ಹುನಗುಂದ: ಮುಧೋಳ-ಬೀಳಗಿ ತಾಲೂಕಿನ ರೈತ ಮುಖಂಡ, ಸಾಮಾಜಿಕ ಹೋರಾಟಗಾರ ಯಲ್ಲಪ್ಪ ಹೆಗಡೆ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿ ಹುನಗುಂದ ಹೊರವಲಯದ ಸೊಲ್ಲಾಪೂರ -ಹೊಸಪೇಟೆ ಎನ್.ಎಚ್.50ರ ರಾಷ್ಟ್ರೀಯ ಹೆದ್ದಾರಿ ಸಂಚಾರ ತಡೆದು ಹುನಗುಂದ-ಇಳಕಲ್ಲ ತಾಲೂಕಿನ ರೈತ ಸಂಘ ಮತ್ತು ಹಸಿರುಸೇನೆ ಪದಾಧಿಕಾರಿಗಳು ಮಂಗಳವಾರ ಪ್ರತಿಭಟನೆ ನಡೆಸಿದರು.
ರೈತ ಮುಖಂಡ ಅಮರೇಶ ನಾಗೂರ ಮಾತನಾಡಿ, ಸೋಮವಾರ ಬೆಳಗ್ಗೆ ಬೀಳಗಿಯಲ್ಲಿ ಹಮ್ಮಿಕೊಂಡಿದ್ದ ರೈತ ಕಾರ್ಯಕ್ರಮಕ್ಕೆಂದು ವಾಹನದಲ್ಲಿ ಹೋರಾಟಗಾರ ಯಲ್ಲಪ್ಪ ಹೆಗಡೆ ಹೊರಟಿದ್ದಾಗ ಯಡಹಳ್ಳಿ ಗ್ರಾಮದ ಬಳಿ ಅಡ್ಡಗಟ್ಟಿ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದು ಖಂಡನೀಯ. ಕೂಡಲೇ ಹಲ್ಲೆ ಆರೋಪಿಗಳನ್ನು 24 ಗಂಟೆಯಲ್ಲಿ ಪೊಲೀಸ್ ಇಲಾಖೆ ಬಂಧಿಸದಿದ್ದರೆ ರಾಜ್ಯಾದ್ಯಂತ ಹೋರಾಟ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.
ರೈತ ಸಂಘದ ಕಾರ್ಯಾಧ್ಯಕ್ಷ ಗುರು ಗಾಣಿಗೇರ ಮಾತನಾಡಿ, ಯಲ್ಲಪ್ಪ ಹೆಗಡೆಯವರ ಮೇಲೆ ನಡೆಸಿದ ಮಾರಣಾಂತಿಕ ಹಲ್ಲೆಗೆ ಕುಮಕ್ಕು ನೀಡಿದವರನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿದರು.
ರೈತ ಸಂಘದ ಹುನಗುಂದ ತಾಲೂಕು ಅಧ್ಯಕ್ಷ ಬಸನಗೌಡ ಪೈಲ, ಇಲಕಲ್ಲ ತಾಲೂಕು ಅಧ್ಯಕ್ಷ ಮೋಸಿನ್ ನದಾಫ್, ರಾಜು ಬಡಿಗೇರ, ರಸುಲ್‌ಸಾಬ ತಹಸೀಲ್ದಾರ್, ನಾಗರಾಜ ಮಾನಭಾವಿ, ಮಹಾಂತಪ್ಪ ವಾಲೀಕಾರ, ರಾಜಮಹ್ಮದ್ ನದಾಫ್, ಬಸನಗೌಡ ಪಾಟೀಲ, ಮಹಾಂತಪ್ಪ ಐಹೋಳಿ, ರಾಜು ಈಟಿ, ದೊಡ್ಡಬಸವರಾಜ ಕವಡಿಮಠ, ಹುನಗುಂದ ಪಿಎಸ್‌ಐ ಚನ್ನಯ್ಯ ಬೇವೂರ ಇತರರಿದ್ದರು.