ಜಿಲ್ಲೆ

ದಸರಾ ಉದ್ಘಾಟನೆ ವೇಳೆಗೆ ಮಳಿಗೆಗಳು ಭರ್ತಿ: ಮಿರ್ಲೆ ಶ್ರೀನಿವಾಸಗೌಡ

ಮೈಸೂರು: ದಸರಾ ಮಹೋತ್ಸವದ ಉದ್ಘಾಟನೆ ದಿನವೇ ತುಂಬಿದ ವಸ್ತು ಪ್ರದರ್ಶನಕ್ಕೂ ಚಾಲನೆ ನೀಡಲಾಗುವುದು. ಈಗಾಗಲೇ ಶೇ.75ರಷ್ಟು ಕಾಮಗಾರಿ ಪೂರ್ಣಗೊಂಡಿದೆ ಎಂದು ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ ತಿಳಿಸಿದರು.
ಪ್ರವಾಸೋದ್ಯಮ ಸಚಿವ ಆನಂದಸಿಂಗ್ ಅವರು ಸೆ.26ರಂದು ಸಂಜೆ 4ಕ್ಕೆ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಖಾಲಿ ಮಳಿಗೆ ಉದ್ಘಾಟಿಸಲಾಗುತ್ತದೆ ಎನ್ನುವ ಅಪವಾದ ಹೋಗಲಾಡಿಸಲು ಈ ಬಾರಿ ಒಂದು ವಾರ ಮುಂಚಿತವಾಗಿಯೇ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಲು ಉದ್ದೇಶಿಸಲಾಗಿತ್ತು. ಆದರೆ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕಾಮಗಾರಿ ನಡೆಸಲು ಅಡ್ಡಿಯಾಯಿತು ಎಂದು ಹೇಳಿದರು.
ಮುಖ್ಯಮಂತ್ರಿಗಳು ನಿರ್ದೇಶನ, ಜಿಲ್ಲಾ ಉಸ್ತುವಾರಿ ಸಚಿವರ ಆಶಯದಂತೆ ಉದ್ಘಾಟನೆಯ ದಿನವೇ ಮಳಿಗೆಗಳು ಭರ್ತಿಯಾಗುವಂತೆ ಕ್ರಮ ವಹಿಸಲಾಗಿದೆ. ಈಗ ಶೇ.75ರಷ್ಟು ಮಳಿಗೆ ಕಾಮಗಾರಿ ಪೂರ್ಣಗೊಂಡಿದೆ. ಹಿಂದಿನ ವರ್ಷದಲ್ಲಿ ಒಂದು ತಿಂಗಳ ಬಳಿಕ ನಡೆಯುತ್ತಿದ್ದ ಜಿಲ್ಲಾ ಪಂಚಾಯಿತಿ, ಸರ್ಕಾರಿ ಇಲಾಖೆಗಳ ಮಳಿಗೆ ಕಾಮಗಾರಿಗಳು ಈ ವರ್ಷ ಈಗಾಗಲೇ ಶುರುವಾಗಿದೆ. ಈ ಬಾರಿ ಜಿಲ್ಲಾ ಪಂಚಾಯಿತಿ, ಸರ್ಕಾರದ ವಿವಿಧ ಇಲಾಖೆಗಳು ಸೇರಿ 32 ಮಳಿಗೆ, 250 ವಿವಿಧ ಮಳಿಗೆಗಳು ಇರಲಿವೆ. ಪುಡ್‌ಕೋರ್ಟ್, ಅಮ್ಯೂಜಮೆಂಟ್ ಪಾರ್ಕ್ ಸೇರಿದಂತೆ ವಿವಿಧ ವಿಭಾಗಗಳು ಇರಲಿವೆ ಎಂದು ವಿವರಿಸಿದರು.
ವೀಕ್ಷರಿಗಾಗಿ ಡಿಟೇಲ್ ಆ್ಯಪ್:
ವಸ್ತು ಪ್ರದರ್ಶನಕ್ಕೆ ಭೇಟಿ ನೀಡುವವರಿಗೆ ಎಲ್ಲೆಲ್ಲಿ ಯಾವ ಮಳಿಗೆಗಳು ಇವೆ ಎನ್ನುವುದನ್ನು ತಿಳಿಸಲು ಈ ಬಾರಿ ಪ್ರಥಮವಾಗಿ ಡಿಟೇಲ್ ಆ್ಯಪ್ ಪರಿಚಯಿಸುತ್ತಿದೆ. ಟಿಕೆಟ್ ಕೌಂಟರ್ ಬಳಿ ಸ್ಕಾೃನ್ ಮಾಡಿದರೆ ವಸ್ತು ಪ್ರದರ್ಶನದ ರೂಟ್ ಮ್ಯಾಪ್ ತೋರಿಸುತ್ತದೆ. ಈ ಮೂಲಕ ಪ್ರವಾಸಿಗರು ಮಳಿಗೆಗಳಿಗೆ ಭೇಟಿ ನೀಡಿ ವೀಕ್ಷಿಸಬಹುದು ಎಂದು ಹೇಳಿದರು.
ಅಲ್ಲದೇ ದಕ್ಷಿಣ ಭಾರತದಲ್ಲಿಯೇ ಮೊದಲ ಬಾರಿಗೆ ವೀಡಿಯೋ ಮ್ಯಾಪ್ ಅಳವಡಿಸಲಾಗುತ್ತಿದೆ. ಮುಖ್ಯದ್ವಾರದಲ್ಲಿ ಪದರದೆ ಮೇಲೆ ಮಹಾರಾಜರ ಇತಿಹಾಸ ಮತ್ತು ಮೈಸೂರಿನ ವೈಭವ, ಪರಂಪರೆಯನ್ನು ಬಿಂಬಿಸಲಾಗುವುದು ಎಂದು ಹೇಳಿದರು.
ವಿರೋಧಕ್ಕೆ ಅರ್ಥವಿಲ್ಲ
ಸ್ವಾತಂತ್ರೃ ಸೇನಾನಿಗಳ ಮರಳಿನ (ಎಂ-ಸ್ಯಾಂಡ್) ಕಲಾಕೃತಿಗಳನ್ನು ನಿರ್ಮಿಸಲಾಗುತ್ತಿದ್ದು, ವೀರ ಸಾವರ್ಕರ್ ಅವರ ಪ್ರತಿಕೃತಿ ರಚಿಸದಂತೆ ಕಲಾವಿದೆ ಗೌರಿ ಅವರಿಗೆ ಬೆದರಿಕೆ ಬರುತ್ತಿವೆ. ಗಾಂಧಿ, ಅಂಬೇಡ್ಕರ್, ಭಗತ್‌ಸಿಂಗ್, ನೇತಾಜಿ ಅವರಂತೆ ಸಾವರ್ಕರ್ ಕಲಾಕೃತಿಯನ್ನು ರಚಿಸಲಾಗುತ್ತಿದೆ. ಇದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿ ಕಲಾವಿದರಿಗೆ ಬೆದರಿಕೆ ಹಾಕುವುದು ಸರಿಯಲ್ಲ. ಪ್ರಾಧಿಕಾರ ಕೋರಿದ್ದನ್ನು ಕಲಾವಿದರು ಮಾಡುತ್ತಿದ್ದಾರೆ. ಹೀಗಾಗಿ ಕಲಾವಿದರ ಕಲೆಗೆ ಗೌರವ ನೀಡಬೇಕು ಎಂದು ಹೇಳಿದರು. ನಟ ಪುನೀತ್ ರಾಜಕುಮಾರ್ ಅವರ 7 ರಿಂದ 8 ವಿವಿಧ ಮಾದರಿಯ ಮರಳಿ ಕಲಾಕೃತಿಗಳನ್ನು ರಚಿಸಲಾಗುತ್ತಿದ್ದು, ಇದನ್ನು ಸೆಲ್ಫಿ ಸ್ಪಾಟ್ ಮಾಡಲಾಗುವುದು. ಇದುವರೆಗೆ ವಸ್ತು ಪ್ರದರ್ಶನ ಪ್ರಾಧಿಕಾರದ ಒಂದು ವೇದಿಕೆಯಲ್ಲಿ ಮಾತ್ರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿತ್ತು. ಆದರೆ ಈ ಬಾರಿ ಹೆಚ್ಚಿನ ಕಲಾವಿದರಿಗೆ ಅವಕಾಶ ನೀಡಬೇಕು ಎನ್ನುವ ಉದ್ದೇಶದಿಂದ ಎರಡು ವೇದಿಕೆಗಳನ್ನು ನಿರ್ಮಿಸಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಜತೆಗೆ ಕಲಾವಿದರಿಗೆ ಗೌರವ ಧನವನ್ನೂ ನೀಡಲಾಗುವುದು. ವಸ್ತು ಪ್ರದರ್ಶನದಲ್ಲಿ ಮೂಲಸೌಲಭ್ಯ ಕಲ್ಪಿಸುವ ಸಲುವಾಗಿ ಈ ಬಾರಿ 1.8 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ ಎಂದು ತಿಳಿಸಿದರು.

30 ರೂ. ಪ್ರವೇಶ ದರ
ವಸ್ತು ಪ್ರದರ್ಶನ ವೀಕ್ಷಣೆಗೆ ಹಿಂದಿನಂತೆ ಈ ಬಾರಿಯೂ ವಯಸ್ಕರಿಗೆ 30 ರೂ., ಮಕ್ಕಳಿಗೆ 20 ರೂ. ನಿಗದಿ ಪಡಿಸಲಾಗಿದೆ. ವಾಹನ ನಿಲುಗಡೆ ಪ್ರತ್ಯೇಕ ದರ ಇರಲಿದೆ ಎಂದು ಮಿರ್ಲೆ ಶ್ರೀನಿವಾಸಗೌಡ ತಿಳಿಸಿದರು.
ಈ ಬಾರಿಯೂ ಫನ್‌ವರ್ಲ್ಡ್‌ನ ವಿನೋದ್ ಅಗರವಾಲ್ ಅವರಿಗೆ 8.9 ಕೋಟಿ ರೂ. ಗೋಬಲ್ ಟೆಂಡರ್ ಪಡೆದಿದ್ದಾರೆ. ಇವರೊಬ್ಬರು ಮಾತ್ರ ಟೆಂಡರ್‌ನಲ್ಲಿ ಭಾಗವಹಿಸಿದ್ದಲ್ಲದೇ ಕೆಲ ತಾಂತ್ರಿಕ ಸಮಸ್ಯೆಯಿಂದ ಟೆಂಡರ್ ಅಂತಿಮಗೊಳಿಸುವ ಪ್ರಕ್ರಿಯೆ ವಿಳಂಬವಾಗಿತ್ತು ಎಂದು ಹೇಳಿದರು.