ಮೈಸೂರು: ದಸರಾ ಕೊನೆ ದಿನವಾದ ವಿಜಯದಶಮಿಯಂದು ನಡೆಯುವ ಜಂಬೂಸವಾರಿ ಮೆರವಣಿಗೆ ಮಾಡಿಕೊಂಡಿರುವ ಸಿದ್ಧತೆಗಳನ್ನು ಶುಕ್ರವಾರ ಸಂಜೆ ಪರಿಶೀಲಿಸಲಾಯಿತು.
ಚಿನ್ನದ ಅಂಬಾರಿ ಹೊರಲಿರುವ ಅಭಿಮನ್ಯುವಿಗೆ ಪುಷ್ಪಾರ್ಚನೆ ಸೇರಿದಂತೆ ಇನ್ನಿತರ ಸಿದ್ಧತಾ ಕಾರ್ಯಗಳ ಬಗ್ಗೆ ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಪರಿಶೀಲಿಸಿದರು.
ಅರಮನೆ ಅಂಗಳದಲ್ಲಿ ಶುಕ್ರವಾರ ಅಂಬಾರಿ ಹೊರಲಿರುವ ಅಭಿಮನ್ಯುವಿಗೆ ಪುಷ್ಪಾರ್ಚನೆ ಮಾಡಿ ಪೂರ್ವಾಭ್ಯಾಸ ನಡೆಸಲಾಯಿತು. ಕಮಾಂಡೆಂಟ್ ಅವರು ಅಶ್ವಾರೋಹಿ ಪಡೆಯೊಂದಿಗೆ ಆಗಮಿಸಿ ಆಯುಕ್ತರಿಂದ ಅನುಮತಿ ಪಡೆದರು.
ಆಯುಕ್ತರು ಚಾಲನೆ ನೀಡುತ್ತಿದ್ದಂತೆ ಕಮಾಂಡೆಂಟ್ ಗೌರವ ವಂದನೆ ಸಲ್ಲಿಸಿದರು. ನಂತರ, ತಾಲೀಮಿಗೆ ಹೊರಟಿದ್ದ ಆನೆಗಳನ್ನು ಕರೆತಂದು ಪುಷ್ಪಾರ್ಚನೆ ಮಾಡಲಾಯಿತು.
ಜಂಬೂಸವಾರಿ ದಿನದಂದು ಸಣ್ಣಪುಟ್ಟ ವ್ಯತ್ಯಾಸ ಆಗದಂತೆ ರಾಷ್ಟ್ರಗೀತೆ ನುಡಿಸುವಾಗ ಹಾಗೂ ಚಿನ್ನದ ಅಂಬಾರಿ ಹೊತ್ತ ಅಭಿಮನ್ಯುವಿಗೆ ಪುಷ್ಪಾರ್ಚನೆ ಮಾಡುವಾಗ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಸಮಾಲೋಚನೆ ನಡೆಸಲಾಯಿತು.
ಈ ಬಾರಿ ಅಶ್ವಾರೋಹಿ ಪಡೆಯನ್ನು ಎರಡು ಭಾಗವಾಗಿ ಪ್ರತ್ಯೇಕಿಸಿ ಎಡ ಮತ್ತು ಬಲಭಾಗದಲ್ಲಿ ತಲಾ 12 ಕುದುರೆಗಳನ್ನು ನಿಲ್ಲಿಸಲು ತೀರ್ಮಾನಿಸಲಾಗುತ್ತದೆ. ಇದರಿಂದಾಗಿ ಸಾಕಷ್ಟು ಜಾಗ ಉಳಿತಾಯವಾಗಲಿದೆ. ಇಲ್ಲಿ ಮಾಧ್ಯಮದವರಿಗೆ ಸ್ಥಳಾವಕಾಶ ಕಲ್ಪಿಸಲು ಚರ್ಚಿಸಲಾಯಿತು.
ಶಾಮಿಯಾನದ ಉಸ್ತುವಾರಿ ಷರೀಫ್ ಅವರೊಂದಿಗೆ ಸಮಾಲೋಚಿಸಿ ಅಗತ್ಯ ಕ್ರಮ ಕೈಗೊಳ್ಳುವುದಕ್ಕೆ ಸಲಹೆ ನೀಡಿದರು. ಡಿಸಿಪಿಗಳಾದ ಆರ್.ಎನ್.ಬಿಂದುಮಣಿ, ಕೆ.ಎಸ್.ಸುಂದರರಾಜ್, ಮೌಂಟೆಂಡ್ ಕಮಾಂಡೆಂಟ್ ಎ.ಮಾರುತಿ, ಅರಮನೆ ಭದ್ರತಾ ಮಂಡಳಿ ಎಸಿಪಿ ಚಂದ್ರಶೇಖರ್, ಮೈಸೂರು ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ಇನ್ನಿತರರಿದ್ದರು.