ಜಿಲ್ಲೆ

ದಸರಾ ಜಂಬೂಸವಾರಿಯಲ್ಲಿ ಭಾಗವಹಿಸುವ ಕಲಾವಿದರ ಸಂಭಾವನೆ ಹೆಚ್ಚಿಸಲು ಕಲಾವಿದರ ಆಗ್ರಹ

ಮೈಸೂರು: ನಾಡಹಬ್ಬ ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸುವ ಕಲಾವಿದರಿಗೆ ಸಂಭಾವನೆ ಹೆಚ್ಚಿಸುವ ಮೂಲಕ ಕಲಾವಿದರಿಗೆ ಅನುಕೂಲ ಮಾಡಿಕೊಡಬೇಕು ಎಂದು ಮೈಸೂರು, ಚಾಮರಾಜನಗರ ಮತ್ತು ಮಂಡ್ಯ ಜಿಲ್ಲಾ ಜಾನಪದ ಕಲಾವಿದರ ಸಂಘದ ಅಧ್ಯಕ್ಷ ಎಲ್.ಮಹದೇವಪ್ಪ ಉಡಿಗಾಲ ಅವರು ಮುಖ್ಯಮಂತ್ರಿ ಅವರಲ್ಲಿ ಮನವಿ ಮಾಡಿದರು.
ಜಾನಪದ ಕಲಾವಿದರಿಗೆ ನೀಡುತ್ತಿರುವ ಸಂಭಾವನೆ ಅತಿ ಕಡಿಮೆ. ಬನ್ನಿಮಂಟಪ ತಲುಪಿದ ಬಳಿಕ ಕಲಾವಿದರನ್ನು ಕೇಳುವವರಿಲ್ಲ. ಜಂಬೂಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಿರುವ ಕಲಾವಿದರಿಗೆ ಕೇವಲ ಒಂದೂವರೆ ಸಾವಿರ ರೂ. ಸಂಭಾವನೆ ನೀಡಲಾಗುತ್ತಿದೆ. ಇದನ್ನು ಐದು ಸಾವಿರಕ್ಕೆ ಏರಿಸಬೇಕು. ಬನ್ನಿಮಂಟಪದಿಂದ ವಾಪಸ್ ಕಲಾವಿದರನ್ನು ಅರಮನೆ ಅಥವಾ ಅವರು ಉಳಿದುಕೊಳ್ಳುವ ಸ್ಥಳಕ್ಕೆ ತಲುಪಿಸಲು ವಾಹನ ಸೌಲಭ್ಯ ಕಲ್ಪಿಸಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಕೋರಿದರು.
ಮಹಿಳಾ ಕಲಾವಿದರಿಗೆ ಉಳಿದುಕೊಳ್ಳಲು ಸೂಕ್ತ ಸೌಲಭ್ಯ ಕಲ್ಪಿಸಬೇಕು. ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ, ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಹೀಗಾಗಿ ಮುಖ್ಯಮಂತ್ರಿ ಇತ್ತ ಗಮನ ಹರಿಸಬೇಕು ಎಂದು ಕೋರಿದರು.
ಕಲಾವಿದ ಕಂಸಾಳೆ ರವಿ ಮಾತನಾಡಿ, ನಮ್ಮ ಸಂಸ್ಕೃತಿ, ಕಲೆ ಉಳಿಯಲು ಜಾನಪದವೇ ಮೂಲ ಎಂದು ಸರ್ಕಾರ ಹೇಳುತ್ತದೆ. ಆದರೆ ಜಾನಪದ ಕಲಾವಿದರನ್ನು ದಸರಾ ಜಂಬೂಸವಾರಿಯಲ್ಲಿ ನಿರ್ಲಕ್ಷೃ ಮಾಡುತ್ತ ಬರಲಾಗುತ್ತಿದೆ. ಯುವ ದಸರಾದಲ್ಲಿ ಭಾಗವಹಿಸುವವರಿಗೆ ಲಕ್ಷಾಂತರ ರೂ. ಸಂಭಾವನೆ ನೀಡುವ ಸರ್ಕಾರ, ಜಾನಪದ ಕಲಾವಿದರಿಗೆ ತಾರತಮ್ಯ ಮಾಡುತ್ತಿದೆ ಎಂದು ದೂರಿದರು.
ವೀರಗಾಸೆ ಒಕ್ಕೂಟದ ಕಾರ್ಯದರ್ಶಿ ಕಿರಾಳು ಮಹೇಶ್, ಸಂಘಟನಾ ಕಾರ್ಯದರ್ಶಿ ಆರ್. ರೇವಣ್ಣ ಇತರರು ಇದ್ದರು.