ಜಿಲ್ಲೆ

ದಸರಾ ಜಂಬೂ ಸವಾರಿಗೆ ಗಜಪಡೆ ಸಜ್ಜು

ಮೈಸೂರು: ದಸರಾ ಮಹೋತ್ಸವದ ಕೊನೆಯ ಘಟ್ಟವಾಗಿರುವ ಜಂಬೂಸವಾರಿಯ ಅಂತಿಮ ತಾಲೀಮು ಮಂಗಳವಾರ ನಡೆಯಿತು.

ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ವಿಜಯದಶಮಿ-ಜಂಬೂಸವಾರಿ ಮೆರವಣಿಗೆಗೆ ಒಂದು ದಿನ ಮಾತ್ರ ಬಾಕಿ ಇದ್ದು, ಈ ಹಿನ್ನೆಲೆಯಲ್ಲಿ ಗಜಪಡೆ, ಅಶ್ವದಳ, ಪೊಲೀಸ್ ಇಲಾಖೆಯ ವಿವಿಧ ತುಕಡಿಗಳು ಕೊನೆಯ ಹಂತದ ತಾಲೀಮು ನಡೆಸಿದವು.

ಅರಮನೆ ಮುಂಭಾಗದಲ್ಲಿ ಅಂಬಾರಿ ಆನೆ ಅಭಿಮನ್ಯುನಿಗೆ ಎಡ-ಬಲದಲ್ಲಿ ಕುಮ್ಕಿ ಆನೆಗಳಾದ ಕಾವೇರಿ ಮತ್ತು ರೂಪಾ ಸಾಥ್ ಕೊಟ್ಟವು. ಅಶ್ವರೋಹಿ ದಳದ ಕುದುರೆಗಳು, ವಿವಿಧ ಪೊಲೀಸ್ ತುಕಡಿಗಳು, ಪೊಲೀಸ್ ಬ್ಯಾಂಡ್ ಭಾಗವಹಿಸಿದ್ದವು.

ನಿಶಾನೆ ಆನೆ ಧನಂಜಯ, ನೌಪತ್ ಆನೆಯಾಗಿ ಗೋಪಿ ಮುಂದೆ ಸಾಗುತ್ತಿದ್ದಂತೆ ಉಳಿದ ಆನೆಗಳು ಸಾಲಾನೆಗಳಾಗಿ ಸಾಗಿದವು. ಬಳಿಕ ಅಭಿಮನ್ಯು ಕುಮ್ಕಿಗಳಾದ ಕಾವೇರಿ ಮತ್ತು ರೂಪಾಳೊಂದಿಗೆ ವೇದಿಕೆ ಮುಂಭಾಗ ಬರುತ್ತಿದ್ದಂತೆ ಗಣ್ಯರು ಪುಷ್ಪಾರ್ಚನೆ ಮಾಡಿದರು. ಈ ವೇಳೆ ರಾಷ್ಟ್ರಗೀತೆ ನುಡಿಸಿ, ಫಿರಂಗಿಗಳ ಮೂಲಕ 21 ಕುಶಾಲತೋಪು ಸಿಡಿಸಲಾಯಿತು.

ಅ.2ರಂದು ಜಂಬೂಸವಾರಿ ದಿನ ಚಿನ್ನದ ಅಂಬಾರಿ ಹೊತ್ತ ಅಭಿಮನ್ಯು ಬರುವ ಮಾರ್ಗ, ಪುಷ್ಪಾರ್ಚನೆ ಮಾಡುವ ಸ್ಥಳ, ಆನೆಗಳ ತಂಡದ ಮುಂದೆ ಸಂಚರಿಸಲಿರುವ ಅಶ್ವಾರೋಹಿ ದಳ, ಪಥಸಂಚಲನದಲ್ಲಿ ಪಾಲ್ಗೊಳ್ಳುವ ಪೊಲೀಸ್ ತುಕಡಿಗಳು, ಪೊಲೀಸ್ ಬ್ಯಾಂಡ್ ಯಾವ ಕ್ರಮಾಂಕದಲ್ಲಿ ಸಾಗಬೇಕೆಂಬುದನ್ನು ಪರಿಚಯಿಸುವ ನಿಟ್ಟಿನಲ್ಲಿ ಈ ಪೂರ್ವಾಭ್ಯಾಸ ಕೈಗೊಳ್ಳಲಾಯಿತು.

ಸಿದ್ಧತಾ ಕಾರ್ಯ ಪೂರ್ಣ

ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಮಾತನಾಡಿ, ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯಿಂದ ಜಂಬೂಸವಾರಿಯ ಅಂತಿಮ ತಾಲೀಮು ನಡೆಸಲಾಗಿದೆ. ಗಜಪಡೆ, ಅಶ್ವಾರೋಹಿ ದಳ, ಪೊಲೀಸ್ ತುಕಡಿಗಳು ಯಾವ ಸ್ಥಾನದಲ್ಲಿ ನಿಲ್ಲಬೇಕು, ಹೇಗೆ ಭಾಗವಹಿಸಬೇಕು ಎಂಬುದು ಸೇರಿದಂತೆ ಎಲ್ಲ ರೀತಿಯ ಸಿದ್ಧತಾ ಕಾರ್ಯ ಪೂರ್ಣಗೊಂಡಿದೆ ಎಂದರು.

ಈ ಸಲ ದಸರಾಕ್ಕೆ ಎರಡು ಹಂತದ ಭದ್ರತೆ ಕೈಗೊಳ್ಳಲಾಗಿದೆ. ಮೆರವಣಿಗೆ ಸಾಗುವ ಮಾರ್ಗದಲ್ಲಿ ವ್ಯಾಪಕ ಬಂದೋಬಸ್ತ್ ಮಾಡಲಾಗುವುದು. ಜಿಲ್ಲೆ ಮಾತ್ರವಲ್ಲದೇ ರಾಜ್ಯದ ವಿವಿಧೆಡೆಯಿಂದ ಆಗಮಿಸಿರುವ ಸಾವಿರಕ್ಕೂ ಹೆಚ್ಚು ಪೊಲೀಸರು ಭದ್ರತಾ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.

ಮಫ್ತಿಯಲ್ಲಿರುವ ಪೊಲೀಸರು ಎಲ್ಲೆಡೆ ನಿಗಾ ವಹಿಸಲಿದ್ದಾರೆ. ಮೆರವಣಿಗೆ ಸಾಗುವ ಮಾರ್ಗ ಸೇರಿದಂತೆ ಆಯಕಟ್ಟಿನ ಜನನಿಬಿಡ ಸ್ಥಳದಲ್ಲಿ ಸಿಸಿ ಕ್ಯಾಮರಾ ಅಳವಡಿಸಿ ಕಣ್ಗಾವಲು ಇಡಲಾಗಿದೆ. ದೇಶ-ವಿದೇಶಗಳಿಂದ ಆಗಮಿಸುವ ಪ್ರವಾಸಿಗರಿಗೆ ರಕ್ಷಣೆ ನೀಡಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.

ಪಾಸ್ ಇದ್ದವರಿಗೆ ಮಾತ್ರ ಅವಕಾಶ

ಜಂಬೂಸವಾರಿ ಮೆರವಣಿಗೆ, ಪಂಜಿನ ಕವಾಯತಿಗೆ ಪಾಸ್ ಇದ್ದವರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಅಂಬಾರಿ ಸಾಗುವ ಮಾರ್ಗದಲ್ಲಿ ಶಿಥಿಲಾವಸ್ಥೆಯ ಕಟ್ಟಡಗಳು, ಮರಗಳ ಮೇಲೆ ಕುಳಿತು ವೀಕ್ಷಿಸಬಾರದು. ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸಬೇಕು ಎಂದು ಕೋರಿದರು.

ಡಿಸಿಪಿಗಳಾದ ಸುಂದರ್‌ರಾಜ್, ಬಿಂದುಮಣಿ, ಡಿಸಿಎಫ್ ಡಾ.ಐ.ಬಿ.ಪ್ರಭುಗೌಡ ಸೇರಿದಂತೆ ಹಲವರು ಇದ್ದರು.

ಜಂಬೂಸವಾರಿಗೆ ಕಾಡಿನಿಂದ ನಾಡಿಗೆ ಆಗಮಿಸಿರುವ 14 ಆನೆಗಳು ಎಲ್ಲ ತಾಲೀಮಿನಲ್ಲೂ ಉತ್ತಮವಾಗಿ ಪ್ರದರ್ಶನ ನೀಡಿವೆ. ವಿಜಯದಶಮಿ ಮೆರವಣಿಗೆಯಲ್ಲಿ ಸಾರ್ವಜನಿಕರು ಕೂಗಾಡಿ ಆನೆಗಳಿಗೆ ತೊಂದರೆ ಕೊಡದೆ ಶಾಂತ ರೀತಿಯಲ್ಲಿ ವರ್ತಿಸಬೇಕು.ಡಾ.ಎಸ್.ರವಿಶಂಕರ್, ಮೈಸೂರು ವೃತ್ತ ಅರಣ್ಯ ಸಂರಕ್ಷಣಾಧಿಕಾರಿ