1 ಕಳೆದ ವರ್ಷ ಮಳೆಗಾಲದಲ್ಲಿ ಪ್ರವಾಹಬಂದಾಗ ತಾವರಖೇಡ ಗ್ರಾಮ ಜಲಾವೃತ್ತವಾಗಿದ್ದು ಪ್ರವಾಹ ಸಂದರ್ಭದಲ್ಲಿ ಗ್ರಾಮದ ಮನೆಗಳಿಂದ ಗೃಹ ಬಳಕೆಯ ವಸ್ತುಗಳನ್ನು ನೀರಿನಿಂದ ಹೊರ ತರುತ್ತಿರುವ ಗ್ರಾಮಸ್ಥ. (ಸಂಗ್ರಹ ಚಿತ್ರ) 2 ಕಳೆದ ವರ್ಷ ಮಳೆಗಾಲದಲ್ಲಿ ಪ್ರವಾಹ ಬಂದಾಗ ಜಲಾವೃತ್ತವಾಗಿರುವ ತಾವರಖೇಡ ಗ್ರಾಮ.(ಸಂಗ್ರಹ ಚಿತ್ರ) 
ಜಿಲ್ಲೆ

ದಶಕದ ಸಮಸ್ಯೆಗೆ ಪರಿಹಾರ ಇಂದು

ಆಲಮೇಲ: ಮಳೆ ಬಂದರೆ ಕೇಡಲ್ಲ, ಮಗ ಉಂಡರೆ ಕೇಡಲ್ಲ ಎಂಬ ಗಾದೆ ಮಾತಿದೆ. ಆದರೆ, ತಾವರಖೇಡ ಗ್ರಾಮಸ್ಥರಿಗೆ ಮಹಾರಾಷ್ಟ್ರದಲ್ಲಿ ಮಳೆ ಸುರಿದರೆ ಭಯ ಆರಂಭಗೊಳ್ಳುತ್ತಿತ್ತು. ಈ ಗ್ರಾಮಸ್ಥರ ದಶಕದ ಸಮಸ್ಯೆಗೆ ಶಾಶ್ವತ ಪರಿಹಾರ ಇಂದು ದೊರೆಯಲಿದೆ.

ತಾವರಖೇಡ ಗ್ರಾಮ ಭೀಮಾ ನದಿ ಪ್ರವಾಹದಿಂದ ಈ ಗ್ರಾಮ ಜಲಾವೃತಗೊಳ್ಳುತ್ತಿತ್ತು. ಇಲ್ಲಿನ ಜನರು ಪ್ರವಾಹದಿಂದ ಮನೆ, ಆಸ್ತಿ ಪಾಸ್ತಿಗಳನ್ನು ಕಳೆದುಕೊಂಡಿದ್ದರು. ಮಳೆಗಾಲ ಬಂದರೆ ಸಾಕು ಬೆಚ್ಚಿ ಬೀಳುತ್ತಿದ್ದರು. ಯಾವಾಗ ನೆರೆ ಬಂದು ಮನೆ ಮುಳುಗುವುದೋ ಎಂಬ ಭೀತಿಯಲ್ಲಿಯೇ ಕಾಲ ಕಳೆಯುತ್ತಿದ್ದರು. ನೆಮ್ಮದಿಯ ಜೀವನ ನಡೆಸಲು ಸರ್ಕಾರ ನಿವೇಶನ ಯಾವಾಗ ಕೊಡುತ್ತದೆಯೋ ಎಂದು ಕಾಯುತ್ತಿದ್ದರು.

ಗ್ರಾಮಸ್ಥರ ಕನಸು ಇದೀಗ ನನಸಾಗುವ ಕ್ಷಣವು ಬಂದಿದೆ. ಶಾಸಕ ಅಶೋಕ ಮನಗೂಳಿ, ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರ ಮಾರ್ಗದರ್ಶನದಲ್ಲಿ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ, ತಹಸೀಲ್ದಾರ ಸುರೇಶ್ ಚಾವಲರ ನೇತೃತ್ವದಲ್ಲಿ ತಾವರಖೇಡ ಗ್ರಾಮಸ್ಥರೊಂದಿಗೆ ಸತತ ಸಭೆಗಳನ್ನು ನಡೆಸಿ ನೀರಾವರಿ ಇಲಾಖೆ ಮತ್ತು ತಾಲೂಕು ಆಡಳಿತದ ಜತೆಗೆ ಚರ್ಚಿಸಿ ಗ್ರಾಮ ಮುಳುಗಡೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗಿದೆ. ಒಟ್ಟು 648 ನಿವೇಶನಗಳಿಗೆ ಮಂಜೂರಾತಿ ದೊರೆತಿದೆ.

ಆ. 25ರಂದು ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಒಟ್ಟು 429 ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇದು ಗ್ರಾಮಸ್ಥರಿಗೆ ಸಂತಸ ತಂದಿದೆ.

ಕಲಬುರಗಿ ಜಿಲ್ಲೆಯ ಅಪ್ಜಲಪುರ ತಾಲೂಕಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ 2001ರಲ್ಲಿ ಸೊನ್ನದ ಬಳಿಯಲ್ಲಿ ಭೀಮಾನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸಲಾಯಿತು. ಇದರಿಂದ ತಾವರಖೇಡ ಗ್ರಾಮ ಸಂಪೂರ್ಣ ಮುಳಗಡೆಯಾಗಿತ್ತು. ಅಲ್ಲಿಂದ ಗ್ರಾಮ ಸ್ಥಳಾಂತರವಾಗದೆ ಹಾಗೆಯೇ ಉಳಿದುಕೊಂಡಿತ್ತು. ಸ್ಥಳಾಂತರಕ್ಕೆ ನೀರಾವರಿ ಅಧಿಕಾರಿಗಳ ಎಡವಟ್ಟು, ಗ್ರಾಮಸ್ಥರಲ್ಲಿ ಒಮ್ಮತ ಇಲ್ಲದ ಕಾರಣ ಸಮಸ್ಯೆ ಹಾಗೆ ಉಳಿದುಕೊಂಡಿತ್ತು. ವಿಜಯಪುರ ಮತ್ತು ಕಲಬುರಗಿ ಜಿಲ್ಲಾಡಳಿತದ ಮಧ್ಯೆ ಸಂಪರ್ಕದ ಕೊರತೆಯೂ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಇದರಿಂದ 10 ವರ್ಷದಿಂದ ಪ್ರತಿವರ್ಷ ಈ ಗ್ರಾಮ ಜಲಾವೃತವಾಗಿ ಈ ಸಮಸ್ಯೆ ಎದುರಿಸುತ್ತ ಬಂದಿದೆ. ಇದಕ್ಕೆ ಈಗ ಸಚಿವ ಹಾಗೂ ಶಾಸಕರು, ಅಧಿಕಾರಿಗಳು ಪರಿಹಾರ ಒದಗಿಸಲು ಮುಂದಾಗಿರುವುದು ಗ್ರಾಮಸ್ಥರಿಗೆ ಅನುಕೂಲ ಕಲ್ಪಿಸಿದೆ.

ತಾವರಖೇಡ ಗ್ರಾಮದ ಸಮಸ್ಯೆಗೆ ನಾವು ಹಿಂದಿನ ಅಧಿಕಾರಿಗಳಿಂದ ಕೇಳಿದ್ದೇವು. ಇಲ್ಲಿರುವ ಬಹುತೇಕ ಎಲ್ಲ ಮನೆಗಳು ಅಸ್ತಿತ್ವ ಕಳೆದುಕೊಂಡಿವೆ. ಹಿಂದೆ ನಿವೇಶನ ಹಂಚಿಕೆ ಮಾಡುವಲ್ಲಿ ತಾಂತ್ರಿಕ ತೊಂದರೆಯಾಗಿದ್ದರಿಂದ ನಿವೇಶನ ಹಂಚಿಕೆ ವಿಳಂಬವಾಗಿತ್ತು. ಗ್ರಾಮಸ್ಥರಲ್ಲಿ ಒಮ್ಮತದ ಕೊರತೆಯೂ ಇತ್ತು. ಸದ್ಯ ಸಂಬಂಧಿಸಿದ ಅಧಿಕಾರಿಗಳು ಹಾಗೂ ಗ್ರಾಮಸ್ಥರ ಜತೆ ಸಭೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗಿದೆ. ಸ್ಥಳಾಂತರಕ್ಕೆ ಎಲ್ಲರೂ ಒಪ್ಪಿಗೆ ನೀಡಿದ್ದಾರೆ. ಶುಕ್ರವಾರ ಹಕ್ಕುಪತ್ರಗಳನ್ನು ವಿತರಿಸಿ ಮುಳುಗಡೆ ಗ್ರಾಮ ತಾವರಖೇಡಕ್ಕೆ ಶಾಶ್ವತ ಪರಿಹಾರ ಕಲ್ಪಿಸಿಕೊಡುತ್ತೇವೆ.
ಅಬೀದ್ ಗದ್ಯಾಳ, ಉಪವಿಭಾಗಾಧಿಕಾರಿ ಇಂಡಿ
ಕಡಣಿ ಗ್ರಾಪಂ ವ್ಯಾಪ್ತಿಯ ತಾವರಖೇಡ ಗ್ರಾಮಕ್ಕೆ ಮಳೆಗಾಲದಲ್ಲಿ 10 ವರ್ಷದಿಂದ ಸಮಸ್ಯೆ ಆಗುತ್ತಿತ್ತು. ಶಾಸಕ ಅಶೋಕ ಮನಗೂಳಿಯವರ ಪ್ರಯತ್ನದ ಫಲವಾಗಿ ಗ್ರಾಮಸ್ಥರಿಗೆ ಹಕ್ಕುಪತ್ರದ ಜತೆಗೆ ಶಾಶ್ವತ ಪರಿಹಾರ ಒದಗಿಸಲು ಮುಂದಾಗಿರುವ ಸಚಿವ ಡಾ. ಎಂ.ಬಿ. ಪಾಟೀಲ ಹಾಗೂ ಶಾಸಕ ಅಶೋಕ ಮನಗೂಳಿ, ಜಿಲ್ಲಾಡಳಿತ ಹಾಗೂ ತಾಲೂಕಾಡಳಿತಕ್ಕೆ ನಾವು ಕೃತಜ್ಞತೆ ಸಲ್ಲಿಸುತ್ತೇವೆ.
ಬಸಲಿಂಗಪ್ಪ ಕತ್ತಿ, ಅಧ್ಯಕ್ಷರು ಕಡಣಿ ಗ್ರಾಪಂ.