ಬಸವಕಲ್ಯಾಣ: ನಗರದಲ್ಲಿ ಸೋಮವಾರದಿಂದ ಅ.೨ರವರೆಗೆ ನಡೆಯಲಿರುವ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳ ೩೪ನೇ ವರ್ಷದ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನಕ್ಕಾಗಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಧರ್ಮ ಜಾಗೃತಿ ಜತೆಗೆ ಜೀವನದಲ್ಲಿ ಬದಲಾವಣೆಗೆ ಪ್ರೇರಣೆ ನೀಡುವ ಐತಿಹಾಸಿಕ ಕಾರ್ಯಕ್ರಮ ಇದಾಗಲಿದೆ ಎಂದು ಮಹೋತ್ಸವ ಸಮಿತಿ ಕಾರ್ಯಾಧ್ಯಕ್ಷರಾದ ಶಾಸಕ ಶರಣು ಸಲಗರ ಹೇಳಿದರು.
ಹಾರಕೂಡ ಪೂಜ್ಯರ ಆಶೀರ್ವಾದ ಮತ್ತು ಮಾರ್ಗದರ್ಶನದಲ್ಲಿ ಹಾಗೂ ಸಮಿತಿ ಕಾರ್ಯಾಧ್ಯಕ್ಷರಾದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಸಹಕಾರದಿಂದ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದು, ಸಮಿತಿ ಪ್ರಮುಖರು ಶರನ್ನವರಾತ್ರಿ ಯಶಸ್ಸಿಗೆ ದುಡಿಯುತ್ತಿದ್ದಾರೆ ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಾನವ ಧರ್ಮಕ್ಕೆ ಜಯವಾಗಲಿ ಎಂಬ ಘೋಷ್ಯವಾಕ್ಯದಡಿ ರಂಭಾಪುರಿ ಜಗದ್ಗುರುಗಳ ವಿಚಾರ ಮನೆ-ಮನೆಗೆ ತಲುಪಬೇಕು. ಯುವ ಸಮೂಹಕ್ಕೆ ಸ್ಫೂರ್ತಿಯಾಗಬೇಕು ಎಂಬುದು ಕಾರ್ಯಕ್ರಮ ಉದ್ದೇಶ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಕೋರಿದರು.
ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನಕ್ಕೆ ಪೂಜ್ಯರ ಸಾನ್ನಿಧ್ಯದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯುಡಿಯೂರಪ್ಪ ಚಾಲನೆ ನೀಡುವರು. ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ಪ್ರಲ್ಹಾದ್ ಜೋಶಿ, ವಿ.ಸೋಮಣ್ಣ, ಶೋಭಾ ಕರಂದ್ಲಾಜೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಸಚಿವ-ಶಾಸಕರು, ಜನಪ್ರತಿನಿಧಿಗಳು, ಗಣ್ಯರು, ಚಿಂತಕರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವರಾದ ದಸರಾ ಮಹೋತ್ಸವ ಸಮಿತಿ ಅಧ್ಯಕ್ಷ ಈಶ್ವರ ಖಂಡ್ರೆ ಅವರು ಶ್ರೀ ರಂಭಾಪುರಿ ಜಗದ್ಗುರುಗಳ ಭಾವಚಿತ್ರ ಬಿಡುಗಡೆ ಮಾಡುವರು. ಸಮಿತಿ ಗೌರವಾಧ್ಯಕ್ಷರಾದ ಹಾರಕೂಡ ಶ್ರೀ ಡಾ.ಚನ್ನವೀರ ಶಿವಾಚಾರ್ಯ ನೇತೃತ್ವ, ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ಅಧ್ಯಕ್ಷರಾದ ಸಿಂದಗಿ ಶ್ರೀ ಡಾ.ಪ್ರಭುಸಾರಂಗದೇವ ಶಿವಾಚಾರ್ಯ ಸಮ್ಮುಖ ವಹಿಸುವರು. ಪೌರಾಡಳಿತ ಸಚಿವ ರಹೀಮ್ ಖಾನ್, ಶಾಸಕ ಡಾ.ಸಿದ್ದಲಿಂಗಪ ಪಾಟೀಲ್, ಮಾಜಿ ಸಚಿವ ರಾಜಶೇಖರ ಪಾಟೀಲ್ ಹುಮನಾಬಾದ್, ಮೀನುಗಾರಿಕೆ ಅಭಿವೃದ್ಧಿ ಮಂಡಳಿ ಅಧ್ಯಕ್ಷೆ ಮಾಲಾ ಬಿ.ನಾರಾಯಣರಾವ್ ಪಾಲ್ಗೊಳ್ಳುವರು ಎಂದು ತಿಳಿಸಿದರು.
ಹಾರಕೂಡ ಶ್ರೀ ಡಾ.ಚನ್ನವೀರ ಶಿವಾಚಾರ್ಯ ಹಾಗೂ ಸಂಸ್ಥಾನ ಗವಿಮಠದ ಶ್ರೀ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯ ಸಮಾರಂಭದ ವೈಶಿಷ್ಟವನ್ನು ತಿಳಿಸಿದರು.
ಜಿಪಂ ಮಾಜಿ ಸದಸ್ಯ ಜಗನ್ನಾಥ ಪಾಟೀಲ್ ಮಂಠಾಳ, ಪ್ರಮುಖರಾದ ಸುರೇಶ ಸ್ವಾಮಿ, ಸುನೀಲ ಪಾಟೀಲ್, ಮಲ್ಲಯ್ಯ ಸ್ವಾಮಿ, ಡಾ.ಜಿ.ಎಸ್. ಭುರಳೆ, ಸೋಮಶೇಖರ ವಸ್ತ್ರದ, ಡಾ.ಬಸವರಾಜ ಸ್ವಾಮಿ, ಸಿದ್ದು ಬಿರಾದಾರ, ಕಲ್ಪನಾ ಶೀಲವಂತ, ರಮೇಶ ರಾಜೋಳೆ ಇದ್ದರು.
ಜಾತ್ಯತೀತ, ಪಕ್ಷಾತೀತ ಕಾರ್ಯಕ್ರಮ: ಶ್ರೀ ರಂಭಾಪುರಿ ಜಗದ್ಗುರುಗಳ ದಸರಾ ಧರ್ಮ ಸಮ್ಮೇಳನ ಜಾತ್ಯತೀತ ಮತ್ತು ಪಕ್ಷತೀತವಾದ ಐತಿಹಾಸಿಕ ಸಮಾರಂಭ ಎಂದು ಸಮಿತಿ ಗೌರವಾಧ್ಯಕ್ಷರಾದ ಹಾರಕೂಡ ಶ್ರೀ ಡಾ.ಚನ್ನವೀರ ಶಿವಾಚಾರ್ಯರು ಹೇಳಿದರು. ಭಾರತ ದೇಶದ ಸಂತರ ಒಂದು ತತ್ವವಿದೆ. ಸರ್ವೆ ಜನಃ ಸುಖಿನೋ ಭವಂತು. ಭಾರತೀಯ ಸಂಸ್ಕೃತಿಯ ಘೋಷವಾಕ್ಯವಾಗಿ ಎಲ್ಲ ಜನ ಸುಖವಾಗಿರಲಿ ಎಂಬುದು ಧರ್ಮ ಚಿಂತಕರ ಸಂದೇಶ. ಸಮಾರಂಭ ಯಶಸ್ವಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.ದಸರಾ