ಜಿಲ್ಲೆ

ದಲಿತರಿಗೆ ಮೀಸಲಿಟ್ಟ ಅನುದಾನ ಗ್ಯಾರಂಟಿಗಳಿಗೆ ಬಳಕೆ

ಶಾಸಕ ಎಂ.ಟಿ.ಕೃಷ್ಣಪ್ಪ ಆರೋಪ ಧ್ವನಿ ಎತ್ತದ ಮಂತ್ರಿಗಳ ನಡೆಗೆ ಆಕ್ಷೇಪ

ತುರುವೇಕೆರೆ: ದಲಿತರ ಅಭಿವೃದ್ಧಿಗೆ ಮೀಸಲಿಟ್ಟ 44 ಸಾವಿರ ಕೋಟಿಯನ್ನು ಸರ್ಕಾರ ಗ್ಯಾರಂಟಿಗೆ ಬಳಸಿಕೊಂಡರೂ ದಲಿತ ಸಮುದಾಯದ ಮಂತ್ರಿಗಳಿಗೆ ವಿರೋಧಿಸುವ ಧೈರ್ಯ ಇಲ್ಲವಾಗಿದೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಟೀಕಿಸಿದರು. ಪಟ್ಟಣದ ಸತ್ಯಗಣಪತಿ ಆಸ್ಥಾನ ಮಂಟಪದಲ್ಲಿ ತಾಲೂಕು ಆಡಳಿತ, ತಾಪಂ, ಸಮಾಜ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಅಂಬೇಡ್ಕರ್​ ಹಾಗೂ ಬಾಬು ಜಗಜೀವನರಾಮ್​ ಜಯಂತಿಯಲ್ಲಿ ಮಾತನಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ರೂಲ್​ 7 ಕಾನೂನು ತಿದ್ದುಪಡಿ ಮಾಡಿದರೂ ಸಂಪುಟದಲ್ಲಿ ಇದನ್ನು ಬದಲಾವಣೆ ಮಾಡದಂತೆ ದಲಿತ ಮಂತ್ರಿಗಳು ತಡೆದಿಲ್ಲ. ಮುಖ್ಯಮಂತ್ರಿಗಳನ್ನು ಕಂಡರೆ ಭಯವೇ ಎಂದು ಪ್ರಶ್ನಿಸಿದರು. ಪರಿಶಿಷ್ಟ ಜಾತಿ, ಪಂಗಡಗಳ ಅಭಿವೃದ್ಧಿಗೆ ಮೀಸಲಿಟ್ಟ ಹಣ ತೆಗೆದುಕೊಂಡು ಗ್ಯಾರಂಟಿಗೆ ನೀಡುತ್ತಿದ್ದು, ಈ ಸರ್ಕಾರ ದಲಿತರಿಗೆ ಅನ್ಯಾಯ ಮಾಡಿದೆ. ಆದರೂ ದಲಿತರ ಹೆಸರು ಹೇಳಿಕೊಂಡು ರಾಜಕೀಯ ಮಾಡುತ್ತಾರೆ ಎಂದು ಆರೋಪಿಸಿದರು.

ಡಾ.ಅಂಬೇಡ್ಕರ್​ ರಚಿಸಿದ ಸಂವಿಧಾನ ಎಸ್​ಸಿ, ಎಸ್​ಟಿಗಳಿಗಷ್ಟೇ ಮೀಸಲಾಗಿಲ್ಲ. ಭಾರತೀಯರಾದ ಎಲ್ಲರಿಗೂ ಉಪಯೋಗವಾಗಿದೆ. ಎಲ್ಲ ದಲಿತರು ನಮ್ಮ ಸಮಾಜ ಎಂಬ ಭಾವನೆ ಬೆಳೆಸಿಕೊಂಡು ಎಲ್ಲರನ್ನೂ ಒಗ್ಗೂಡಿಕೊಂಡು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಬೇಕು ಎಂದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸದಸ್ಯರು ಹಾಗೂ ವಿಮರ್ಶಕ ಡಾ.ರವಿಕುಮಾರ್​ ನೀಹ ಮಾತನಾಡಿ, ಬಸವಣ್ಣ, ಬುದ್ಧ, ಆಂಬೇಡ್ಕರ್​ ಹುಟ್ಟಿದ ಈ ದೇಶಲ್ಲಿ ಇಂದಿಗೂ ಜಾತಿ ಪದ್ಧತಿ, ತಾರತಮ್ಯ ಮಹಿಳಾ ಶೋಷಣೆಗಳು ನಡೆಯುತ್ತಿದೆ ಎಂದು ಬೇಸರಿಸಿದರು.

ತಹಸೀಲ್ದಾರ್​ ಎನ್​.ಎ.ಕುಂ.ಇ.ಅಹಮದ್​ ಮಾತನಾಡಿ, ಅಂಬೇಡ್ಕರ್​ ಸಂವಿಧಾನ ಶಿಲ್ಪಿ ಮಾತ್ರವಲ್ಲ ಉತ್ತಮ ಅರ್ಥಶಾಸ್ತ್ರಜ್ಞರಾಗಿ, ಕೈಗಾರಿಕಾ ತಜ್ಞರಾಗಿ ಶಿಕ್ಷಣ, ಹೆಣ್ಣು ಮಕ್ಕಳ ಸಬಲೀಕರಣಕ್ಕೆ ಶ್ರಮಿಸಿದವರು. ಎಲ್ಲರಿಗೂ ಮತದಾನದ ಹಕ್ಕು ನೀಡಿದ ಮಹಾನ್​ ಮಾನವತಾವಾದಿ ಎಂದರು. ಕಾರ್ಯಕ್ರಮಕ್ಕೂ ಮುನ್ನ ತಾಲೂಕು ಕಚೇರಿಯಿಂದ ಸತ್ಯಗಣಪತಿ ಆಸ್ಥಾನ ಮಂಟಪದವರೆಗೂ ಅಂಬೇಡ್ಕರ್​ ಹಾಗೂ ಬಾಬು ಜಗಜೀವನರಾಮ್​ ಭಾವಚಿತ್ರ ಮೆರವಣೆಗೆ ಮಾಡಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಶ್ರೀಧರಮೂರ್ತಿ, ಪಪಂ ಮುಖ್ಯಾಧಿಕಾರಿ ಶ್ರೀನಾಥ್​ಬಾಬು, ಶಿಕ್ಷಕ ಲೋಕೇಶ್​ ದಲಿತ ಮುಖಂಡರಾದ ವಿ.ಟಿ.ವೆಂಕಟರಾಮಯ್ಯ, ಡೊಂಕಿಹಳ್ಳಿರಾಮಣ್ಣ, ರಂಗದಾಮಯ್ಯ, ಡಾ.ಚಂದ್ರಯ್ಯ, ಕುಮಾರ್​, ಮೂರ್ತಿ ಇದ್ದರು.