ಜಿಲ್ಲೆ

ದಶಕಗಳ ಸಮಸ್ಯೆಗೆ ಸರ್ಕಾರ ಪರಿಹಾರ ಕಲ್ಪಿಸಲಿ

ಹಾಸನ: ಬೇಲೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿಯೇ ಸುಮಾರು 20 ಸಾವಿರಕ್ಕೂ ಹೆಚ್ಚು ಕುಟುಂಬ ಮೀಸಲು ಅರಣ್ಯ ಹೆಸರಿನಲ್ಲಿ ತೊಂದರೆ ಅನುಭವಿಸುತ್ತಿದ್ದು, ಸರ್ಕಾರ ತಕ್ಷಣವೇ ದಶಕಗಳ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕೆಂದು ಮಾಜಿ ಸಚಿವ ಬಿ.ಶಿವರಾಂ ಆಗ್ರಹಿಸಿದರು.

ಅರಣ್ಯ ಇಲಾಖೆ ಅಧಿಕಾರಿಗಳು ರೈತರ ಜೀವನಾಧಾರವಾಗಿರುವ ಜಮೀನನ್ನು ತಮ್ಮದೆಂದು ಘೋಷಿಸಿಕೊಂಡು, ರಾತ್ರಿ ವೇಳೆ ಜೆಸಿಬಿ ಮೂಲಕ ಕಂದಕ ಅಗೆದು ಗಿಡ ನೆಡುವ ಕಾರ್ಯ ನಡೆಸುತ್ತಿದ್ದಾರೆ. ಇದನ್ನು ಪ್ರಶ್ನಿಸಿದ ರೈತರ ವಿರುದ್ಧವೇ ಪ್ರಕರಣ ದಾಖಲಿಸಲಾಗುತ್ತಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಬೇಲೂರು ತಾಲೂಕಿನ ಅಡವಿ ಬಂಟೇನಹಳ್ಳಿ ಹಾಗೂ ಶಿವಪುರ ಕಾವಲ್ ವ್ಯಾಪ್ತಿಯಲ್ಲಿ ಸಮಸ್ಯೆ ತೀವ್ರವಾಗಿದ್ದು, ರೈತರು ಭಯದ ವಾತಾವರಣದಲ್ಲಿ ಬದುಕುತ್ತಿದ್ದಾರೆ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾದ ಸರ್ಕಾರ ಜಾಣ ಮೌನ ವಹಿಸಿರುವುದು ವಿಷಾದನೀಯ. ಕೆಡಿಪಿ ಸಭೆಗಳಲ್ಲಿ ಜನಪ್ರತಿನಿಧಿಗಳು ಈಗ ಮಾತ್ರ ಮಾತಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ರೈತರ ಭೂಮಿ ಉಳಿಸಿಕೊಳ್ಳುವ ಕಾರ್ಯ ಆಗಲೇಬೇಕು ಎಂದು ಆಗ್ರಹಿಸಿದರು.

ನೂರಾರು ವರ್ಷಗಳಿಂದ ಅಲ್ಲಿ ನೂರಾರು ಕುಟುಂಬ ವಾಸ ಇವೆ. ಈ ಹಿಂದೆ ಕಂದಾಯ ಇಲಾಖೆಯಿಂದ ಎಲ್ಲ ದಾಖಲಾತಿ ಕೂಡ ನೀಡಿದ್ದು, ಇದಕ್ಕೆ ಅರಣ್ಯ ಇಲಾಖೆ ಕೂಡ ಸಮ್ಮತಿ ಸೂಚಿಸಿದೆ. ಆದರೆ ಈಗ ಆ ಜನರನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆಯುತ್ತಿದೆ ಎಂದು ದೂರಿದ ಅವರು, ಇದರಿಂದ ಆ ಜನರು ಭಯಭೀತರಾಗಿದ್ದಾರೆ. ಆದ್ದರಿಂದ ಸರ್ಕಾರ ರಚನೆ ಮಾಡಿರುವ ಸಮಿತಿಯಿಂದ ಅವರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು.