ಶ್ರೀರಂಗಪಟ್ಟಣ: ತಾಲೂಕಿನ ಮುಂಡಗದೊರೆ ಗ್ರಾಮದಲ್ಲಿ ಪರಿಶಿಷ್ಟ ಜಾತಿ ಜನಾಂಗಕ್ಕೆ ಸೇರಿದ ಸರ್ಕಾರಿ ಖರಾಬು ಜಮೀನು ಹಾಗೂ ರಸ್ತೆಯನ್ನು ಅಕ್ರಮವಾಗಿ ದುರಸ್ತು ಮಾಡಿರುವುದನ್ನು ವಜಾ ಮಾಡಿ ಸಮುದಾಯದ ಬಳಕೆಗೆ ಹಸ್ತಾಂತರಿಸಬೇಕು ಎಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಪಟ್ಟಣದ ತಾಲೂಕು ಕಚೇರಿಯ ಮುಂಭಾಗ ಗುರುವಾರ ಮುಂಡುಗದೊರೆ ಗ್ರಾಮದ ಗ್ರಾಮಸ್ಥರೊಂದಿಗೆ ಜಮಾವಣೆಗೊಂಡ ದಸಂಸ ಹೋರಾಟಗಾರರು ತಾಲೂಕು ಆಡಳಿತದ ವಿರುದ್ಧ ಸುಮಾರು 2 ತಾಸು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು.
ಪಾಂಡವಪುರ ಉಪ ವಿಭಾಗದ ಪರಿಶಿಷ್ಟ ಜಾತಿ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯ ಸದಸ್ಯ ಹಾಗೂ ಗ್ರಾಮಸ್ಥ ಮೋಹನ್ ಮಾತನಾಡಿ, ಗ್ರಾಮದ ಸರ್ವೇ ನಂ.351ರಲ್ಲಿನ 1ಎಕರೆ ಭೂಮಿಯು ಸುಮಾರು 30 ವರ್ಷಗಳಿಂದಲೂ ಪರಿಶಿಷ್ಟ ಜಾತಿ ಜನಾಂಗಕ್ಕೆ ಸೇರಿದ ಖರಾಬು ಭೂಮಿ ಮತ್ತು ರಸ್ತೆಯಾಗಿ ಗ್ರಾಮಸ್ಥರಿಗೆ ಬಳಕೆಯಾಗಿದ್ದು, ಕಳೆದ 2009ರಿಂದೀಚೆಗೆ ಈ ಜಮೀನನ್ನು ಗ್ರಾಮಸ್ಥರ ಗಮನಕ್ಕೆ ಬರದಂತೆ ಸರ್ವೇ ನಂ.391ರ ದರ್ಖಾಸ್ತು ಭೂಮಿ ಎಂದು ತಾಲೂಕು ಆಡಳಿತವೇ ಬದಲಾವಣೆ ಮಾಡಿ ದೊಡ್ಡಪಾಳ್ಯ ಗ್ರಾಮದ ಪಟೇಲ್ ರಾಮೇಗೌಡರ ಪುತ್ರ ನಾಗೇಂದ್ರ ಎಂಬುವರಿಗೆ ದುರಸ್ತು ಮಾಡಿಕೊಟ್ಟಿದೆ.
ಇದೀಗ ಆ ಪ್ರಭಾವಿಗಳು ಸರ್ಕಾರಿ ಖರಾಬು ಪ್ರದೇಶವನ್ನು ತಮ್ಮದು ಎಂದು ಸರ್ಕಾರಿ ನಿಯಮದಂತೆ ಹದ್ದುಬಸ್ತು ಆಗುವ ಮುಂಚೆಯೇ ಅಕ್ರಮವಾಗಿ ತಂತಿ ಬೇಲಿ ಹಾಕಿ ಗ್ರಾಮಸ್ಥರಿಗೆ ತೊಂದರೆ ನೀಡಿದ್ದಾರೆ. ಜತೆಗೆ ಮುಂಡುಗದೊರೆ ಗ್ರಾಮದ ಅಂಗನವಾಡಿ ಕಟ್ಟಡ ಸೇರಿದಂತೆ ಬನ್ನೂರು-ಶ್ರೀರಂಗಪಟ್ಟಣ ಹೆದ್ದಾರಿಯಿಂದ ದೊಡ್ಡಪಾಳ್ಯ ಮತ್ತು ಮುಂಡುಗದೊರೆ ಗ್ರಾಮಗಳ ನಡುವಿನ ಮಾರ್ಗವಾಗಿ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸಲು ನಬಾರ್ಡ್ ಯೋಜನೆಯಲ್ಲಿ ನಿರ್ಮಿಸಿದ್ದ ಸರಪಳಿ ಡಾಂಬರ್ ರಸ್ತೆಯನ್ನು ಅಗೆದು ಹಾಕಿದ್ದಾರೆ ಎಂದು ಆರೋಪಿಸಿ ತಕ್ಷಣ ಈ ಅಕ್ರಮ ಮತ್ತು ಆದೇಶವನ್ನು ತಾಲೂಕು ಆಡಳಿತ ವಜಾ ಮಾಡಿ ಗ್ರಾಮಸ್ಥರಿಗೆ ನ್ಯಾಯ ನೀಡಬೇಕು ಆಗ್ರಹಿಸಿದರು.
ಬಳಿಕ ತಹಸೀಲ್ದಾರ್ ಚೇತನಾ ಯಾದವ್ ಅವರಿಗೆ ಮನವಿ ಸಲ್ಲಿಸಿದರು.
ದಸಂಸ ಮುಖಂಡರಾದ ಪಾಂಡು, ಗಂಜಾಂ ರವಿಚಂದ್ರ, ಕುಬೇರ, ಗಂಜಾಂ ಹೊನ್ನಪ್ಪ, ಮಹದೇವಸ್ವಾಮಿ, ಪ್ರಿಯಾ ರಮೇಶ್, ಮುಂಡುಗದೊರೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ನಾಗಮ್ಮ, ಗ್ರಾಮಸ್ಥರಾದ ಮಂಗಳಮ್ಮ, ನಾಗರತ್ನಮ್ಮ, ಕೇಶವಮೂರ್ತಿ, ನವೀನ್ ಕುಮಾರ್, ಶ್ರೀಕಂಠು, ಲೋಕೇಶ್ ಇತರರು ಹಾಜರಿದ್ದರು.