ಪ್ರಸ್ತಕ ಸಾಲಿನ ದಸರಾ ಚಲನಚಿತ್ರೋತ್ಸವಕ್ಕೆ ಚಿತ್ರ ರಸಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದ್ದು, ಪ್ರತಿಯೊಂದು ಸಿನಿಮಾವೂ ಭಾಗಶಃ ಹೌಸ್‌ುಲ್ ಪ್ರದರ್ಶನ ಕಾಣುತ್ತಿವೆ.
ನಾಡಹಬ್ಬ ದಸರಾ ಮಹೋತ್ಸವ ಅಂಗವಾಗಿ ದಸರಾ ಚಲನಚಿತ್ರೋತ್ಸವಕ್ಕೆ ಚಾಲನೆ ದೊರೆತು ಮೂರು ದಿನ ಕಳೆದಿದೆ. ನಿತ್ಯ 13 ಸಿನಿಮಾಗಳು ಪ್ರದರ್ಶನ ಕಾಣುತ್ತಿವೆ. ಇವುಗಳನ್ನು ವೀಕ್ಷಿಸಲು ಸಿನಿಪ್ರೇಮಿಗಳು ಮುಗಿಬೀಳುತ್ತಿದ್ದಾರೆ. ಹೀಗಾಗಿ, ಪ್ರತಿಯೊಂದು ಷೋಗಳು ಸಹ ಭರ್ಜರಿಯಾಗಿ ಓಡುತ್ತಿವೆ.
ನಗರದ ‘ಮಾಲ್ ಆಫ್ ಮೈಸೂರು’ನಲ್ಲಿರುವ ‘ಇನಾಕ್ಸ್’ ಮಲ್ಟಿಫ್ಲೆಕ್ಸ್‌ನಲ್ಲಿ ಇರುವ 3 ಪರದೆಗಳಲ್ಲಿ ವಿವಿಧ ಭಾಷೆಗಳ ಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ. ಮಕ್ಕಳ ಚಿತ್ರಗಳು, ಮಹಿಳಾ ನಿರ್ದೇಶನದ ಚಿತ್ರಗಳಿಗೆ ಪ್ರಾಧಾನ್ಯತೆ ಕೊಡಲಾಗಿದೆ.
ಇದರೊಂದಿಗೆ ಸದಭಿರುಚಿಯ ಸಾಮಾಜಿಕ ಸಂದೇಶ ಸಾರುವ ಹಾಗೂ ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿ ಪುರಸ್ಕೃತ ಚಲನಚಿತ್ರ ಸೇರಿದಂತೆ 84 ಸಿನಿಮಾಗಳನ್ನು ಪ್ರದರ್ಶಿಸಲಾಗುತ್ತಿದೆ. ಈ ಪೈಕಿ ಅರ್ಧದಷ್ಟು ಸಿನಿಮಾಗಳನ್ನು ನೋಂದಾಯಿತ ಪ್ರೇಕ್ಷಕರು ಕಣ್ತುಂಬಿಕೊಂಡಿದ್ದಾರೆ. ಇನ್ನೂ ಮೂರು ದಿನಗಳಲ್ಲಿ ಸಿನಿ ಉತ್ಸವಕ್ಕೆ ತೆರೆ ಬೀಳಲಿದೆ.
ದಸರಾ ಮಹೋತ್ಸವ ಉದ್ಘಾಟನೆಗೂ ಮೊದಲೇ ಈ ಸಲ ಚಿತ್ರೋತ್ಸವ ಶುರು ಮಾಡಿದ್ದು ಸಲತೆಗೆ ಮುಖ್ಯ ಕಾರಣವಾಗಿದೆ. ಒಂದೇ ಸೂರಿನಲ್ಲಿ ಮೂರು ಪರದೆಯಲ್ಲಿ ಚಿತ್ರಗಳು ಪ್ರದರ್ಶನವಾಗುತ್ತಿರುವುದು ಮತ್ತೊಂದು ಸಕಾರಾತ್ಮಕ ಅಂಶವಾಗಿದೆ. ಜತೆಗೆ, ಆಧುನಿಕ ಸೌಕರ್ಯ ವ್ಯವಸ್ಥೆ ಇರುವ ಮಲ್ಟಿಫ್ಲೆಕ್ಸ್‌ನಲ್ಲಿ ಇದನ್ನು ಆಯೋಜಿಸಿರುವುದು ಸಹ ಚಿತ್ರೋತ್ಸವದತ್ತ ಆಕರ್ಷಣೆಗೆ ಒಳಗಾಗಲು ಮತ್ತೊಂದು ಧನಾತ್ಮಕ ಸಂಗತಿಯಾಗಿದೆ.
ಪ್ರತಿ ವರ್ಷ ದಸರಾದೊಂದಿಗೆ ಚಲನಚಿತ್ರೋತ್ಸವವೂ ಉದ್ಘಾಟನೆಯಾಗುತಿತ್ತು. ಚಾಮುಂಡಿಬೆಟ್ಟದಲ್ಲಿ ನಾಡಹಬ್ಬಕ್ಕೆ ಚಾಲನೆ ದೊರೆತ ಬಳಿಕ ಕಲಾಮಂದಿರದಲ್ಲಿ ಇದಕ್ಕೂ ಚಾಲನೆ ದೊರೆಯುತ್ತಿತ್ತು. ಅದೇ ದಿನ ಫಲಪುಷ್ಪ ಪ್ರದರ್ಶನ, ಆಹಾರ ಮೇಳ, ಕುಸ್ತಿ ಪಂದ್ಯಾವಳಿ, ಚಿತ್ರಕಲಾ ಶಿಬಿರ, ಪುಸ್ತಕ ಮೇಳ, ಕ್ರೀಡಾಕೂಟ, ವಸ್ತುಪ್ರದರ್ಶನ ಹೀಗೆ ಸಾಲು ಸಾಲು ಕಾರ್ಯಕ್ರಮಗಳ ಅಂಕದ ಪರದೆ ತೆರೆದುಕೊಳ್ಳುತ್ತಿತ್ತು.
ದಸರಾ ಕಾರ್ಯಕ್ರಮಗಳ ಭರಾಟೆಯಲ್ಲಿ ಚಲನಚಿತ್ರೋತ್ಸವ ತೆರೆಮರೆಗೆ ಸರಿದುಹೋಗುತ್ತಿತ್ತು. ಹೆಚ್ಚಿನ ಪ್ರಚಾರವೂ ದೊರೆಯುತ್ತಿರಲಿಲ್ಲ. ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರನ್ನು ಸೆಳೆಯಲೂ ಸಾಧ್ಯವಾಗುತ್ತಿರಲಿಲ್ಲ.
ಈ ಸಲ ಮೊದಲೇ ಸಿನಿ ಉತ್ಸವ ಶುರು ಮಾಡಿದ್ದರಿಂದ ಪ್ರೇಕ್ಷಕರನ್ನು ಸೆಳೆಯಲು ಅನುವು ಆಗಿದೆ. ಇಡೀ ಗಮನ ಚಿತ್ರದತ್ತವೇ ಕೇಂದ್ರೀಕರಣಗೊಳ್ಳುವಂತೆ ಮಾಡಲಾಗಿದೆ. ದಸರಾ ಅಂಗವಾಗಿ ಮಾನಸಗಂಗೋತ್ರಿಯ ಬಯಲುರಂಗಮಂದಿರದಲ್ಲಿ ಸಂಜೆ ಆಯೋಜಿಸುವ ‘ಯುವ ಸಂಭ್ರಮ’ ಹೊರತುಪಡಿಸಿದರೆ, ಇಡೀ ದಿನ ನಡೆಯುವ ಏಕೈಕ ಕಾರ್ಯಕ್ರಮ ಸಿನಿಮೋತ್ಸವ ಮಾತ್ರ. ಹೀಗಾಗಿ, ಯುವ ಜನರು, ವಿದ್ಯಾರ್ಥಿಗಳು, ವಯಸ್ಕರ ಗಮನ ಚಿತ್ರೋತ್ಸವದ ಮೇಲೆ ಚಿತ್ತ ನೆಟ್ಟಿದೆ.
ಅಲ್ಲದೆ, ಈ ಹಿಂದೆ ನಗರದಲ್ಲಿರುವ ಏಕಪರದೆಯ ವಿವಿಧ ಚಿತ್ರಮಂದಿರಗಳಲ್ಲಿ ಚಿತ್ರಗಳು ಪ್ರದರ್ಶನವಾಗುತ್ತಿದ್ದವು. ಇದರಿಂದ ಪ್ರೇಕ್ಷಕರು ಚದುರಿಹೋಗುತ್ತಿದ್ದರು. ಒಂದು ಥಿಯೇಟರ್‌ಗೆ ಹೋದವರು, ಉತ್ತಮ ಚಿತ್ರವಿದ್ದರೂ ಇನ್ನೊಂದು ಟಾಕೀಸ್‌ಗೆ ಕಡೆಗೆ ಹೋಗುತ್ತಿರಲಿಲ್ಲ. ಅಲ್ಲಿಯಿಂದ ಇಲ್ಲಿಗೆ ಅಲೆದಾಟದಿಂದ ಪ್ರೇಕ್ಷಕರಲ್ಲೂ ನಿರಾಸಕ್ತಿ ಮೂಡುತ್ತಿತ್ತು.
ನಟಿ, ಅಭಿನಯ ಶಾರದೆ, ಕನ್ನಡ ಚಿತ್ರರಂಗದ ಮೊದಲ ಮಹಿಳಾ ಸೂಪರ್‌ಸ್ಟಾರ್ ದಿವಂಗತ ಬಿ.ಸರೋಜಾದೇವಿ ಅವರ ಸವಿನೆನಪಿನಲ್ಲಿ ಈ ಬಾರಿಯ ಚಲನಚಿತ್ರೋತ್ಸವ ಆಯೋಜಿಸಿದ್ದು, ಅವರ ಅಭಿನಯದ ಜನಪ್ರಿಯ ಚಲನಚಿತ್ರವನ್ನು ಪ್ರದರ್ಶಿಸಲಾಗುತ್ತಿದೆ. ಹಳೇ ಕಾಲ ಸಿನಿಪ್ರೇಕ್ಷಕರು ಈ ಸಿನಿಮಾಗಳನ್ನು ವೀಕ್ಷಿಸುವ ಮೂಲಕ ಹಳೇ ನೆನಪುಗಳನ್ನು ಮೆಲುಕು ಹಾಕುತ್ತಿದ್ದಾರೆ.
ಪ್ರಗತಿ ಅಶ್ವತ್ಥನಾರಾಯಣ್ ನೇತೃತ್ವದಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕರಾದ ಪುಟ್ಟಣ್ಣ ಕಣಗಾಲ್, ಎನ್.ಲಕ್ಷ್ಮೀನಾರಾಯಣ್, ಸಿದ್ದಲಿಂಗಯ್ಯ ಅವರ ತೆರೆಮರೆಯ ಶೈಲಿಯನ್ನು ಬಿತ್ತರಿಸುವ ಛಾಯಾಚಿತ್ರ ಪ್ರದರ್ಶನ ಆಯೋಜಿಸಿದ್ದು, ಈ ಸಿನಿ ಫೋಟೋ ಪ್ರದರ್ಶನವನ್ನು ‘ಐನಾಕ್ಸ್ ಸಿನಿಮಾಸ್’ ಹೊರಾವರಣದಲ್ಲಿ ಆಯೋಜನೆ ಮಾಡಲಾಗಿದೆ. ಇದನ್ನು ಸಿನಿಮಾ ವೀಕ್ಷಣೆಗೆ ಬಂದವರು ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ. ಇದಕ್ಕೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಸಿನಿರಸಿಕರಿಗೆ ಅನುಕೂಲವಾಗುವಂತೆ ಪಾಸ್ ನೀಡಲಾಗಿದೆ. ವಿದ್ಯಾರ್ಥಿಗಳಿಗೆ 300 ರೂ. ಹಾಗೂ ಇತರರಿಗೆ 500 ರೂ. ನೀಡಿ ಪಾಸ್ ಪಡೆದು ನೋಂದಾಯಿಸಿಕೊಂಡಿದ್ದಾರೆ. ಚಿತ್ರೋತ್ಸವದ 7 ದಿನವೂ ಸಿನಿಮಾಗಳನ್ನು ವೀಕ್ಷಿಸಲು ಅನುವು ಮಾಡಿಕೊಡಲಾಗಿದೆ. ಪಾಸ್ ಜತೆಯಲ್ಲಿ ಕಿರುಹೊತ್ತಗೆ ನೀಡಿರುವುದರಿಂದ ಚಲನಚಿತ್ರಗಳ ಮಾಹಿತಿ ನೀಡಲಾಗಿದೆ.
ಚಲನಚಿತ್ರೋತ್ಸವಕ್ಕೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಎಲ್ಲ ಪ್ರದರ್ಶನಗಳು ಪ್ರೇಕ್ಷಕರಿಂದ ಭರ್ತಿಯಾಗುತ್ತಿವೆ. ದಸರಾಕ್ಕೂ ಮೊದಲೇ ಸಿನಿಮಾಗಳನ್ನು ತೋರಿಸುತ್ತಿರುವುದರಿಂದ ಈ ಸಲ ಅನುಕೂಲವಾಗಿದೆ. ಹೀಗಾಗಿ, ಚಿತ್ರಗಳನ್ನು ನೋಡಲು ಬರುತ್ತಿರುವ ಪ್ರೇಕ್ಷಕರಲ್ಲಿ ಹೆಚ್ಚಿನ ಆಸಕ್ತಿ, ಕುತೂಹಲ ವ್ಯಕ್ತವಾಗುತ್ತಿದೆ.ಟಿ.ಕೆ.ಹರೀಶ್ಕಾರ್ಯದರ್ಶಿ, ದಸರಾ ಚಲನಚಿತ್ರೋತ್ಸವ ಸಮಿತಿ