ಚಿಕ್ಕಮಗಳೂರು ಡಿಸಿ ಮೀನಾ ನಾಗರಾಜ್ ಅವರಿಗೆ ಮನವಿ ಸಲ್ಲಿಸಿದ ಡಿಎಸ್‌ಎಸ್ ಕಾರ್ಯಕರ್ತರು ದಲಿತ ಸಮುದಾಯಕ್ಕೆ ಮೀಸಲಿರಿಸಿರುವ ಜಾಗವನ್ನು ಪ್ರವಾಸೋದ್ಯಮ ಇಲಾಖೆಗೆ ಮಂಜೂರು ಮಾಡಬಾರದು ಎಂದು ಒತ್ತಾಯಿಸಿದರು. ತರೀಕೆರೆ ಎನ್.ವೆಂಕಟೇಶ್, ಎಂ.ಡಿ.ಭವಾನಿ, ರಾಜೇಶ್, ಅಬ್ದುಲ್ ರೆಹಮಾನ್, ರಾಜು ಮತ್ತಿತರರಿದ್ದರು. 
ಜಿಲ್ಲೆ

ದಲಿತರಿಗೆ ಮೀಸಲಿರುವ ಜಾಗ ಪ್ರವಾಸೋದ್ಯಮ ಇಲಾಖೆಗೆ ಮಂಜೂರು ಮಾಡಬಾರದು

ಚಿಕ್ಕಮಗಳೂರು: ದಲಿತ ಸಮುದಾಯಕ್ಕೆ ಮೀಸಲಿರಿಸಿರುವ ಜಾಗವನ್ನು ಪ್ರವಾಸೋದ್ಯಮ ಇಲಾಖೆಗೆ ಮಂಜೂರು ಮಾಡಬಾರದು ಎಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಮುಖಂಡರು ಗುರುವಾರ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಡಿಎಸ್‌ಎಸ್ ರಾಜ್ಯ ಸಂಘಟನಾ ಸಂಚಾಲಕ ತರೀಕೆರೆ ಎನ್.ವೆಂಕಟೇಶ್, ಎನ್.ಆರ್.ಪುರ ತಾಲೂಕಿನ ರಾವೂರು ಗ್ರಾಮದ ಸರ್ವೆ ನಂ.೧೫೭, ೧೫೮ ಮತ್ತು ೧೫೯ರಲ್ಲಿ ದಲಿತರ ಸಮುದಾಯಕ್ಕಾಗಿ ಹಿಂದಿನ ಜಿಲ್ಲಾಧಿಕಾರಿಗಳು ೨೦೧೦-೧೧ನೇ ಸಾಲಿನಲ್ಲಿ ಜಮೀನು ಮಂಜೂರಾತಿಗಾಗಿ ಸರ್ವೆ ಕಾರ್ಯ ನಡೆಸಿದ್ದಾರೆ. ಹೀಗಾಗಿ ಈ ಜಾಗ ಕಾಯ್ದಿರಿಸಲು ಹಿಂದೆಯು ಅರ್ಜಿ ಸಲ್ಲಿಸಲಾಗಿದೆ ಎಂದರು.

ಇದೀಗ ಮೀಸಲಿರಿಸಿರುವ ಜಾಗವನ್ನು ಪ್ರವಾಸೋದ್ಯಮ ಇಲಾಖೆಗೆ ಮಂಜೂರಾತಿ ಮಾಡಲು ಜಿಲ್ಲಾಡಳಿತ ಮುಂದಾಗಿದೆ. ಅಲ್ಲದೇ ತಹಸೀಲ್ದಾರ್‌ರಿಂದ ಉಪವಿಭಾಗಾಧಿಕಾರಿಗೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂಬುದು ತಿಳಿದು ಬಂದಿದೆ ಎಂದು ಹೇಳಿದರು.

ಈ ಪ್ರದೇಶವು ಭದ್ರ ಅಭಯಾರಣ್ಯಕ್ಕೆ ಅತೀ ಸಮೀಪವಾಗಿದೆ. ವನ್ಯಜೀವಿಗಳ ಹಾವಳಿ ಈ ಭಾಗದಲ್ಲಿ ಹೆಚ್ಚಾಗಿದೆ. ಪ್ರವಾಸೋದ್ಯಮ ಇಲಾಖೆಯಿಂದ ಇಲ್ಲಿ ರೆಸಾರ್ಟ್ ನಿರ್ಮಾಣ ಮಾಡಿ ಜನ ಮೋಜು ಮಸ್ತಿಗೆ ಮುಂದಾದರೆ ವನ್ಯ ಜೀವಿಗಳ ಸ್ವಚ್ಛಂದ ಓಡಾಟಕ್ಕೆ ತೊಂದರೆ ಯಾಗಲಿದೆ ಎಂದು ಹೇಳಿದರು.

ಈ ಜಾಗವು ಎನ್.ಆರ್.ಪುರ ಪಟ್ಟಣಕ್ಕೆ ಸಮೀಪವಿದಲ್ಲಿರುವ ಕಾರಣ ಗ್ರಾಪಂ ವ್ಯಾಪ್ತಿಯಲ್ಲಿನ ನಿವೇಶನ ರಹಿತರಿಗೆ ನಿವೇಶನ ನೀಡಲು ಜನಪ್ರತಿನಿಧಿಗಳು ವಿಚಾರಿಸಿದರೆ ಅಧಿಕಾರಿಗಳು ಸ್ಥಳವಿಲ್ಲ ಎನ್ನುತ್ತಾರೆ. ಆದರೆ ಮೋಜು ಮಸ್ತಿಗಾಗಿ ಪ್ರವಾಸೋದ್ಯಮಕ್ಕೆ ಈ ಜಾಗ ಮಂಜೂರಾತಿ ಮಾಡಲು ಮುಂದಾಗುತ್ತಾರೆ. ಈ ಮೂಲಕ ಬಡವರು, ದಲಿತರು ಹಾಗೂ ನಿವೇಶನ ರಹಿತರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ದೂರಿದರು.

ದಲಿತ ಸಮುದಾಯಕ್ಕೆ ಮೀಸಲಿರಿಸಿರುವ ಜಾಗವನ್ನು ಪ್ರವಾಸೋದ್ಯಮಕ್ಕೆ ಮಂಜೂರುಗೊಳಿಸದೇ ಅರ್ಹ ಫಲಾನುಭವಿಗಳಿಗೆ ವಿತರಿಸಬೇಕು. ರಾಜಕೀಯ ಒತ್ತಡಕ್ಕೆ ಮಣಿದು ಅಧಿಕಾರಿಗಳು ಪ್ರವಾಸೋದ್ಯಮಕ್ಕಾಗಿ ಜಾಗವನ್ನು ಮಂಜೂರು ಮಾಡಿದರೆ ಡಿಎಸ್‌ಎಸ್ ಉಗ್ರ ಮತ್ತು ಕಾನೂನಾತ್ಮಕವಾಗಿ ಹೋರಾಟ ಮಾಡಲಿದೆ ಎಂದು ಎಚ್ಚರಿಸಿದರು.

ಮನವಿ ಸಲ್ಲಿಸುವ ಸಂದರ್ಭದಲ್ಲಿ ಡಿಎಸ್‌ಎಸ್ ರಾಜ್ಯ ಮಹಿಳಾ ಸಂಘಟನಾ ಸಂಚಾಲಕಿ ಎಂ.ಡಿ.ಭವಾನಿ, ಜಿಲ್ಲಾ ಸಂಘಟನಾ ಸಂಚಾಲಕರಾದ ರಾಜೇಶ್, ಅಬ್ದಲ್ ರೆಹಮಾನ್, ತಾಲೂಕು ಸಂಘಟನಾ ಸಂಚಾಲಕ ರಾಜು ಉಪಸ್ಥಿತರಿದ್ದರು.