ಜಿಲ್ಲೆ

ದಸರಾ ಕುಸ್ತಿಗೆ ಜೋಡಿ ಕಟ್ಟುವ ಕಾರ್ಯಕ್ಕೆ ಚಾಲನೆ

ಮೈಸೂರು: ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಕುಸ್ತಿ ಪಂದ್ಯಾವಳಿಗೆ ಜೋಡಿ ಕಟ್ಟುವ ಕಾರ್ಯಕ್ಕೆ ಭಾನುವಾರ ಚಾಲನೆ ನೀಡಲಾಯಿತು.
ದಸರಾ ಕುಸ್ತಿ ಸಮಿತಿಯಿಂದ ನಗರದ ವಸ್ತುಪ್ರದರ್ಶನ ಪ್ರಾಧಿಕಾರದಲ್ಲಿ ಕುಸ್ತಿಪಟುಗಳಿಗೆ ಬೆನ್ನುತಟ್ಟುವ ಮೂಲಕ ಜೋಡಿ ಕಟ್ಟುವ ಕಾರ್ಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹಾಗೂ ಶಾಸಕ ಜಿ.ಟಿ.ದೇವೇಗೌಡ ಚಾಲನೆ ನೀಡಿ ಪ್ರೋತ್ಸಾಹಿಸಿದರು.
ಮೈಸೂರು, ನಂಜನಗೂಡು, ಶ್ರೀರಂಗಪಟ್ಟಣ, ಗಂಜಾಂ, ಮಂಡ್ಯ, ಬನ್ನೂರು ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳ 350ಕ್ಕೂ ಹೆಚ್ಚು ಕುಸ್ತಿಪಟುಗಳು ಭಾಗವಹಿಸಿದ್ದು, ಅರ್ಜಿ ಸಲ್ಲಿಸಲು ನೂಕುನುಗ್ಗಲು ಉಂಟಾಯಿತು.
ಪುರುಷ, ಯುವಕ, ಮಹಿಳೆಯರು ಹಗೂ ಚಿಣ್ಣರನ್ನು ಅವರ ವಯಸ್ಸು, ತೂಕಕ್ಕೆ ಅನುಗುಣವಾಗಿ ವಿಭಾಗ ಮಾಡಲಾಯಿತು. ವಯಸ್ಸು, ತೂಕ, ದೇಹದಾರ್ಢ್ಯತೆ, ವೈಯಕ್ತಿಕ ಮಾಹಿತಿಗಳ ಆಧಾರದ ಮೇಲೆ ಹಿರಿಯ ಉಸ್ತಾದ್‌ಗಳು ಸೇರಿ ಒಟ್ಟು 140 ಜೋಡಿಗಳನ್ನು ಕಟ್ಟಲಾಯಿತು.
ಆಯ್ಕೆಯ ವೇಳೆ ಪೈಲ್ವಾನರು ಗದೆ ತಿರುಗಿಸುವ, ಕಲ್ಲು ಗುಂಡು ಎತ್ತುವ, ದಂಡ ಹೊಡೆಯುವ ಸ್ಪರ್ಧೆ ಸೇರಿದಂತೆ ಹಲವು ಕಸರತ್ತು ನಡೆಸುವ ಮೂಲಕ ತಮ್ಮ ಶಕ್ತಿ ಪ್ರದರ್ಶಿಸಿದರು. ಕಟ್ಟಿದ ಜೋಡಿಗಳಲ್ಲಿ 15 ಮಹಿಳಾ ಕುಸ್ತಿ ಪಟುಗಳು ಮತ್ತು 20 ಪುಟಾಣಿ ಪೈಲ್ವಾನರ ಜೋಡಿಗಳು ಸೇರಿವೆ.
ಮಂಗಳೂರಿನಲ್ಲಿ ಇಂದೇ ಕುಸ್ತಿ ಪಂದ್ಯಾವಳಿ ಆಯೋಜಿಸಿ ಪ್ರಸಿದ್ಧರು ಅಲ್ಲಿ ಭಾಗವಹಿಸಿದ್ದಾರೆ. ಆದ್ದರಿಂದ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಸೆಣಸುವ ಹೊರ ಜಿಲ್ಲೆ, ರಾಜ್ಯಗಳ ಕುಸ್ತಿ ಪಟುಗಳ ಜೋಡಿ ಕಟ್ಟುವ ಕಾರ್ಯ ಎರಡು ದಿನಗಳಲ್ಲಿ ಜರುಗಲಿದೆ ಎಂದುದಸರಾ ಕುಸ್ತಿ ಉಪಸಮಿತಿ ಕಾರ್ಯದರ್ಶಿ ಎ.ಜೆ.ಹರ್ಷವರ್ಧನ ತಿಳಿಸಿದರು
ಮೇಯರ್ ಶಿವಕುಮಾರ್, ಸಂಸದ ಪ್ರತಾಪಸಿಂಹ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ ಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್, ದಸರಾ ಕುಸ್ತಿ ಉಪ ಸಮಿತಿಯ ವಿಶೇಷಾಧಿಕಾರಿಯಾದ ಎಎಸ್‌ಪಿ ಬಿ.ಎನ್.ನಂದಿನಿ ಇತರರು ಇದ್ದರು.