಸ್ತು ಪ್ರದರ್ಶನದ ಟೆಂಡರ್ ದೊರೆತಿದೆ.
ಕಳೆದ ವರ್ಷ 9.67 ಕೋಟಿ ರೂ.ಗೆ ಟೆಂಡರ್ ಮೊತ್ತ ನಿಗದಿಯಾಗಿತ್ತು. ಆದರೆ, 10.03 ಕೋಟಿ ರೂ.ಗೆ ಫನ್ ವರ್ಲ್ಡ್ ಸಂಸ್ಥೆ ಟೆಂಡರ್ ಪಡೆದಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಲ ಟೆಂಡರ್ ಮೊತ್ತದಲ್ಲಿ 1.51 ಕೋಟಿ ರೂ. ಹೆಚ್ಚಳವಾಗಿದೆ.
ವಸ್ತು ಪ್ರದರ್ಶನದ ಪ್ರವೇಶ ಶುಲ್ಕ, ವಾಹನ ನಿಲುಗಡೆ ಶುಲ್ಕ ಸಂಗ್ರಹದೊದಿಗೆ ದಸರಾ ವಸ್ತು ಪ್ರದರ್ಶನದ ಆವರಣದಲ್ಲಿರುವ ಎ ಬ್ಲಾಕ್ ವಾಣಿಜ್ಯ ಮಳಿಗೆ, ಅಮ್ಯೂಸ್‌ಮೆಂಟ್ ಪಾರ್ಕ್, ಆಹಾರ ಮಳಿಗೆಗಳ ಜವಾಬ್ದಾರಿ ನೀಡಲಾಗುತ್ತದೆ. ವಸ್ತು ಪ್ರದರ್ಶನದ ಒಳಗಿನ ಮಳಿಗೆಗಳ ಬಾಡಿಗೆ ಟೆಂಡರ್ ಪಡೆದ ಸಂಸ್ಥೆ ಪಡೆಯಲಿದೆ.
ಪ್ರಾಧಿಕಾರದ ವತಿಯಿಂದ ವಿವಿಧ ಜಿಲ್ಲಾ ಪಂಚಾಯಿತಿ ವತಿಯಿಂದ ಸರ್ಕಾರಿ ಮಳಿಗೆಗಳು, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗುತ್ತದೆ.
ದಸರಾ ವಸ್ತು ಪ್ರದರ್ಶನ ಈ ಬಾರಿ ಪ್ರವಾಸಿಗರಿಗೆ ಆಕರ್ಷಕ ಅನುಭವ ನೀಡಲಿದೆ. ಈಗಾಗಲೇ ಬೇಲೂರು, ಹಳೆಬೀಡು ಶೈಲಿಯಲ್ಲಿ ಎ ಬ್ಲಾಕ್ ಮಳಿಗೆಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ.
ಸೆ. 22ರಿಂದಲೇ ಪೂರ್ಣ ಪ್ರಮಾಣದಲ್ಲಿ ವಸ್ತು ಪ್ರದರ್ಶನ ಆರಂಭಗೊಳ್ಳಲಿದೆ. ಸರ್ಕಾರಿ ಮಳಿಗೆಗಳನ್ನು ನಿಗದಿ ಅವಧಿಯಲ್ಲೇ ನಿರ್ಮಿಸುವಂತೆ ಎಲ್ಲ ಜಿಪಂಗಳಿಗೆ ಪತ್ರ ಬರೆಯಲಾಗಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್ ತಿಳಿಸಿದ್ದಾರೆ.