ಜಿಲ್ಲೆ

ದಸರಾ ಪಟ್ಟದ ಆನೆಯಾಗಿ ಶ್ರೀಕಂಠ ಆಯ್ಕೆ

ಮೈಸೂರು: ದಸರಾಕ್ಕೆ ಮೊದಲ ಬಾರಿಗೆ ಆಗಮಿಸಿರುವ ಶ್ರೀಕಂಠ ಆನೆಯನ್ನು ಪಟ್ಟದ ಆನೆಯಾಗಿ ಮತ್ತು ಏಕಲವ್ಯ ಆನೆಯನ್ನು ನಿಶಾನೆ ಆನೆಯಾಗಿ ಆಯ್ಕೆ ಮಾಡಲಾಗಿದೆ.

ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರು ಎರಡು ಗಂಡಾನೆಗಳನ್ನು ಆಯ್ಕೆ ಮಾಡಿದರು. ರಾಜವಂಶಸ್ಥರ ಕೋರಿಕೆ ಮೇರೆಗೆ ಆನೆ ಬಾಗಿಲಿನ ಮೂಲಕ ಸವಾರಿ ತೊಟ್ಟಿಗೆ ಪ್ರಶಾಂತ, ಧನಂಜಯ, ಗೋಪಿ, ಕಂಜನ್, ಭೀಮಾ, ಏಕಲವ್ಯ, ಶ್ರೀಕಂಠ, ಹೇಮಾವತಿ, ಕಾವೇರಿ ಆನೆಯನ್ನು ಕರೆತರಲಾಗಿತ್ತು.

ಬಳಿಕ ಎಲ್ಲ ಆನೆಗಳನ್ನು ವೀಕ್ಷಿಸಲಾಯಿತು. ನಿರೀಕ್ಷೆಯಂತೆ ಹೊಸ ಆನೆ ಶ್ರೀಕಂಠನ್ನು ಪಟ್ಟದ ಆನೆಯಾಗಿ ಆಯ್ಕೆ ಮಾಡಲಾಯಿತು. ಅಲ್ಲದೆ ನಿಶಾನೆ ಆನೆಯಾಗಿ ಏಕಲವ್ಯನನ್ನು ಗುರುತಿಸಲಾಯಿತು. ರಾಜವಂಶಸ್ಥರ ಬೇಡಿಕೆಯಂತೆ ಅರಣ್ಯ ಇಲಾಖೆ ನವರಾತ್ರಿ ವೇಳೆ ಅರಮನೆಯಲ್ಲಿ ಖಾಸಗಿ ದರ್ಬಾನ್‌ನಲ್ಲಿ ನಡೆಯುವ ಧಾರ್ಮಿಕ ಕಾರ್ಯದಲ್ಲಿ ಎರಡು ಆನೆಗಳು ಭಾಗವಹಿಸಲಿವೆ.

ಶ್ರೀಕಂಠನಿಗೆ ಶುಕ್ರದೆಸೆ:

ಶ್ರೀಕಂಠ ಆನೆ ಮೊದಲ ಬಾರಿಗೆ ದಸರಾ ಗಜಪಡೆಯಲ್ಲಿ ಸ್ಥಾನ ಪಡೆದುಕೊಂಡಿದೆ. ಇದು ರಾಜವಶಂಸ್ಥರ ಮನ ಗೆಲ್ಲಲು ಸಫಲವಾಗಿದೆ. ಹಾಸನ ಮತ್ತು ಕೊಡಗು ಜಿಲ್ಲೆಯ ಗಡಿಭಾಗದಲ್ಲಿ ಉಪಟಳ ನೀಡುತ್ತಿದ್ದ ಶ್ರೀಕಂಠನನ್ನು 2014ರಲ್ಲಿ ಶನಿವಾರಸಂತೆ ಅರಣ್ಯ ವಲಯದಲ್ಲಿ ಸೆರೆ ಹಿಡಿಯಲಾಗಿತ್ತು.

ರಾಜವಂಶಸ್ಥರಾದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ನಿಧನರಾದ ಬಳಿಕ ಸೆರೆ ಹಿಡಿದ ಮೊದಲ ಆನೆ ಇದು. ಈ ಹಿನ್ನೆಲೆಯಲ್ಲಿ ರಾಜವಂಶಸ್ಥರ ಮೇಲಿನ ಗೌರವದಿಂದಾಗಿ ಈ ಆನೆಗೆ ಶ್ರೀಕಂಠ ಎಂದು ನಾಮಕರಣ ಮಾಡಲಾಗಿತ್ತು.

ದೈತ್ಯ ದೇಹ, ಉದ್ದನೆಯ ದಂತ ಸೇರಿದಂತೆ ಲಕ್ಷಣವಾಗಿರುವ ಶ್ರೀಕಂಠ ಮೃದು ಸ್ವಭಾವದ್ದು. ಈ ಹಿನ್ನೆಲೆಯಲ್ಲಿ ಅ.12ರಂದು ಪ್ರಮೋದಾದೇವಿ ಒಡೆಯರ್ ಅವರು ಮತ್ತಿಗೋಡು ಶಿಬಿರಕ್ಕೆ ಹೋಗಿ ಶ್ರೀಕಂಠ ಆನೆಯನ್ನು ಪರಿಶೀಲಿಸಿದ್ದರು.

ಇದೀಗ ಇದನ್ನೇ ಪಟ್ಟದ ಆನೆಯಾಗಿ ಆಯ್ಕೆ ಮಾಡಿದ್ದಾರೆ. ಒಳ್ಳೆ ಎತ್ತರ, ಬಲಿಷ್ಠ ಶರೀರ, ಶಾಂತ ಸ್ವಭಾವ ಮತ್ತು ಮನುಷ್ಯರೊಂದಿಗೆ ಸುಲಭವಾಗಿ ಬೆರೆಯುವ ಗುಣ ಇರುವ ಆನೆಯಾಗಿದೆ.

2ನೇ ಬಾರಿಗೆ ಬಂದಿರುವ ಏಕಲವ್ಯ:

ನಿಶಾನೆ ಆನೆಯಾಗಿ ಆಯ್ಕೆಯಾಗಿರುವ ಏಕಲವ್ಯ 2ನೇ ಬಾರಿಗೆ ದಸರಾಕ್ಕೆ ಆಗಮಿಸಿದೆ. 40 ವರ್ಷದ ಈ ಆನೆ ಇದು ಮತ್ತಿಗೋಡು ಆನೆ ಶಿಬಿರದ ನಿವಾಸಿ. 5,150 ಕೆಜಿ ತೂಕದ ಇದು ಆರೋಗ್ಯವಾಗಿದ್ದು, ವಾಹನ ಮತ್ತು ಪಟಾಕಿಗಳ ಶಬ್ದಕ್ಕೆ ಅಂಜುವುದಿಲ್ಲ.