ಜಿಲ್ಲೆ

ದಸರಾ ಗೋಲ್ಡ್ ಕಾರ್ಡ್ ಮರುಚಾಲನೆಗೆ ಒತ್ತಡ

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ವಿವಿಧ ಕಾರ್ಯಕ್ರಮಗಳನ್ನು ವೀಕ್ಷಿಸಲು ಪ್ರವಾಸಿಗರಿಗೆ ಅನುಕೂಲ ಕಲ್ಪಿಸಿಕೊಡುವ ‘ಗೋಲ್ಡ್ ಕಾರ್ಡ್’ ವಿತರಣೆಗೆ ಮರುಚಾಲನೆ ನೀಡಬೇಕು ಎಂಬ ಒತ್ತಾಯ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಶುರುವಾಗಿದೆ.

ಪ್ರತಿವರ್ಷ ಗೋಲ್ಡ್ ಕಾರ್ಡ್ ವಿತರಣೆ ಮಾಡಲಾಗುತ್ತಿತ್ತು. ಇದು ಅವ್ಯವಸ್ಥೆ, ಅಕ್ರಮ ಮಾರಾಟ, ರಾಜಕೀಯ ಒತ್ತಡ, ಲಾಬಿಗೂ ಕಾರಣವಾಗುತ್ತಿತ್ತು. ಅಂತೆಯೆ, ಪ್ರತಿ ಸಲವೂ ಅವಾಂತರವನ್ನೇ ಸೃಷ್ಟಿಸುತ್ತಿತ್ತು. ಆದ್ದರಿಂದ ಈ ಬಾರಿ ಗೋಲ್ಡ್ ಕಾರ್ಡ್ ವಿತರಣೆಯನ್ನೇ ಕೈಬಿಡಲಾಗಿದೆ. ಇದರಿಂದ ಅವ್ಯವಸ್ಥೆ ಸರಿಪಡಿಸುವ ಬದಲು ಇಡೀ ವ್ಯವಸ್ಥೆಯನ್ನೇ ರದ್ದುಪಡಿಸಿದಂತಾಗಿದೆ.

ಜಿಲ್ಲಾ ಮಟ್ಟದಲ್ಲಿ ನಡೆದ ಮೊದಲ ದಸರಾ ಪೂರ್ವಭಾವಿ ಸಭೆಯಲ್ಲಿ ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಸುಳಿವು ನೀಡಿದ್ದರು. ಅಲ್ಲದೆ, ಕೆಲ ದಿನಗಳ ಬಳಿಕ ಈ ಸಂಬಂಧ ಪ್ರತಿಕ್ರಿಯೆ ನೀಡಿದ ಸಚಿವರು, ‘ಈ ಸಲ ಗೋಲ್ಡ್ ಕಾರ್ಡ್ ಇರಲ್ಲ. ಗಣ್ಯರು, ವಿದೇಶಿಗರು ಹೆಚ್ಚಾಗಿ ಗೋಲ್ಡ್ ಕಾರ್ಡ್ ಅವಲಂಬಿಸಿದ್ದರು. ಒತ್ತಡ ಕಡಿಮೆ ಮಾಡುವ ಸಲುವಾಗಿ ಈ ಕಾರ್ಡ್ ರದ್ದು ಮಾಡಲಾಗಿದೆ’ ಎಂದು ಹೇಳಿದ್ದಾರೆ. ಇದಕ್ಕೆ ಸಾರ್ವಜನಿಕ ವಲಯ ಹಾಗೂ ಪ್ರವಾಸೋದ್ಯಮ ಕ್ಷೇತ್ರದಿಂದ ಅಸಮಾಧಾನ ವ್ಯಕ್ತವಾಗಿದೆ.


ಅಭಿಯಾನಕ್ಕೆ ಬೆಂಬಲ:
ಈ ನಡುವೆ, ‘ದಸರಾ ಗೋಲ್ಡ್ ಕಾರ್ಡ್ ವಿತರಣೆ ಮಾಡಬೇಕು’ ಎಂದು ಜಿಲ್ಲಾಡಳಿತದ ಮೇಲೆ ಒತ್ತಡ ಹೇರುವ ಪ್ರಯತ್ನಗಳು ನಡೆದಿವೆ. ಅದಕ್ಕಾಗಿ ಮೈಸೂರು ಸಂಘ-ಸಂಸ್ಥೆಗಳ ಒಕ್ಕೂಟದ ವತಿಯಿಂದ ಅಭಿಯಾನ ಕೈಗೊಳ್ಳಲಾಗಿದೆ. ಪ್ರವಾಸೋದ್ಯಮವನ್ನು ನೆಚ್ಚಿಕೊಂಡಿರುವ ಹೋಟೆಲ್ ಮಾಲೀಕರು, ಟ್ರಾವೆಲ್ ಅಸೋಸಿಯೇಷನ್ ಇನ್ನಿತರ ಕ್ಷೇತ್ರಗಳ ಪ್ರತಿನಿಧಿಗಳು ಇದಕ್ಕೆ ಧ್ವನಿಗೂಡಿಸಿದ್ದಾರೆ. ಗೋಲ್ಡ್ ಕಾರ್ಡ್ ವಿತರಿಸುವಂತೆ ಸಾಮಾಜಿಕ ಜಾಲತಾಣಗಳಾದ ಟ್ವಿಟ್ಟರ್, ಫೇಸ್‌ಬುಕ್, ವ್ಯಾಟ್ಸ್‌ಆ್ಯಪ್‌ನಲ್ಲಿ ಅಭಿಯಾನ ನಡೆಸಲಾಗಿದೆ.

ಸುಲಭ ಪ್ರವೇಶ:
ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸುವ ಪ್ರವಾಸಿಗರನ್ನು ಆಕರ್ಷಿಸಲು ಪ್ರತಿವರ್ಷ ಗೋಲ್ಡ್ ಕಾರ್ಡ್ ವಿತರಿಸಲಾಗುತ್ತಿತ್ತು. ಹಿಂದಿನಿಂದಲೂ ಈ ವ್ಯವಸ್ಥೆ ನಡೆದುಕೊಂಡು ಬಂದಿದೆ. ಈ ಕಾರ್ಡ್‌ನಿಂದ ಅರಮನೆ ಆವರಣದಲ್ಲಿ ಜಂಬೂಸವಾರಿ ಮೆರವಣಿಗೆ ವೀಕ್ಷಣೆಗೆ ಅವಕಾಶ, ಪಂಜಿನ ಕವಾಯತು, ಯುವದಸರಾ, ಫಲಪುಷ್ಪ ಪ್ರದರ್ಶನ, ವಸ್ತುಪ್ರದರ್ಶನ, ಸಂಗೀತ ಕಾರ್ಯಕ್ರಮ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಸುಲಭ ಪ್ರವೇಶ ಇರುತ್ತದೆ. ಈ ಕಾರ್ಡ್‌ದಾರರಿಗೆ ಪ್ರತ್ಯೇಕ ಆಸನದ ವ್ಯವಸ್ಥೆಯನ್ನೂ ಮಾಡಲಾಗುತ್ತದೆ. ಇದರೊಂದಿಗೆ ಚಾಮರಾಜೇಂದ್ರ ಮೃಗಾಲಯ, ಚಾಮುಂಡಿಬೆಟ್ಟ, ಶ್ರೀರಂಗಪಟ್ಟಣದ ರಂಗನತಿಟ್ಟು, ಕೆಆರ್‌ಎಸ್‌ನಲ್ಲಿರುವ ಬೃಂದಾವನ ಸೇರಿದಂತೆ ವಿವಿಧ ಪ್ರವಾಸಿ ತಾಣಗಳಿಗೆ ಪ್ರವೇಶ
ದೊರೆಯುತ್ತದೆ.

ಬೇಡಿಕೆ ಹೆಚ್ಚು:
ಪ್ರತಿ ಸಲವೂ ಗೋಲ್ಡ್ ಕಾರ್ಡ್‌ಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಅದರಲ್ಲೂ ವಿದೇಶಿಯರು, ಅನ್ಯ ರಾಜ್ಯದ ಪ್ರವಾಸಿಗರು ಇದನ್ನು ಖರೀದಿಲು ಮುಗಿಬೀಳುತ್ತಾರೆ. ಪ್ರತಿವರ್ಷ 1 ಸಾವಿರ ಕಾರ್ಡ್‌ಗಳನ್ನು ಮುದ್ರಿಸಿ ಜಿಲ್ಲಾಧಿಕಾರಿ ಕಚೇರಿ ಮೂಲಕ ವಿತರಿಸಲಾಗುತ್ತಿತ್ತು. 2019ರಲ್ಲಿ ಒಂದು ಗೋಲ್ಡ್‌ಕಾರ್ಡ್ ಬೆಲೆ 4 ಸಾವಿರ ರೂ. ಇತ್ತು. ಆನ್‌ಲೈನ್ ಮೂಲಕವೂ ಖರೀದಿಸುವ ಅವಕಾಶ ಕಲ್ಪಿಸಲಾಗಿತ್ತು. ಆದರೀಗ, ಗೋಲ್ಡ್ ಕಾರ್ಡ್ ಪಡೆದವರಿಗೆ ಜಂಬೂಸವಾರಿ ಮೆರವಣಿಗೆ ವೀಕ್ಷಣೆಗಾಗಿ ಅರಮನೆ ಆವರಣದಲ್ಲಿ ಆಸನ ವ್ಯವಸ್ಥೆ ಕಲ್ಪಿಸುವುದು ಮತ್ತು ಒತ್ತಡ ನಿರ್ವಹಣೆ ಕಷ್ಟವಾದ್ದರಿಂದ ಕಾರ್ಡ್ ವಿತರಣೆಯನ್ನೇ ರದ್ದುಪಡಿಸಲಾಗಿದೆ. ಬರೀ ವಿವಿಐಪಿ ಪಾಸ್ ಹಾಗೂ ಕರ್ತವ್ಯನಿರತ ಪಾಸ್ ಮಾತ್ರ ನೀಡಲು ಚಿಂತನೆ ನಡೆದಿದೆ.
ಆದರೆ, ಈ ಕ್ರಮ ಸರಿಯಲ್ಲ. ಪ್ರವಾಸಿಗರ ಅನುಕೂಲಕ್ಕಾಗಿ ಗೋಲ್ಡ್ ಕಾರ್ಡ್ ವಿತರಣೆ ಮಾಡಬೇಕು. ಈ ವ್ಯವಸ್ಥೆಯಲ್ಲಿರುವ ಲೋಪವನ್ನು ಸರಿಪಡಿಸಬೇಕು. ಪ್ರವಾಸಿ ಸ್ನೇಹಿ ವ್ಯವಸ್ಥೆ ರೂಪಿಸಬೇಕು. ಈ ಮೂಲಕ ಕಾರ್ಡ್‌ನ ಅಕ್ರಮ ಮಾರಾಟ, ಲಾಬಿ, ರಾಜಕೀಯ ಒತ್ತಡಕ್ಕೆ ಕಡಿವಾಣ ಹಾಕಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಗೋಲ್ಡ್ ಕಾರ್ಡ್ ಮತ್ತು ಸಾಮಾನ್ಯ ಪಾಸ್ ವಿತರಣೆಯಲ್ಲಿ ದುರುಪಯೋಗ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಕಾರ್ಡ್ ವಿತರಣೆಯನ್ನು ಕೈಬಿಡಲಾಗಿದೆ. ಜಂಬೂಸವಾರಿ ಮೆರವಣಿಗೆ, ಪಂಜಿನ ಕವಾಯತು ಕಾರ್ಯಕ್ರಮಕ್ಕೆ ಮಾತ್ರ ಟಿಕೆಟ್ ವ್ಯವಸ್ಥೆ ಮಾಡುವ ಚಿಂತನೆ ಇದೆ. ಈ ಕುರಿತು ಇನ್ನೂ ತೀರ್ಮಾನವಾಗಿಲ್ಲ. ಮುಖ್ಯಮಂತ್ರಿ ಅವರ ಜತೆ ಚರ್ಚಿಸಿ ಕ್ರಮ ವಹಿಸಲಾಗುವುದು.ಎಸ್.ಟಿ.ಸೋಮಶೇಖರಜಿಲ್ಲಾ ಉಸ್ತುವಾರಿ ಸಚಿವ
ಪ್ರವಾಸಿಗರ ಅನುಕೂಲಕ್ಕಾಗಿ ಗೋಲ್ಡ್ ಕಾರ್ಡ್ ವಿತರಣೆಗೆ ಮರು ಚಾಲನೆ ನೀಡಬೇಕು. ಈ ಕುರಿತು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗಿದೆ.ಸಿ.ನಾರಾಯಣಗೌಡಅಧ್ಯಕ್ಷ, ಮೈಸೂರು ಹೋಟೆಲ್ ಮಾಲೀಕರ ಸಂಘ