ಜಿಲ್ಲೆ

ದಸರಾ ಗಜಪಡೆ ಮೇಲೆ ಸಿಸಿ ಕ್ಯಾಮರಾ ಕಣ್ಗಾವಲು

reportermys

ಮೈಸೂರು: ಅರಮನೆಯಲ್ಲಿ ಬೀಡುಬಿಟ್ಟಿರುವ ದಸರಾ ಗಜಪಡೆಯ ಮೇಲೆ ಸಿಸಿ ಕ್ಯಾಮರಾ ಕಣ್ಗಾವಲು ಇಡಲಾಗಿದ್ದು, ಆನೆಗಳ ಚಲನವಲನ ಮತ್ತು ಅಪರಿಚಿತರು ಸಮೀಪ ಹೋಗದಂತೆ ನಿಗಾ ವಹಿಸಲಾಗಿದೆ.

ದಸರಾ ಗಜಪಡೆಯ ಭದ್ರತೆಗಾಗಿ ಈಗಾಗಲೇ ಅರಣ್ಯ ಹಾಗೂ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಆನೆಗಳ ಬಳಿ ನುಸುಳುವಿಕೆ ತಡೆಗೆ ಬ್ಯಾರಿಕೇಡ್ ಹಾಕಿ ಕ್ರಮ ಕೈಗೊಳ್ಳಲಾಗಿದೆ. ಇದರೊಂದಿಗೆ, ದಿನದ 24 ಗಂಟೆಯೂ ಕಟ್ಟೆಚ್ಚರ ವಹಿಸಲು ಸಿಸಿ ಕ್ಯಾಮರಾ ಬಳಕೆ ಮಾಡಲಾಗಿದೆ.

ಇಲ್ಲಿ 8 ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಪ್ರಮುಖವಾಗಿ, ಗಜಪಡೆಗೆ ಪೌಷ್ಟಿಕ ಆಹಾರ ತಯಾರಿಸುವ ಸ್ಥಳ, ಆಹಾರ ನೀಡುವುದು, ಅಂಬಾರಿ ಆನೆ ಇರುವ ಸ್ಥಳ, ಮಾವುತರ ಶೆಡ್ ಬಳಿ, ಒಣಹುಲ್ಲು ಸಂಗ್ರಹ ಘಟಕ ಹಾಗೂ ಎರಡು ಸ್ಥಳದಲ್ಲಿ ಬೀಡು ಬಿಟ್ಟಿರುವ 7 ಆನೆಗಳ ಚಿತ್ರಣವೂ ಕಾಣುವಂತೆ ಕ್ಯಾಮರಾ ಅಳವಡಿಕೆ ಮಾಡಿ ಪ್ರತಿಯೊಂದು ಚಟುವಟಿಕೆಯನ್ನೂ ವೀಕ್ಷಿಸಲಾಗುತ್ತದೆ.

ಸಿಸಿ ಕ್ಯಾಮರಾಗಳಲ್ಲಿ ಸೆರೆಯಾಗುವ ದೃಶ್ಯಾವಳಿ ಒಂದು ತಿಂಗಳವರೆಗೂ ದಾಖಲಾಗುವ ವ್ಯವಸ್ಥೆ ಮಾಡಲಾಗಿದೆ. ವಿದ್ಯುತ್ ಕಡಿತವಾದರೆ ರೆಕಾರ್ಡಿಂಗ್ ಸ್ಥಗಿತಗೊಳ್ಳಬಹುದೆಂಬ ಆತಂಕದಿಂದ ಪ್ರತ್ಯೇಕ ಬ್ಯಾಟರಿ ವ್ಯವಸ್ಥೆ ಮಾಡಲಾಗಿದೆ.

ಸಿಸಿ ಕ್ಯಾಮರಾಗಳ ದೃಶ್ಯ ಅರಮನೆಯಲ್ಲಿರುವ ಆನೆ ಕ್ಯಾಂಪ್ ಬಳಿಯೇ ಪರದೆಯ ಮೇಲೆ ಬಿತ್ತರವಾಗುತ್ತಿದೆ. ಅದನ್ನು ವೀಕ್ಷಿಸಲು ಅರಣ್ಯ ಸಿಬ್ಬಂದಿಯೊಬ್ಬರನ್ನು ನಿಯೋಜಿಸಲಾಗಿದೆ. ಇದರ ಜತೆಗೆ ಡಿಸಿಎಫ್ ಡಾ.ವಿ.ಕರಿಕಾಳನ್ ಹಾಗೂ ಆರ್‌ಎಫ್‌ಒ ಸಂತೋಷ್ ಹೂಗಾರ್ ಮೊಬೈಲ್‌ನಲ್ಲೇ ಇದರ ದೃಶ್ಯಾವಳಿ ವೀಕ್ಷಿಸಬಹುದಾಗಿದೆ. ಇದರಿಂದ ಅಧಿಕಾರಿಗಳು ಅರಮನೆ ಆವರಣದಲ್ಲಿ ಇಲ್ಲದೇ ಇದ್ದರೂ ಆನೆಗಳ ಚಲನವಲನವನ್ನು ತಾವಿರುವ ಸ್ಥಳದಿಂದಲೇ ವೀಕ್ಷಿಸಬಹುದಾಗಿದೆ.

ಅಭಿಮನ್ಯು ನೇತೃತ್ವದ 9 ಆನೆಗಳಿಗೆ ಪೌಷ್ಟಿಕ ಆಹಾರ ನೀಡುವ ಮೂಲಕ ಅವುಗಳ ಆರೈಕೆಗೆ ಕ್ರಮ ಕೈಗೊಳ್ಳಲಾಗಿದೆ. ಈ ನಡುವೆ, ಅರಮನೆಗೆ ಆಗಮಿಸುವ ಪ್ರವಾಸಿಗರಲ್ಲಿ ಹಲವರು ಗಜಪಡೆಯನ್ನು ಕಣ್ತುಂಬಿಕೊಳ್ಳಲು ಬಯಸುತ್ತಿದ್ದು, ಇದರಿಂದ ಆನೆಗಳ ಬಳಿ ನುಸುಳುವ ಸಾಧ್ಯತೆ ಇದೆ. ಹೀಗಾಗಿ ಆನೆಗಳ ಭದ್ರತೆಗಾಗಿ ಈ ಕ್ರಮ ವಹಿಸುವ ಮೂಲಕ ಅವುಗಳ ಚಲನವಲನ ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ.

ಪ್ರತಿವರ್ಷದಂತೆ ಚಿನ್ನದ ಅಂಬಾರಿ ಹೊರುವ ಆನೆಯನ್ನು ಪ್ರತ್ಯೇಕವಾಗಿ ಇರಿಸುವ ಪದ್ಧತಿ ಮುಂದುವರಿಸಲಾಗಿದ್ದು, ಅಂಬಾರಿ ಆನೆ ಅಭಿಮನ್ಯು ಹಾಗೂ ಕುಮ್ಕಿ ಆನೆ ಚೈತ್ರಾಳನ್ನು ಪ್ರತ್ಯೇಕವಾಗಿ ಶೆಡ್ ನಿರ್ಮಿಸಿ ಕಟ್ಟಿ ಹಾಕಲಾಗಿದೆ. ಹೀಗಾಗಿ, ಇವೆರಡು ಆನೆಗಳ ಮೇಲೆ ಎಲ್ಲಿಲ್ಲದ ಕಾಳಜಿ ವಹಿಸಲಾಗಿದೆ.

ಆನೆಗಳ ಭದ್ರತೆ ಮತ್ತು ಕಾಳಜಿಗಾಗಿ ಕ್ರಮ ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಅಪರಿಚಿತರು ಆನೆಗಳ ಬಳಿ ಹೋಗುವುದನ್ನು ಗಮನಿಸಲು ಹಾಗೂ ಆನೆಗಳ ವರ್ತನೆಯನ್ನು ದಿನದ 24 ಗಂಟೆಯಲ್ಲೂ ಸೂಕ್ಷ್ಮವಾಗಿ ಅವಲೋಕಿಸಲು ಸಿಸಿ ಕ್ಯಾಮರಾ ನೆರವಾಗಲಿದೆ.ಡಾ.ವಿ.ಕರಿಕಾಳನ್, ಡಿಸಿಎಫ್