ಚಿಕ್ಕಮಗಳೂರು: ಕೊಪ್ಪ ತಾಲೂಕು ಎಲೆಮಡಲು, ಹೆರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ದಲಿತರು, ಇತರೆ ಹಿಂದುಳಿದವರಿಗೆ ನಿವೇಶನ ನೀಡುವಲ್ಲಿ ಅನ್ಯಾಯ ಮಾಡಲಾಗುತ್ತಿದೆ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಬಾಲಕೃಷ್ಣ ಬಿಳೇಕಲ್ಲು ಆರೋಪಿಸಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆರೂರು ಗ್ರಾಮಪಂಚಾಯಿತಿಗೆ ಸಂಬAಧಿಸಿದ ಸಿಗೋಡು ಸ.ನಂ.೯ರಲ್ಲಿ ಒಂಭತ್ತು ದಲಿತ ಕುಟುಂಬಗಳು ವಾಸ ಮಾಡಲು ಮನೆಯಿಲ್ಲದೆ ಸರ್ಕಾರಿ ಜಾಗದಲ್ಲಿ ಗುಡಿಸಲು ಹಾಕಿಕೊಂಡಿದ್ದರು. ಆಗ ತಹಸೀಲ್ದಾರ್ ಮತು ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳು ಗುಡಿಸಲುಗಳನ್ನು ಕಿತ್ತುಹಾಕಿ ನಿವಾಸಿಗಳ ಮೇಲೆ ಕೇಸು ದಾಖಲಿಸಿದ್ದರು ಎಂದು ಹೇಳಿದರು.
ಮತ್ತೆ ಅದೇ ಪಂಚಾಯಿತಿಯ ಸರ್ವೆನಂಬರ್ ೬ ರಲ್ಲಿ ೪೦ ದಲಿತ ಬಡ ಕುಟುಂಬಗಳು ಪಂಚಾಯಿತಿ ಸದಸ್ಯರೊಬ್ಬರ ಬೆಂಬಲದಲ್ಲಿ ಟೆಂಟ್ ಹಾಕಿ ವಾಸಿಸುತ್ತಿದ್ದರು. ಈಗ ಆ ಗ್ರಾಪಂ ಸದಸ್ಯರು ಸದರಿ ಜಾಗ ೪(೧) ಅಧಿಸೂಚನೆಗೆ ಸೇರಲ್ಪಟ್ಟಿದೆ ಎಂದು ಹೇಳಿ ಅಲ್ಲಿಂದಲೂ ಬಡವರನ್ನು ಒಕ್ಕಲೆಬ್ಬಿಸಿದ್ದಾರೆ. ಆದರೆ ಈಗ ಆ ಜಾಗವನ್ನು ಉಳ್ಳವರು ಕಾಫಿ ತೋಟ ಮಾಡಿಕೊಂಡಿದ್ದಾರೆ. ಬಡವರಿಗೆ ನಿವೇಶನ ನೀಡಲು ೪(೧) ಅಡ್ಡಿಯಾದರೆ ಉಳ್ಳವರು ಕಾಫಿ ತೋಟಮಾಡಲು ಈ ಅಧಿಸೂಚನೆ ಅಡ್ಡಿಯಾಗುವುದಿಲ್ಲವೇ ಎಂದು ಪ್ರಶ್ನಿಸಿದರು.
ಈಗ ಆ ೪೦ ಕುಟುಂಬಗಳು ಸ.ನಂ.೧೭ರಲ್ಲಿ ನೆಲೆ ನಿಂತಿವೆ. ಆ ಜಾಗಕ್ಕೂ ತಹಸಿಲ್ದಾರ್, ಆರ್‌ಎಫ್‌ಓ, ಪಿಡಿಒ ಬಂದು ಈ ಜಾಗವೂ ೪(೧) ಗೆ ಸೇರುತ್ತದೆ ಎಂದು ಅಲ್ಲಿಂದಲೂ ತೆರವುಗೊಳಿಸಿದ್ದಾರೆ ಎಂದು ದೂರಿದರು.
ಹೀಗಾದರೆ ಬಡವರು ವಾಸಿಸುವುದಾದರೂ ಎಲ್ಲಿ ಎಂದು ಪ್ರಶ್ನಿಸಿದರಲ್ಲದೆ, ಕೂಡಲೇ ಕಂದಾಯ ಇಲಾಖೆ ಒತ್ತುವರಿಯಾಗಿರುವ ಸರ್ಕಾರಿ ಜಾಗವನ್ನು ಖುಲ್ಲಾ ಮಾಡಿಸಿ ನಿವೇಶನ ಇಲ್ಲದ ಬಡವರಿಗೆ ನಿವೇಶನ ಹಂಚಿಕೆ ಮಾಡಬೇಕು. ಇಲ್ಲವಾದಲ್ಲಿ ಡಿಎಸ್‌ಎಸ್ ಕಾರ್ಯಕರ್ತರು ನಿವಾಸಿಗಳೊಂದಿಗೆ ಜಿಲ್ಲಾಧಿಕಾರಿ ಕಚೇರಿ ಮುಂದೆ ತೀವ್ರತರದ ಪ್ರತಿಭಟನೆ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಡಿಎಸ್‌ಎಸ್ ಮುಖಂಡರಾದ ಯೋಗೇಶ್ ತುಡುಕೂರು, ಚೇತನ್, ಸತೀಶ್, ರವಿ ಮತ್ತಿತರರು ಉಪಸ್ಥಿತರಿದ್ದರು.