ಚಿಕ್ಕಮಗಳೂರಿನ ಜಿಲ್ಲಾಧಿಕಾರಿ ಕಚೇರಿ ಶಿರಸ್ತೇದಾರ್ ಹೇಮಂತ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದ ಡಿಎಸ್‌ಎಸ್ ಮುಖಂಡರು ಮೂಲನಿವಾಸಿ ದಲಿತ ಸಮುದಾಯಕ್ಕೆ ನಿವೇಶನ, ಸ್ಮಶಾನ ಹಾಗೂ ಸಮುದಾಯ ಭವನಕ್ಕೆ ಜಾಗವನ್ನು ಕಾಯ್ದಿರಿಸಬೇಕು ಎಂದು ಒತ್ತಾಯಿಸಿದರು. ಪಿ.ಟಿ.ಚಂದ್ರಶೇಖರ್, ಅಶೋಕ್ ರಾಜರತ್ನಂ, ಹೂವಯ್ಯ, ಮಂಜುನಾಥ, ನಂದೀಶ್, ಅಶೋಕ್ ಮತ್ತಿತರರಿದ್ದರು. 
ಜಿಲ್ಲೆ

ದಲಿತರಿಗೆ ಜಾಗ ಕಾಯ್ದಿರಿಸಲು ಜಿಲ್ಲಾಡಳಿತಕ್ಕೆ ಡಿಎಸ್‌ಎಸ್ ಮನವಿ

ಚಿಕ್ಕಮಗಳೂರು: ಮೂಲನಿವಾಸಿ ದಲಿತ ಸಮುದಾಯಕ್ಕೆ ನಿವೇಶನ, ಸ್ಮಶಾನ ಹಾಗೂ ಸಮುದಾಯ ಭವನಕ್ಕೆ ಜಾಗವನ್ನು ಕಾಯ್ದಿರಿಸಬೇಕು ಎಂದು ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಶಿರಸ್ತೇದಾರ್ ಹೇಮಂತ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಪಿ.ಟಿ.ಚಂದ್ರಶೇಖರ್, ಕಳಸ ತಾಲೂಕಿನ ಮಾವಿನಕೆರೆ ಗ್ರಾಮದಲ್ಲಿ ಒಟ್ಟು ೩೦ ಎಕರೆ ಗೋಮಾಳದಲ್ಲಿ ೧೦ ಎಕರೆ ಜಾಗವನ್ನು ನಿವೇಶನ ರಹಿತರಿಗೆ ಸೂರು ನಿರ್ಮಿಸಿಕೊಳ್ಳಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು.

ಕಳಸದ ಖಾಸಗಿ ವ್ಯಕ್ತಿಯೊಬ್ಬರು ಸಮುದಾಯಕ್ಕೆ ಮೀಸಲಿರಿಸಿದ್ದ ಜಾಗವನ್ನು ಅದು ದಲಿತ ಜನಾಂಗದ್ದಲ್ಲ ಎಂದು ಹೇಳಿ ಚೌಂಡರಿಯನ್ನು ಕಿತ್ತು ಹಾಕಿದ್ದಾರೆ. ಅಲ್ಲದೇ ಅರಣ್ಯ ಇಲಾಖೆ ಅಧಿಕಾರಿಗಳನ್ನು ಮುಂದಿರಿಸಿಕೊAಡು ನಿವೇಶನಕ್ಕೆ ಬೇಲಿ ಹಾಕದಂತೆ ತೊಂದರೆ ನೀಡುತ್ತಿದ್ದಾರೆ ಎಂದು ದೂರಿದರು.

ಈ ಸಂಬAಧ ಅರಣ್ಯ ಇಲಾಖೆಗೆ ವಿಚಾರಿಸಿದರೆ ಜಾಗವು ಇಲಾಖೆಗೆ ಸಂಬAಧಿಸಿದೆ. ನೀವು ಮೂಲ ದಲಿತರು ಎಂಬುದಕ್ಕೆ ಸಾಕ್ಷಿ ತೋರಿಸಿ ಎಂದು ಉಡಾಫೆ ಉತ್ತರ ನೀಡುತ್ತಿದ್ದಾರೆ. ಇದನ್ನು ಮೀರಿ ಮುನ್ನೆಡೆದರೆ ಪ್ರಕರಣ ದಾಖಲು ಮಾಡಲಾಗುವುದು ಎಂದು ಬೆದರಿಕೆವೊಡ್ಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೊಪ್ಪ ತಾಲೂಕಿನ ಕೆಳಕುಳಿ ಗ್ರಾಮದ ಸಣ್ಣಪ್ಪ ಮತ್ತು ಜ್ಯೋತಿ ಎಂಬುವವರಿಗೆ ತಲಾ ೨ ಎಕರೆ ಜಾಗ ಮಂಜೂರಾಗಿ ಅನೇಕ ವರ್ಷಗಳಿಂದ ಬೆಳೆ ಬೆಳೆಯುತ್ತಿದ್ದಾರೆ. ಆದರೆ ಈಗ ಅರಣ್ಯ ಇಲಾಖೆ ಏಕಾಏಕಿ ಧಾವಿಸಿ ಜೆಸಿಬಿಯಿಂದ ಜಮೀನಿಗೆ ತೊಟ್ಟಿಲು ಗುಂಡಿಗಳನ್ನು ಹೊಡೆಸಿದ್ದಾರೆ. ವಿಚಾರಿಸಿದರೆ ಈ ಜಮೀನು ಸರ್ಕಾರಿ ಜಾಗವಾಗಿದ್ದು, ಈ ಬಗ್ಗೆ ತಹಸೀಲ್ದಾರ್ ಬಳಿ ವಿಚಾರಿಸಿಕೊಳ್ಳಿ ಎನ್ನುತ್ತಿದ್ದಾರೆ ಎಂದು ದೂರಿದರು.

ಹೀಗಾಗಿ ಕೂಡಲೇ ಕೆಳಕುಳಿ ಗ್ರಾಮದಲ್ಲಿ ಜಮೀನನ್ನು ಸ್ಥಳ ಪರಿಶೀಲಿಸಿ, ಮತ್ತೊಮ್ಮೆ ಸರ್ವೆ ನಡೆಸಿ ಚಕ್ಕುಬಂದಿ ಗುರುತಿಸಿ ನೊಂದ ಕುಟುಂಬಗಳಿಗೆ ಪಕ್ಕಾಪೋಡಿ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಮನವಿ ಸಲ್ಲಿಸುವ ಸಂದರ್ಭದಲ್ಲಿ ಡಿಎಸ್‌ಎಸ್ ಸಹ ಸಂಚಾಲಕ ಅಶೋಕ್ ರಾಜರತ್ನಂ, ಕಳಸ ವಿಭಾಗ ಸಂಚಾಲಕ ಹೂವಯ್ಯ, ಮುಖಂಡರಾದ ಮಂಜುನಾಥ್, ನಂದೀಶ್, ಅಶೋಕ್ ಮತ್ತಿತರರಿದ್ದರು.