ಮೈಸೂರು: ದಸರಾ ಮಹೋತ್ಸವ ಅಂಗವಾಗಿ ರಾಜ್ಯ ಮಟ್ಟದ ಚಿತ್ರಕಲಾ ಶಿಬಿರಕ್ಕೆ ಶುಕ್ರವಾರ ಚಾಲನೆ ದೊರೆಯಿತು.
ಲಲಿತಕಲೆ ಮತ್ತು ಕರಕುಶಲ ಉಪಸಮಿತಿ, ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಸಹಯೋಗದಲ್ಲಿ ಕಲಾಮಂದಿರದ ಆವರಣದಲ್ಲಿ ಆಯೋಜಿಸಿರುವ ಶಿಬಿರ ಮೂರು ದಿನಗಳ ಕಾಲ ನಡೆಯಲಿದೆ.
ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿರುವ ಕಲಾವಿದರಾದ ಕೃಷ್ಣ ಜಿಂಗಾಡೆ, ಗಂಗಾಧರ ಮಾಯಾಚಾರಿ, ಎಂ.ಪಿ.ದೀಪಕ್‌ಕುಮಾರ್, ಹರ್ಷ, ಮಂಜುನಾಥ ವಾಲಿ, ಅಚ್ಚುತಾನಂದ, ಲೋಕೇಶ್, ವೀಣಾಗೌಡ, ಎಚ್.ಶಿವಕುಮಾರ್, ಜಯಶ್ರೀ, ಸಂತೋಷ್, ಪಿ.ನಾಗರಾಜು, ನಾಗಶಯನ, ಎಸ್.ರಶ್ಮಿ, ಶಿವಣ್ಣ ಸೇರಿದಂತೆ 15 ಚಿತ್ರ ಕಲಾವಿದರು ಪಾಲ್ಗೊಂಡಿದ್ದರು.
ಶಾಸಕ ಎಲ್.ನಾಗೇಂದ್ರ ಮಾತನಾಡಿ, ನಶಿಸಿ ಹೋಗುತ್ತಿರುವ ಕಲೆಗಳನ್ನು ಸಂರಕ್ಷಿಸಲು ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಹಸ್ತ್ ಶಿಲ್ಪ ವಿಕಾಸ್ ಯೋಜನಾ, ಮೆಗಾ ಕ್ಲಸ್ಟರ್ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ರಾಜ್ಯ ಸರ್ಕಾರ ಕೂಡ ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಿದೆ. ದಸರಾ ಉತ್ಸವ ಕಲೆಗಳಿಗೆ ಉತ್ತೇಜನ ನೀಡುವ ವೇದಿಕೆಯಾಗಿದೆ ಎಂದು ನುಡಿದರು.
ಲಲಿತಕಲೆ ಮತ್ತು ಕರಕುಶಲ ಉಪಸಮಿತಿ ಕಾರ್ಯಾಧ್ಯಕ್ಷರೂ ಆದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ ಮಾತನಾಡಿ, ಚಿತ್ರಕಲಾ ಶಿಬಿರದಲ್ಲಿ ಮೈಸೂರಿನ ಪಾರಂಪರಿಕ ಕಟ್ಟಡಗಳು, ಪ್ರವಾಸಿ ತಾಣಗಳು ರಚನೆಯಾಗಲಿವೆ. ಸೆ.3ರ ನಂತರ ಇಲ್ಲಿ ರಚನೆಯಾದ ಕಲಾಕೃತಿಗಳ ಮಾರಾಟವೂ ನಡೆಯಲಿದ್ದು, ಕಲಾವಿದರ ಬ್ಯಾಂಕ್ ಖಾತೆಗಳಿಗೆ ಹಣ ಜಮೆಯಾಗಲಿದೆ ಎಂದರು.
ಲಲಿತ ಕಲಾ ಅಕಾಡೆಮಿ ಸದಸ್ಯ ವಿನೋದ್ ಕುಮಾರ್, ರಂಗಾಯಣ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ, ಉಪಸಮಿತಿಯ ಉಪವಿಶೇಷಾಧಿಕಾರಿ ವಿಜಯಕುಮಾರ್ ಇದ್ದರು.