ಮೈಸೂರು: ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್‌ನಿಂದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ನಗರದಲ್ಲಿ ನಾಲ್ಕು ದಿನಗಳ ದಸರಾ ಮಕ್ಕಳ ಶಿಬಿರ ಆಯೋಜಿಸಲಾಗಿತ್ತು.
ಹೆಬ್ಬಾಳ್‌ನ ವಿಲೀಡ್ ಸಂಸ್ಥೆಯಲ್ಲಿ ಅ.6ರಿಂದ 9ರ ವರೆಗೆ ವಿವಿಧ ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷವಾಗಿ ವಿಜ್ಞಾನದ ಬಗ್ಗೆ ಗೋಷ್ಠಿ ನಡೆಸಲಾಯಿತು. ನಾನಾ ಪ್ರಯೋಗಗಳನ್ನು ಕಲಿಸಿಕೊಡಲಾಯಿತು. ಸಿಎಫ್‌ಟಿಆರ್‌ಐ ನಿವೃತ್ತ ವಿಜ್ಞಾನಿ ಕೊಳ್ಳೇಗಾಲ ಶರ್ಮ ಅವರು ನಡೆಸಿಕೊಟ್ಟ ‘ಫೊಲ್ಡ್‌ಸ್ಕೋಪ್’ ತಯಾರಿಕೆಯಲ್ಲಿ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡಿದ್ದರು. ಸ್ಥಳೀಯವಾಗಿ ದೊರಕುವ ಸಂಪನ್ಮೂಲಗಳಿಂದ ಪ್ರಯೋಗ, ಆವಿಷ್ಕಾರ ಮಾಡುವ ಮೂಲಕ ವೈಜ್ಞಾನಿಕ ಮನೋಭಾವ ಬೆಳಸಿಕೊಳ್ಳುವ ಕುರಿತು ಪ್ರಾತ್ಯಕ್ಷಿಕೆ ಮೂಲಕ ತಿಳಿಸಿಕೊಟ್ಟರು.
ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್‌ನ ಶಿಕ್ಷಣ ವಿಭಾಗದ ಪ್ರಮುಖರಾದ ಮದ್ರಾಸ್ ಐ.ಐ.ಟಿ. ಪದವೀಧರ ಎಸ್. ಪ್ರವೀಣ್‌ಕುಮಾರ ಅವರು ಮಕ್ಕಳೊಂದಿಗೆ ಸಂವಾದ ನಡೆಸಿ ವಿಜ್ಞಾನದ ಬಗ್ಗೆ ವಿದ್ಯಾರ್ಥಿಗಳಲ್ಲಿ ಇದ್ದ ಸಂದೇಹಗಳನ್ನು ಪರಿಹರಿಸಿದರು.
ನಾಲ್ಕು ದಿನಗಳ ಶಿಬಿರದಲ್ಲಿ ಒಂದು ದಿನ ಎಚ್.ಡಿ ಕೋಟೆ ತಾಲೂಕಿನ ನುಗು ಗ್ರಾಮದಲ್ಲಿರುವ ಹೈಡ್ರೋ ಎಲೆಕ್ಟ್ರಿಕ್ ಪವರ ಜನರೇಷನ್ ಘಟಕಕ್ಕೆ ಭೇಟಿ ನೀಡಿ ಅಲ್ಲಿನ ಕಾರ್ಯವೈಖರಿ ತಿಳಿಸಿಕೊಡಲಾಯಿತು. ಸರಗೂರಿನಲ್ಲಿರುವ ವಿಜ್ಞಾನ ಪಾರ್ಕ್‌ಗೆ ಭೇಟಿ ನೀಡಿದ ಮಕ್ಕಳು ವಿಜ್ಞಾನ ಮಾದರಿಗಳನ್ನು ವೀಕ್ಷಿಸಿದರು.
ಬೆಂಗಳೂರಿನ ಪ್ರೊ. ಮಹದೇವಯ್ಯ ಅವರ ತಂಡ ಮಕ್ಕಳಿಗೆ ಕೋಡಿಂಗ್ ಬಗ್ಗೆ ಮಾಹಿತಿ ನೀಡಿ ವಿದ್ಯಾರ್ಥಿಗಳಿಂದಲೇ ಪ್ರಯೋಗಗಳನ್ನು ಮಾಡಿಸಿದ್ದು, ಆತ್ಮವಿಶ್ವಾಸ ಹೆಚ್ಚಲು ಕಾರಣವಾಯಿತು. ಹೊಸ ಶಿಕ್ಷಣ ನೀತಿಯ ಯೋಜನೆಯಂತೆ ಆರನೇ ತರಗತಿಯಿಂದ ಮಕ್ಕಳಿಗೆ ಕೋಡಿಂಗ್ ಕಲಿಸ ಬೇಕೆಂಬ ಅಪೇಕ್ಷೆಯಂತೆ ಮಕ್ಕಳಿಗೆ ಕನ್ನಡದಲ್ಲಿ ಕೋಡಿಂಗ್ ಹೇಳಿಕೊಟ್ಟಿರುವುದು ಪ್ರಶಂಸೆಗೆ ಪಾತ್ರವಾಯಿತು.
ಸಿಎಫ್‌ಟಿಆರ್‌ಐ ವಿಜ್ಞಾನಿ ಡಾ.ಉಷಾ ಅವರು ಮಹಿಳೆಯರು ಯಾವ ಕ್ಷೇತ್ರದಲ್ಲಾದರೂ ಸಾಧನೆ ಮಾಡ ಬಹುದು ಎಂಬುದನ್ನು ಸಂವಾದದ ಮೂಲಕ ಮನವರಿಕೆ ಮಾಡಿಕೊಟ್ಟರು. ಮಕ್ಕಳು ದೈನಂದಿನ ಜೀವನದಲ್ಲಿ ವಿಜ್ಞಾನ ಎಂಬ ವಿಷಯ ಕುರಿತ ಕಿರುನಾಟಕ ಮನರಂಜನೆ ಜತೆಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಲು ಕಾರಣವಾಯಿತು. ನಗರದ ಪೊಲೀಸ್ ಅಕಾಡೆಮಿ ಸಹಾಯಕ ನಿರ್ದೇಶಕ ಎಂ.ಎಚ್. ಖಾನ್, ಮಕ್ಕಳ ಕಲಿಕೆಗೆ ಪೂರಕವಾದ ಪ್ರೇರಣಾತ್ಮಕ ವಿಷಯಗಳನ್ನು ತಿಳಿಸಿಕೊಟ್ಟರು.
ಈ ದಸರಾ ಶಿಬಿರದಲ್ಲಿ ಮೈಸೂರು, ಧಾರವಾಡ, ಬೆಂಗಳೂರು ಜಿಲ್ಲೆಗಳಿಂದ ಆಯ್ದ ಸರ್ಕಾರಿ ಶಾಲೆಯ 54 ವಿದ್ಯಾರ್ಥಿನಿಯರು, ಪಾಲಕರು, ಶಿಕ್ಷಕರು ಭಾಗವಹಿಸಿದ್ದರು.