ಮೈಸೂರು: ಪ್ರತಿ ವರ್ಷ ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಸಂದರ್ಭದಲ್ಲಿ ಕೇಳಿಸುವ ಪ್ರಮುಖ ಬೇಡಿಕೆ ಇದು. ದಸರೆ ಮುಗಿದ ಬಳಿಕ ಅದು ಹಾಗೇ ಮರೆಯಾಗಿ ಹೋಗುತ್ತದೆ. ಮತ್ತೆ ಮುಂದಿನ ವರ್ಷವೇ ಅದರ ಕುರಿತು ನೆನಪಾಗುತ್ತದೆ. ಆದರೆ, ಇದನ್ನು ಜಾರಿಗೆ ತರಲು ಈ ವರೆಗೆ ಯಾವ ಪಕ್ಷದ ನಾಯಕರು ಇಚ್ಛಾಶಕ್ತಿ ಪ್ರದರ್ಶಿಸುತ್ತಿಲ್ಲ.
ಚಾಮುಂಡೇಶ್ವರಿ ವರ್ಧಂತಿ ಮಹೋತ್ಸವ ಹಿನ್ನೆಲೆಯಲ್ಲಿ ಇತ್ತೀಚಿಗೆ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ‘ದಸರಾ ಪ್ರಾಧಿಕಾರ ರಚನೆ ಬಗ್ಗೆ ಮುಂದಿನ ದಿನಗಳಲ್ಲಿ ತೀರ್ಮಾನ ಮಾಡುತ್ತೇವೆ’ ಎಂದು ಭರವಸೆ ನೀಡಿದ್ದರು. ಆದರೆ, ಈ ಕುರಿತು ಯಾವುದೇ ಪ್ರಕ್ರಿಯೆಯೂ ನಡೆಯುತ್ತಿಲ್ಲ.
ಯುದ್ಧಕಾಲದಲ್ಲಿ ಶಸ್ತ್ರಾಭ್ಯಾಸ ಎಂಬಂತೆ ದಸರಾ ಸಿದ್ಧತೆಗಳು ಪ್ರತಿ ಸಲವೂ ನಡೆಯುತ್ತಿವೆ. ಕೊನೆ 10 ದಿನಗಳಲ್ಲೇ ಎಲ್ಲ ತಯಾರಿ ನಡೆಯುತ್ತವೆ. ಆತುರ, ಅವಸರದಲ್ಲಿ ಅರೆಬರೆಯಾಗಿ, ಅವ್ಯವಸ್ಥೆಯಿಂದ ಕೆಲಸಗಳು ಜರುಗುತ್ತವೆ. ಹೀಗಾದರೆ ಗುಣಮಟ್ಟ ಉಳಿಯಲು ಸಾಧ್ಯವೇ? ಇದು ನೇರವಾಗಿ ದಸರಾ ಆಯೋಜನೆ ಮೇಲೆ ಪರಿಣಾಮ ಬೀರುತ್ತದೆ. ಪ್ರತಿ ವರ್ಷ 50 ಕೋಟಿ ರೂ. ಖರ್ಚು ಮಾಡಿದ್ದರೂ, ವ್ಯವಸ್ಥೆ ಮಾತ್ರ ಅಸ್ತವ್ಯಸ್ತವಾಗಿಯೇ ಇರುತ್ತದೆ. ಹಣ ಪೋಲಾಗುವುದು, ದುರ್ಬಳಕೆ ಆಗುವುದು ಮಾಮೂಲಿಯಂತಾಗಿದೆ.
ದಸರಾ ನೆಪದಲ್ಲಿ ನಗರದ ಸರ್ಕಾರಿ ಆಡಳಿತ ಯಂತ್ರವು ಜನರ ಸೇವೆಯಿಂದ ವಿಮುಕ್ತರಾಗಿ ತೊಂದರೆ ಕೊಡಲಾಗುತ್ತದೆ. ಈ ಎಲ್ಲ ಅವಾಂತರವನ್ನು ತಪ್ಪಿಸಬೇಕು. ದಸರಾ ಮುಗಿದ ಬಳಿಕ ಮುಂದಿನ ದಸರಾ ಕುರಿತು ಸಿದ್ಧತೆಗಳು ನಡೆದು ವರ್ಷವಿಡೀ ಪ್ರಚಾರ ಮಾಡಿಕೊಂಡು ವ್ಯವಸ್ಥಿತವಾಗಿ ನಾಡಹಬ್ಬವನ್ನು ಆಯೋಜಿಸಬೇಕು. ಅದಕ್ಕಾಗಿ ದಸರಾ ಪ್ರಾಧಿಕಾರ ರಚನೆ ಅಗತ್ಯವಿದೆ. ಇದರಿಂದ ಮೈಸೂರು ಪ್ರವಾಸೋದ್ಯಮಕ್ಕೆ ಚೈತನ್ಯ ಬರಲಿದೆ. ಆದ್ದರಿಂದ ಈ ನಿಟ್ಟಿನಲ್ಲಿ ಸರ್ಕಾರ ಗಂಭೀರವಾಗಿ ಯೋಚಿಸಬೇಕು. ದಸರಾ ಪ್ರಾಧಿಕಾರ ರಚನೆ ಕುರಿತು ಲೌಡ್‌ಸ್ಪೀಕರ್‌ನಲ್ಲಿ ಜನಾಭಿಪ್ರಾಯ ಸಂಗ್ರಹಿಸಲಾಗಿದೆ.
ಸಿಎಂ ಜತೆ ಸಮಾಲೋಚನೆ
ದಸರಾ ಪ್ರಾಧಿಕಾರ ರಚನೆ ಸಂಬಂಧ ಜಿಲ್ಲೆಯ ಅನೇಕ ಶಾಸಕರು, ಸಂಘಟನೆಯವರು ಮನವಿ ಮಾಡಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಅವರೊಂದಿಗೆ ಸಮಾಲೋಚನೆ ನಡೆಸಲಾಗುವುದು.
ಎಸ್.ಟಿ.ಸೋಮಶೇಖರ್, ಜಿಲ್ಲಾ ಉಸ್ತುವಾರಿ ಸಚಿವ
ಪ್ರವಾಸೋದ್ಯಮಕ್ಕೆ ಅನುಕೂಲ
ಮೈಸೂರು ದಸರಾ ಪ್ರಾಧಿಕಾರ ರಚಿಸಿದರೆ, ಸಾಂಸ್ಕೃತಿಕ ರಾಜಧಾನಿಯಾದ ಮೈಸೂರಿನಲ್ಲಿ ನಿರಂತರವಾಗಿ ಕಾರ್ಯಕ್ರಮ ಆಯೋಜನೆಗೆ ಅನುಕೂಲವಾಗುತ್ತದೆ. ಇದರ ಮೂಲಕ ಪ್ರವಾಸೋದ್ಯಮ ಅಭಿವೃದ್ಧಿಗೂ ಅವಕಾಶ ದೊರೆಯಲಿದೆ. ಪ್ರತಿ ಸಲ ದಸರಾ ಸಂದರ್ಭದಲ್ಲಿ ತರಾತುರಿಯಲ್ಲಿ ಸಿದ್ಧತೆ ಮಾಡಿಕೊಳ್ಳುವುದು ಸರಿಯಾದ ಕ್ರಮವಲ್ಲ. ಈಗಲಾದರೂ ದಸರಾ ಪ್ರಾಧಿಕಾರ ರಚನೆಗೆ ಸರ್ಕಾರ ಮುಂದಾಗಬೇಕು.
ಜಿ.ಟಿ.ದೇವೇಗೌಡ, ಶಾಸಕ
ಶಾಶ್ವತ ವ್ಯವಸ್ಥೆ ಆಗಲಿ
ಮೈಸೂರು ದಸರಾ ಉತ್ಸವ ಜಾಗತಿಕ ಮನ್ನಣೆ ಪಡೆದಿದೆ. ಆದರೆ, ಆಯೋಜನೆ ಸಂದರ್ಭದಲ್ಲಿ ಅನೇಕ ಲೋಪದೋಷಗಳು ಉಂಟಾಗುತ್ತಿವೆ. ದಸರಾ ಸಮಿತಿಗಳಿಗೆ ತಮಗೆ ಬೇಕಾದ ವ್ಯಕ್ತಿಗಳನ್ನು ಮತ್ತು ಅಧಿಕಾರಿಗಳನ್ನು ಪ್ರತಿ ಸಲ ಸೇರಿಸಿಕೊಂಡು ದರ್ಬಾರ್ ನಡೆಸಲಾಗುತ್ತದೆ. ವಿಳಂಬವಾಗಿ ನಡೆಯುವ ಕೆಲಸಗಳ ಗುಣಮಟ್ಟವೂ ಕಳಪೆಯಾಗಿರುತ್ತದೆ. ಆದ್ದರಿಂದ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರವಾಗಿ ದಸರಾ ಆಯೋಜನೆಗಾಗಿಯೇ ಶಾಶ್ವತ ಆಡಳಿತ ಮಂಡಳಿ ಅಥವಾ ಪ್ರಾಧಿಕಾರ ರಚನೆ ಅಗತ್ಯವಿದೆ. ಪ್ರತಿ ದಸರಾ ಬಂದಾಗಲೂ ಈ ಕುರಿತು ಕೂಗು ಕೇಳಿಬರುತ್ತದೆ. ಆದರೆ, ಯಾರೂ ಇತ್ತ ಗಮನ ನೀಡುತ್ತಿಲ್ಲ.
ಡಾ.ಗೌತಮ್ ದೇವನೂರು, ಅತಿಥಿ ಉಪನ್ಯಾಸಕ
ವಸ್ತುಪ್ರದರ್ಶನ ಪ್ರಾಧಿಕಾರದಲ್ಲಿ ವಿಲೀನ ಮಾಡಿ
ದಸರಾ ಪ್ರಾಧಿಕಾರ ರಚನೆಗೆ ಸರ್ಕಾರಕ್ಕೆ ಅಂತಹ ಹೊರೆ ಏನೂ ಆಗಲ್ಲ. ದಸರಾ ವಸ್ತುಪ್ರದರ್ಶನಕ್ಕೆ ಮಾತ್ರ ಸೀಮಿತವಾಗಿರುವ ಕರ್ನಾಟಕ ವಸ್ತುಪ್ರದರ್ಶನವನ್ನೇ ದಸರಾ ಪ್ರಾಧಿಕಾರವಾಗಿ ಪರಿವರ್ತನೆ ಮಾಡಬಹುದು. ಆಗ ಸಿಬ್ಬಂದಿ, ಸೌಕರ್ಯ, ಕಟ್ಟಡ ಸೇರಿದಂತೆ ಎಲ್ಲ ಮೂಲಸೌಲಭ್ಯಗಳು ದೊರೆಯಲಿದೆ. ಇದು ವರ್ಷವಿಡೀ ವಿವಿಧ ಚಟುವಟಿಕೆಗಳಿಂದ ಜೀವಂತ ಇರಲು ಸಾಧ್ಯವಾಗುತ್ತದೆ. ವಸ್ತುಪ್ರದರ್ಶನ ಮೈದಾನ ಜಾಗವೂ ಬಳಕೆ ಆಗಲಿದೆ.
ರವಿಕುಮಾರ್, ಬೆಟ್ಟದಪುರ
ಪರಿಣಿತರಿಗೆ ಅವಕಾಶ ನೀಡಿ
ದಸರಾ ಪ್ರಾಧಿಕಾರ ರಚನೆಯಾದರೆ ಬಹಳಷ್ಟು ಅನುಕೂಲವಾಗುತ್ತದೆ. ಇದರಲ್ಲಿ ಸಾಂಸ್ಕೃತಿಕ, ನಾಟಕ, ಜಾನಪದ ಸೇರಿದಂತೆ ವಿವಿಧ ಪ್ರದರ್ಶನ ಕಲೆಗಳ ಪರಿಣಿತರನ್ನು ಸೇರಿಸಿಕೊಂಡು ಕಾರ್ಯೋನ್ಮುಖವಾಗಬಹುದು. ಇದರಿಂದ ದಸರೆಯ ಪ್ರತಿಯೊಂದು ಕಾರ್ಯಕ್ರಮಗಳಿಗೆ ಶಿಸ್ತು, ವ್ಯವಸ್ಥಿತ ರೂಪ ಬರಲಿದೆ. ಇಲ್ಲವಾದರೆ, ಪ್ರತಿ ವರ್ಷದಂತೆ ಅವ್ಯವಸ್ಥೆ, ಲೋಪದೋಷಗಳು ಮುಂದುವರಿದುಕೊಂಡು ಹೋಗಲಿದೆ.
ಮೈಮ್ ರಮೇಶ್, ಹಿರಿಯ ರಂಗಕರ್ಮಿ
ದಸರೆಗೆ ನೀಲಿನಕ್ಷೆ ರೂಪಿಸಿ
ದಸರಾಕ್ಕೆ ಒಂದು ಸ್ಪಷ್ಟ ಮಾರ್ಗಸೂಚಿ ಮತ್ತು ಶಿಷ್ಟಾಚಾರವಿಲ್ಲ. ಅಧಿಕಾರಿಗಳು ತಮಗೆ ಅನಿಸಿದಂತೆ ಕಾರ್ಯಕ್ರಮ ರೂಪಿಸುತ್ತಾರೆ. ದಸರಾ ಉತ್ಸವದ ಮೂಲ ಆಶಯಕ್ಕೆ ಧಕ್ಕೆ ಆಗುತ್ತಿದೆ. ಅನಗತ್ಯ ಕಾರ್ಯಕ್ರಮಗಳನ್ನು ತುರುಕಿ ದಸರೆಯ ಮೌಲ್ಯ ಮತ್ತು ಘನತೆಯನ್ನು ಕುಗ್ಗಿಸಲಾಗುತ್ತಿದೆ. ಸಾಮಾನ್ಯ ಕಾರ್ಯಕ್ರಮಗಳಂತೆ ಇದನ್ನೂ ಆಯೋಜಿಸಲಾಗುತ್ತಿದೆ. ಸಾಂಸ್ಕೃತಿಕ, ಧಾರ್ಮಿಕ ಚೌಕಟ್ಟಿನ ಅಡಿಪಾಯದ ಮೇಲೆ ದಸರಾ ನೀಲಿನಕ್ಷೆ ತಯಾರು ಮಾಡಬೇಕು. ಅದರ ಪ್ರಕಾರ ಪ್ರತಿವರ್ಷವೂ ಚಟುವಟಿಕೆಗಳು, ಕಾರ್ಯಕ್ರಮಗಳು ನಡೆಯಬೇಕು.
ಪಂಕಜಾ, ಗೃಹಿಣಿ
ಕಾಟಾಚಾರಕ್ಕೆ ಆಯೋಜನೆ
ನಾವು ಸಂಗೀತ ಕಾರ್ಯಕ್ರಮ ಆಯೋಜನೆಗೆ 6 ತಿಂಗಳ ಮೊದಲೇ ತಯಾರಿ ಮಾಡಿಕೊಳ್ಳುತ್ತೇವೆ. ಆದರೆ, ದಸರಾಕ್ಕೆ ಇನ್ನೂ 15 ದಿನ ಬಾಕಿ ಇದ್ದರೂ, ಯಾವುದೇ ಕಾರ್ಯಕ್ರಮ ನಿಗದಿಯಾಗಿಲ್ಲ. ಹೀಗಾದರೆ, ದೊಡ್ಡ ಕಲಾವಿದರು ದೊರೆಯಲು ಸಾಧ್ಯವೇ? ಗುಣಮಟ್ಟ ಕಾಯ್ದುಕೊಳ್ಳಲು ಆಗುತ್ತದೆಯೇ? ಇಲ್ಲಿ ಎಲ್ಲವೂ ಕಾಟಾಚಾರಕ್ಕೆ ನಡೆಯುತ್ತದೆ. ಅಧಿಕಾರಿಗಳು, ಜನಪ್ರತಿನಿಧಿಗಳಿಗೂ ಆಸಕ್ತಿ ಇಲ್ಲ. ನಾಡಹಬ್ಬದಲ್ಲಿ ಗಂಭೀರತೆಯೇ ಕಾಣುತ್ತಿಲ್ಲ. ಸ್ಪಷ್ಟ ಉದ್ದೇಶವನ್ನು ಇಟ್ಟುಕೊಂಡು ದಸರಾ ಪ್ರಾಧಿಕಾರ ರಚನೆಯಾದರೆ ಉಪಯೋಗ ಇದೆ. ಇಲ್ಲವಾದರೆ, ಅದು ಕೂಡ ನಾಮಕಾವಸ್ಥೆ ಆಗಲಿದೆ.
ಸಿ.ಆರ್.ಹಿಮಾಂಶು, ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಘಟಕ
ಇವೆಂಟ್ ಮ್ಯಾನೇಜ್‌ಮೆಂಟ್
ದಸರಾ ಉತ್ಸವದಲ್ಲಿ ಅಧಿಕಾರಿಗಳ ದರ್ಬಾರ್ ಎದ್ದುಕಾಣುತ್ತಿದೆ. ಜನರ ಸಹಭಾಗಿತ್ವ ಮರೆಯಾಗಿದೆ. ದಸರೆ ಒಂದು ರೀತಿ ಇವೆಂಟ್ ಮ್ಯಾನೇಜ್‌ಮೆಂಟ್‌ನಂತಾಗಿದೆ. ಇದರ ಸುತ್ತಲೂ ಕಮಿಷನ್, ವಾಣಿಜ್ಯೀಕರಣ, ಲಾಬಿ ಇನ್ನಿತರ ವ್ಯವಹಾರವೇ ತುಂಬಿಕೊಂಡಿದೆ. ದಸರೆ ನಿಜವಾದ ಸೊಗಡು ಮಂಕಾಗಿದೆ. ಆದ್ದರಿಂದ ವ್ಯವಸ್ಥಿತ, ಶಿಸ್ತುಬದ್ಧ, ಯೋಜನಾಬದ್ಧವಾಗಿ ದಸರೆ ಆಯೋಜನೆಗೆ ರಾಜ್ಯ ಸರ್ಕಾರ ಶಾಶ್ವತ ವ್ಯವಸ್ಥೆ ಮಾಡಬೇಕು.
ದೀಪಿಕಾ, ಬಿಸಿಎ ವಿದ್ಯಾರ್ಥಿನಿ