ಮೈಸೂರು: ಈ ವರ್ಷ ಮೈಸೂರು ದಸರಾ ಮಹೋತ್ಸವಕ್ಕೆ ಹಳೇ ಆನೆಗಳೊಂದಿಗೆ ಹೊಸ ಆನೆಗಳು ಆಗಮಿಸಲಿದ್ದು, ಇದು ಜಂಬೂಸವಾರಿ ಮೆರವಣಿಗೆಯ ಆಕರ್ಷಣೆಯನ್ನು ಇನ್ನಷ್ಟು ಹೆಚ್ಚಿಸಲಿದೆ.
ಗಜಪಡೆಯ ಕ್ಯಾಪ್ಟನ್ ಅಭಿಮನ್ಯು ನಿವೃತ್ತಿಯ ನಂತರ ಹೊಸ ಅಂಬಾರಿ ಆನೆಯನ್ನು ತಯಾರು ಮಾಡಬೇಕಿದೆ. ಅದಕ್ಕಾಗಿ 2ನೇ ಹಂತದ ಆನೆಗಳಿಗೆ ತರಬೇತಿ ನೀಡಲು ಅರಣ್ಯ ಇಲಾಖೆ ಮುಂದಾಗಿದ್ದು, ಇದರಿಂದಾಗಿ ಹೊಸ ಆನೆಗಳು ಗಜಪಡೆಯ ಸದಸ್ಯ ಸ್ಥಾನ ಪಡೆದುಕೊಳ್ಳಲಿವೆ.
ಅಭಿಮನ್ಯು ಇನ್ನು ಎರಡ್ಮೂರು ವರ್ಷವಷ್ಟೇ ಅಂಬಾರಿ ಹೊರಲಿದ್ದು, 60 ವರ್ಷವಾದ ಬಳಿಕ ವಯೋಸಹಜ ನಿವೃತ್ತಿ ಆಗಲಿದೆ. ಬಳಿಕ ಅಭಿಮನ್ಯುವಿನ ಉತ್ತರಾಧಿಕಾರಿ ಹೊಣೆಗಾರಿಕೆಯನ್ನು ಧನಂಜಯ, ಗೋಪಿ, ಮಹೇಂದ್ರ ಅಥವಾ ಭೀಮ ನಿಭಾಯಿಸಬಹುದು ಎಂಬ ವಿಶ್ವಾಸವಿದೆ. ಇದರೊಂದಿಗೆ, 2ನೇ ಹಂತದ ಆನೆಗಳನ್ನೂ ಪಳಗಿಸಲಾಗುತ್ತಿದೆ. ಈ ಮೂಲಕ ಮುಂದಿನ 8-10 ವರ್ಷದ ಬಳಿಕ ಚಿನ್ನದ ಅಂಬಾರಿ ಹೊರುವ ಆನೆಗಳನ್ನು ಸಜ್ಜುಗೊಳಿಸಲು ಚಿಂತಿಸಲಾಗಿದೆ. ಅದಕ್ಕಾಗಿ ಹೊಸ ಆನೆಗಳನ್ನು ಕರೆತರುವ ಪ್ರಯೋಗಕ್ಕೆ ಅರಣ್ಯ ಇಲಾಖೆ ಮುಂದಾಗಿದೆ.
ದಸರಾ ಮಹೋತ್ಸವದಲ್ಲಿ ಜಂಬೂ ಸವಾರಿಯೇ ಪ್ರಮುಖ ಆಕರ್ಷಣೆ. ಕಳೆದ ನಾಲ್ಕು ದಶಕದಿಂದ ಅಂಬಾರಿ ಹೊರುವುದು ಸೇರಿದಂತೆ ಇತರ ಜವಾಬ್ದಾರಿಗಳನ್ನು ಗಜಪಡೆ ಅಚ್ಚುಕಟ್ಟಾಗಿ ನಿರ್ವಹಿಸುವ ಮೂಲಕ ದಸರೆಗೆ ಮೆರುಗು ತುಂಬಿದೆ. ಈ ಹೊಣೆಗಾರಿಕೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಿರ್ವಹಿಸಿಕೊಂಡು ಹೋಗಲು ಹೊಸ ಆನೆಗಳನ್ನು ಪಳಗಿಸಲು ತೀರ್ಮಾನಿಸಲಾಗಿದೆ.
ಭವಿಷ್ಯದ ಅಂಬಾರಿ ಆನೆ ಎಂದು ನಿರೀಕ್ಷೆ ಮೂಡಿಸಿದ್ದ ದ್ರೋಣ (ಜ್ಯೂನಿಯರ್) ಖಾಸಗಿ ಬಸ್ ಡಿಕ್ಕಿಯಾಗಿ ಅಸುನೀಗಿದೆ. ಕಾಡಾನೆ ದಾಳಿಗೆ ತುತ್ತಾಗಿ ಗೋಪಾಲಸ್ವಾಮಿ ಆನೆಯೂ ಮೃತಪಟ್ಟಿದೆ. ಇದು ಅರಣ್ಯ ಇಲಾಖೆ ಕಳವಳಕ್ಕೆ ಕಾರಣವಾಗಿದೆ. ಹೀಗಾಗಿ ಹೊಸ ಆನೆಗಳನ್ನು ಕರೆತಂದು ತರಬೇತಿ ನೀಡಲು ಉದ್ದೇಶಿಸಲಾಗಿದೆ.
ಅಭಿಮನ್ಯು ಆನೆಯೊಂದಿಗೆ ಧನಂಜಯ, ಮಹೇಂದ್ರ, ಭೀಮ ಆನೆಗಳನ್ನು ಕರೆತರಲು ಆಲೋಚಿಸಲಾಗಿದೆ. ಜತೆಗೆ ಹೊಸ ಆನೆ ಲಕ್ಷ್ಮೀ, ಕಾವೇರಿ ಅಥವಾ ವಿಜಯ ಬರುವ ಸಾಧ್ಯತೆ ಇದೆ. ಕಳೆದ ಬಾರಿ ಆಗಮಿಸಿದ್ದ ಗೋಪಿ, ಸುಗ್ರೀವ, ಶ್ರೀರಾಮ ಆನೆ ಈ ವರ್ಷವೂ ಬರುವುದು ಬಹುತೇಕ ನಿಶ್ಚಿತವಾಗಿದೆ. ಹೊಸ ಆನೆಯಾಗಿ ಭೀಮ, ಶ್ರೀಕಂಠ, ಶ್ರೀರಂಗ ಗಜಪಡೆ ಸೇರಿಕೊಳ್ಳುವ ಸಾಧ್ಯತೆ ಇದೆ. ಇದರೊಂದಿಗೆ ಇನ್ನೂ 4 ಆನೆಗಳನ್ನು ಗುರುತಿಸಲಾಗುತ್ತಿದೆ.
ಅಕ್ಟೋಬರ್ 14ರಿಂದ 24ರವರೆಗೆ ದಸರಾ ಮಹೋತ್ಸವ ಆಚರಣೆ ಮಾಡಲಾಗುತ್ತದೆ. ಹೀಗಾಗಿ, ದಸರೆಗೆ ಇನ್ನೂ ಸಮಯವಿದೆ. ಆದ್ದರಿಂದ ಈ ಸಲ ಗಜಪಡೆ ಆಗಮನವೂ 2 ವಾರ ತಡವಾಗಲಿದೆ. ಜಂಬೂಸವಾರಿ ಮೆರವಣಿಗೆಗೆ 2 ತಿಂಗಳ ಮುನ್ನವೇ ಮೈಸೂರಿಗೆ ಮೊದಲ ತಂಡದ ಆನೆಗಳನ್ನು ಕರೆತರಲು ತೀರ್ಮಾನಿಸಲಾಗಿದೆ.
ಆಗಸ್ಟ್ ಕೊನೆಯ ವಾರ ಗಜಪಯಣಕ್ಕೆ ದಿನಾಂಕ ನಿಗದಿ ಮಾಡಲು ಅರಣ್ಯ ಇಲಾಖೆ ತೀರ್ಮಾನಿಸಿದೆ. ಗಜಪಯಣದ ದಿನಾಂಕದವರೆಗೂ ಆನೆಗಳ ಆರೋಗ್ಯದ ಮೇಲೆ ನಿಗಾ ಇಡಲಾಗಿದ್ದು, ಕೊನೇ ಘಳಿಗೆಯಲ್ಲಿ ಯಾವುದಾದರೂ ಆನೆಯ ಆರೋಗ್ಯದಲ್ಲಿ ಏರುಪೇರಾದರೆ ಅದನ್ನು ಕೈಬಿಟ್ಟು, ಪರ್ಯಾಯ ಆನೆ ತರಲು ಮುನ್ನೆಚ್ಚರಿಕೆ ವಹಿಸಲಾಗಿದೆ.
ಆನೆಗಳ ಆಯ್ಕೆ ಸಂಬಂಧ ಇನ್ನೂ ಎರಡು ಕ್ಯಾಂಪ್‌ಗಳಿಗೆ ತೆರಳಿ ಪರಿಶೀಲನೆ ಮಾಡಬೇಕಿದ್ದು, ನಂತರ ಅಂತಿಮ ಗಜಪಡೆ ಪಟ್ಟಿಯನ್ನು ಸಿದ್ಧಪಡಿಸಲಾಗುವುದು.
ಡಾ.ಮಾಲತಿಪ್ರಿಯಾ, ಸಿಎಫ್, ಮೈಸೂರು ವೃತ್ತ
2ನೇ ಹಂತದ ಆನೆಗಳಿಗೂ ತರಬೇತಿ ನೀಡಲು ಕ್ರಮ ತೆಗೆದುಕೊಂಡಿದ್ದು, ಕಳೆದ ಬಾರಿ ಕರೆತರಲಾಗಿದ್ದ 14 ಆನೆಗಳಲ್ಲಿ ಗೋಪಾಲಸ್ವಾಮಿ ಮೃತಪಟ್ಟಿದೆ. ಇನ್ನು ಮರಿಗೆ ಜನ್ಮ ನೀಡಿರುವ ಲಕ್ಷ್ಮೀ ಆನೆಯನ್ನು ಹೊರತುಪಡಿಸಿ, ಉಳಿದ ಆನೆಗಳ ಆರೋಗ್ಯ ಪರಿಶೀಲಿಸಲಾಗುವುದು. ಭವಿಷ್ಯದ ಆನೆಗಳಾಗಿ ಮಾರ್ಪಡಿಸಲು ಕೆಲ ಸಮರ್ಥ ಆನೆಗಳ ಆಯ್ಕೆ ಮಾಡಲಾಗುವುದು.
ಸೌರಭ್ ಕುಮಾರ್, ಡಿಸಿಎಫ್, ಮೈಸೂರು ವನ್ಯಜೀವಿ ವಿಭಾಗ