ಮೈಸೂರು: ದಸರಾ ಉದ್ಘಾಟಕರು ಈ ಸ್ಥಾನಕ್ಕೆ ಅರ್ಹರೋ ಅಥವಾ ಇಲ್ಲವೋ ಎಂಬ ಚರ್ಚೆ ಮಾಡಲ್ಲ. ನಮ್ಮ ಸಂಪ್ರದಾಯಕ್ಕೆ ಧಕ್ಕೆ ಆಗದಂತೆ ಅವರು ನಡೆದುಕೊಳ್ಳಲಿ ಎಂದು ಕೇಂದ್ರ ಜಲಶಕ್ತಿ, ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಹೇಳಿದರು.
ನಂಬಿಕೆಗೆ, ಭಕ್ತಿಗೆ, ಇತಿಹಾಸಕ್ಕೆ ಮತ್ತೊಂದು ಹೆಸರು ಚಾಮುಂಡಿಬೆಟ್ಟ. ದಸರಾ ಉದ್ಘಾಟಕರಿಗೆ ತಾಯಿ ಚಾಮುಂಡಿಯ ಇತಿಹಾಸ ಉತ್ಸವ, ಆರಾಧನೆ, ಸಂಪ್ರದಾಯವನ್ನು ಮೊದಲು ತಿಳಿಸಿ. ಸಂಪ್ರದಾಯ ಅರಿತು ಅವರು ತಮ್ಮ ಕಾರ್ಯ ಮಾಡಲಿ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸರ್ಕಾರ ಯಾರನ್ನೋ ತೃಪ್ತಿಪಡಿಸಲು ಉದ್ಘಾಟಕರನ್ನು ಆಯ್ಕೆ ಮಾಡಿಕೊಂಡಿದೆಯೋ ಗೊತ್ತಿಲ್ಲ. ಧಾರ್ಮಿಕ ವಿಚಾರದಲ್ಲಿ ಸರ್ಕಾರ ‘ಟೇಕ್ ಇಟ್ ಫಾರ್ ಗ್ರ್ಯಾಂಟೆಡ್’ ಎಂದುಕೊಳ್ಳುವುದು ಬೇಡ. ಉದ್ಘಾಟಕರಿಗೆ, ಸರ್ಕಾರಕ್ಕೆ ಚಾಮುಂಡಿಬೆಟ್ಟದ ಶಿಷ್ಟಾಚಾರ, ಸಂಪ್ರದಾಯ ಪಾಲಿಸುವ ಬುದ್ಧಿ ಕೊಡಲಿ ಎಂದು ಕುಟುಕಿದರು.
ಸುಳ್ಳನ್ನು ಸಾವಿರ ಬಾರಿ ಹೇಳಿದರೂ ಅದು ಸುಳ್ಳೇ ಎಂಬುದು ಧರ್ಮಸ್ಥಳ ವಿಚಾರದಲ್ಲಿ ಸಾಬೀತಾಗಿದೆ. ಕೆಲ ವ್ಯಕ್ತಿಗಳು, ಬಾಲಂಗೋಚಿಗಳು, ಎಡಪಂಥೀಯರ ಮಾತಿಗೆ ಸರ್ಕಾರ ಇನ್ನೂ ಮುಂದಾದರೂ ಬಲಿ ಆಗಬಾರದು. ಸರ್ಕಾರ ತಾನು ಮಾಡಿದ ತಪ್ಪನ್ನು ಈಗಲಾದರೂ ಅರಿತುಕೊಳ್ಳಲಿ ಎಂದು ಹರಿಹಾಯ್ದರು.
ಕಲ್ಯಾಣ ಕರ್ನಾಟಕ, ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ವಿವಿಧೆಡೆ ಪ್ರವಾಹದಿಂದ ಜನರು ತಲ್ಲಣಗೊಂಡಿದ್ದಾರೆ. ರೈತರಿಗೆ ಬೆಳೆ ನಷ್ಟವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡುತ್ತಿಲ್ಲ.
ಅವರ ಬದುಕಿನೊಂದಿಗೆ ಚೆಲ್ಲಾಟವಾಡಲಾಗುತ್ತಿದೆ. ಕ್ಷುಲ್ಲಕ ರಾಜಕಾರಣ ಬಿಟ್ಟು ಅವರ ನೋವಿಗೆ ಕೂಡಲೇ ಸ್ಪಂದಿಸಬೇಕು. ಜಿಲ್ಲಾ ಉಸ್ತುವಾರಿ ಸಚಿವರನ್ನು ತಮ್ಮ ಜಿಲ್ಲೆಗಳಿಗೆ ಕಳಿಸಿ ತ್ವರಿತವಾಗಿ ಕ್ರಮ ಕೈಗೊಳ್ಳಲು ಸಿಎಂ ಕಾರ್ಯೋನ್ಮುಖವಾಗಬೇಕು ಎಂದು ಆಗ್ರಹಿಸಿದರು.
ತುಮಕೂರಿನಿಂದ ಸ್ಪರ್ಧಿಸೋದಿಲ್ಲ ಎಂಬ ತಮ್ಮದೇ ಹೇಳಿಕೆಗೆ ಸ್ಪಷ್ಟನೆ ನೀಡಿದ ಸೋಮಣ್ಣ ಅವರು, ತುಮಕೂರಿನಲ್ಲಿ ಎಲ್ಲ ಕೆಲಸ ಮಾಡಿದ್ದೇನೆ. ಹೀಗಾಗಿ, ಅಲ್ಲಿ ಮುಂದೆ ಚುನಾವಣೆಗೆ ಸ್ಪರ್ಧಿಸೋದಿಲ್ಲ ಎಂದು ಹೇಳಿದ್ದೀನಿ.
ಇನ್ನೂ ಮುಂದೆ ಬೇರೆ ಕಡೆಗೆ ಹೋಗೋಣ ಎಂದುಕೊಂಡಿರುವೆ. ಎಲ್ಲಿ ಎಂಬುದನ್ನು ಇನ್ನೂ ನಿರ್ಧರಿಸಿಲ್ಲ. ದೇವರ ಆಶೀರ್ವಾದ, ದೇವರ ಇಚ್ಛೆ ಏನಿದೆಯೋ ಗೊತ್ತಿಲ್ಲ ಎಂದು ವಿ.ಸೋಮಣ್ಣ ಮಾರ್ಮಿಕವಾಗಿ ಹೇಳಿದರು.