filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (0.33896795, 0.45300013);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 39; 
ಜಿಲ್ಲೆ

ದಲಿತರಿಗೆ ವಂಚಿಸುತ್ತಿರುವ ಸಿಎಂ ಸಿದ್ದರಾಮಯ್ಯ

ಚಿತ್ರದುರ್ಗ: ದಲಿತರ ಶ್ರೇಯೋಭಿವೃದ್ಧಿಗಾಗಿ ಮೀಸಲಿಟ್ಟ ಎಸ್ಸಿಎಸ್ಪಿ-ಟಿಎಸ್ಪಿ ಅನುದಾನ ಪಂಚ ಗ್ಯಾರಂಟಿಗೆ ಬಳಸುತ್ತ ಇಡೀ ಸಮುದಾಯಕ್ಕೆ ಸಿಎಂ ಸಿದ್ದರಾಮಯ್ಯ ವಂಚಿಸುತ್ತಿದ್ದಾರೆ ಎಂದು ಭಾರತ್ ಏಕತಾ ಮಿಷನ್ ಭೀಮ್ ಆರ್ಮಿ ರಾಜ್ಯಾಧ್ಯಕ್ಷ ರಾಜಗೋಪಾಲ್ ಆರೋಪಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೀಸಲಿಟ್ಟ ಅನುದಾನದಲ್ಲಿ ಗ್ಯಾರಂಟಿಗಾಗಿ ಈಗಾಗಲೇ 2023-24ರಲ್ಲಿ 11,144 ಕೋಟಿ ರೂ., 2024-25ರಲ್ಲಿ 14,282 ಕೋಟಿ ರೂ. ಖರ್ಚಾಗಿದೆ. 2025-26ನೇ ಸಾಲಿನಲ್ಲಿ 13,433 ಕೋಟಿ ರೂ. ಬಳಸುವುದಾಗಿ ಸಿಎಂ ತಿಳಿಸಿದ್ದಾರೆ. ಇದೇನಾ ಸಿದ್ದರಾಮಯ್ಯ ಅವರ ದಲಿತ ಪರ ಕಾಳಜಿ ಎಂದು ಕಿಡಿಕಾರಿದರು.

ರಾಜ್ಯದಲ್ಲಿ ನಿರಂತರವಾಗಿ ದಲಿತರನ್ನು ಯಾಮಾರಿಸುವ ಕೆಲಸ ನಡೆಯುತ್ತಿದ್ದು, ಗಂಗಾ ಕಲ್ಯಾಣ ಯೋಜನೆಯಡಿ 2 ವರ್ಷಗಳಿಂದ ಕಾಂಗ್ರೆಸ್ ಸರ್ಕಾರ ಒಂದೂ ಕೊಳವೆಬಾವಿ ಕೊರೆಸಿಲ್ಲ. ವಾಹನ (ಕಾರ್) ಸಾಲ ನೀಡಿಲ್ಲ. ಪ್ರಶ್ನಿಸಲು ಎಂಎಲ್‌ಎಗಳೇ ಕೈಗೆ ಸಿಗುತ್ತಿಲ್ಲ. ಕಾಲಂ ‘ಸಿ’ ಮೂಲಕ ಎಸ್ಸಿಎಸ್ಪಿ-ಟಿಎಸ್ಪಿ ಹಣ ದೋಚುತ್ತಿರುವುದು ನಿಲ್ಲುವವರೆಗೂ ಹೋರಾಟ ಮುಂದುವರಿಸುತ್ತೇವೆ ಎಂದು ಎಚ್ಚರಿಸಿದರು.

ದಲಿತ ಸೇನೆ ರಾಮವಿಲಾಸ್ ರಾಜ್ಯಾಧ್ಯಕ್ಷ ಎಂ.ಎಸ್.ಜಗನ್ನಾಥ್ ಮಾತನಾಡಿ, ಈ ಹಿಂದೆ ಕಾಯ್ದೆ 70 ಬಳಸಿಕೊಂಡು ದಲಿತರ ಹಣ ದೋಚಲಾಗುತ್ತಿತ್ತು. ಬಲವಾಗಿ ಪ್ರಶ್ನಿಸಿದ್ದಕ್ಕೆ ಮೂರು ತಿಂಗಳ ಹಿಂದೆ ಇದನ್ನು ರದ್ದುಪಡಿಸಿರುವ ರಾಜ್ಯ ಸರ್ಕಾರ ಅನ್ಯ ಮಾರ್ಗದಲ್ಲಿ ಅನುದಾನಕ್ಕೆ ಕೈಹಾಕಿದೆ ಎಂದು ದೂರಿದರು.

ಈಗಲೂ ಸಮುದಾಯ ಅಭಿವೃದ್ಧಿಯಾಗಿಲ್ಲ. ಗುಡಿಸಲು ಮುಕ್ತ ರಾಜ್ಯ ನಿರ್ಮಾಣವಾಗಿಲ್ಲ. ತಾಡಪಾಲು ಬಳಸಿಕೊಂಡು ಅಲೆಮಾರಿಗಳಂತೆ ಹಲವರು ಬದುಕುತ್ತಿದ್ದಾರೆ. ಶೇ 24ರಷ್ಟಿರುವ ದಲಿತರ ಅನುದಾನವನ್ನು ಇನ್ನುಳಿದ ಶೇ 76 ಮಂದಿಗೆ ಗ್ಯಾರಂಟಿಗಾಗಿ ಬಳಸುವುದು ಯಾವ ನ್ಯಾಯ ಎಂದು ಪ್ರಶ್ನಿಸಿದ ಅವರು, ದಲಿತರ ಪರ ಎಂಬುದಾಗಿ ಹೇಳುವ ಸಿಎಂ ಸಿದ್ದರಾಮಯ್ಯ ಅವರಿಗೆ ಕಾಳಜಿ ಇದ್ದರೆ, ಮೀಸಲಿಟ್ಟ ಅನುದಾನಕ್ಕೆ ಕೈ ಹಾಕಬಾರದು ಎಂದು ಒತ್ತಾಯಿಸಿದರು.

ಮೀಸಲಾತಿ ಅಗತ್ಯವಿಲ್ಲ: ದಲಿತರ ಏಳಿಗೆಗಾಗಿ ಮೀಸಲಿಟ್ಟ ಅನುದಾನ ಶೇ 100ರಷ್ಟನ್ನೂ ಸಮುದಾಯದ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಪ್ರಗತಿಗೆ ಬಳಸಿದರೆ, ಮೀಸಲಾತಿ ಅಗತ್ಯವಿಲ್ಲ. ಆದರೆ, ಆ ಕೆಲಸ ಯಾವ ಸರ್ಕಾರವೂ ರಾಜ್ಯದಲ್ಲಿ ಮಾಡುತ್ತಿಲ್ಲ ಎಂದು ಜಗನ್ನಾಥ್ ಕಳವಳ ವ್ಯಕ್ತಪಡಿಸಿದರು.

ಸಂಘಟನೆಗಳ ಪದಾಧಿಕಾರಿಗಳಾದ ಅವಿನಾಶ್, ಸಿದ್ಧರಾಜು ಗೋಳೂರು, ಕುಮಾರ್ ಇತರರಿದ್ದರು.