ಜಿಲ್ಲೆ

ದಸರಾ: ಮೈಸೂರು ಮೇಯರ್‌ಗೆ ಕುದುರೆ ಸವಾರಿ ತರಬೇತಿ

ಮೈಸೂರು: ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸಲಿರುವ ಮೇಯರ್ ಶಿವಕುಮಾರ್ ಸೋಮವಾರ ಕುದುರೆ ಸವಾರಿ ತಾಲೀಮು ಶುರು ಮಾಡಿದರು.

ಚಾಮುಂಡಿಬೆಟ್ಟದ ತಪ್ಪಲಿನ ಹಾರ್ಸ್‌ಪಾರ್ಕ್‌ನಲ್ಲಿ ಅಶ್ವಾರೋಹಿದಳದ ಪೊಲೀಸರು ಮೇಯರ್ ಅವರನ್ನು ಕುದುರೆ ಮೇಲೆ ಕೂರಿಸಿ ಸವಾರಿ ಮಾಡುವುದನ್ನು ಹೇಳಿಕೊಟ್ಟರು. ಟಿ-ಶರ್ಟ್, ಟ್ರ್ಯಾಕ್‌ಪ್ಯಾಂಟ್, ಶೂ ಹಾಗೂ ಹೆಲ್ಮೆಟ್ ಧರಿಸಿದ್ದ ಶಿವಕುಮಾರ್ ಅವರಿಗೆ ತರಬೇತಿಯ ಮೊದಲ ದಿನ ಕುದುರೆ ಏರುವುದು, ಲಗಾಮು ಹಿಡಿಯುವುದು, ಸವಾರಿ ವೇಳೆ ಎಚ್ಚರ ವಹಿಸುವುದು, ಇಳಿಯುವಾಗ ಅನುಸರಿಸಬೇಕಾದ ಕ್ರಮವನ್ನು ಮೌಂಟೆಡ್ ಕಂಪನಿಯ ಸಿಬ್ಬಂದಿ ತಿಳಿಸಿಕೊಟ್ಟರು.

ಮೇಯರ್ ಏರಿದ ಕುದುರೆಯನ್ನು ಒಬ್ಬ ಸಿಬ್ಬಂದಿ ಹಿಡಿದು ಮೈದಾನದಲ್ಲಿ ಮೂರ್ನಾಲ್ಕು ಸುತ್ತು ನಿಧಾನವಾಗಿ ನಡೆಸಿದರು. ಅದರ ಎಡ ಮತ್ತು ಬಲ ಭಾಗದಲ್ಲಿ ಇಬ್ಬರು ಪೊಲೀಸರು ಕುದುರೆ ಸವಾರಿ ಮಾಡಿದರು. ಬೆಳಗ್ಗೆ 6ರಿಂದ 7.30ರವರೆಗೆ ನಗರದ ಮೊದಲ ಪ್ರಜೆ ಕುದುರೆ ಸವಾರಿ ಕುರಿತು ತರಬೇತಿ ಪಡೆದುಕೊಂಡರು.

ಕರೊನಾ ಕಾರಣಕ್ಕಾಗಿ ಅರಮನೆ ಆವರಣದಲ್ಲಿ ಜಂಬೂಸವಾರಿ ನಡೆಸುವುದರ ಜತೆಗೆ, ಸರಳವಾಗಿ ದಸರಾ ಆಚರಿಸಿದ್ದರಿಂದ ಈ ಹಿಂದಿನ ಇಬ್ಬರು ಮೇಯರ್‌ಗಳಿಗೆ ಕುದುರೆ ಸವಾರಿ ಮಾಡುವ ಭಾಗ್ಯ ಸಿಕ್ಕಿರಲಿಲ್ಲ. ಆದರೆ, ಈ ಬಾರಿ ಅರಮನೆಯಿಂದ ಬನ್ನಿಮಂಟಪದ ತನಕ ಜಂಬೂಸವಾರಿ ಮೆರವಣಿಗೆ ಸಾಗುವ ತನಕ ಲಕ್ಷಾಂತರ ಜನರ ಸಮ್ಮುಖದಲ್ಲಿ ಸವಾರಿ ಮಾಡುವ ಅವಕಾಶ ಮೇಯರ್‌ಗೆ ದೊರೆತಿದೆ. ಇವರೊಂದಿಗೆ ನಗರ ಪೊಲೀಸ್ ಆಯುಕ್ತರೂ ಸವಾರಿ ಮಾಡಲಿದ್ದಾರೆ.