ಜಿಲ್ಲೆ

ದಲಿತರಿಗೆ ಕಾಂಗ್ರೆಸ್ ಯಾವತ್ತೂ ಡೇಂಜರ್

ಚಿತ್ರದುರ್ಗ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಆರೋಪಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಿವೃತ್ತ ಡಿಜಿಪಿ ಓಂ ಪ್ರಕಾಶ್ ಕೊಲೆ ಕುರಿತಂತೆ ಉನ್ನತ ಮಟ್ಟದ ತನಿಖೆಯಾಗಲಿ ಎಂದರು.

ಕಾನೂನು ಸುವ್ಯವಸ್ಥೆ ಕುರಿತಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಅವರು, ಪರಶುರಾಮ ಛಲವಾದಿ ಪ್ರಕರಣದಲ್ಲಿ ಎಫ್‌ಐಆರ್ ಹಾಗೂ ಅಟ್ರಾಸಿಟಿ ಕೇಸ್ ದಾಖಲಾಗಿದ್ದರೂ ಶಾಸಕ ಚನ್ನಾರೆಡ್ಡಿ, ಅವರ ಪುತ್ರನನ್ನು ಬಂಧಿಸಿ ತನಿಖೆ ನಡೆ ಸಲಿಲ್ಲ. ಈಗ ಬಿ ರಿಪೋರ್ಟ್ ಹಾಕಲಾಗಿದೆ. ಇನ್ನೂ ಕೆಲವು ಸರ್ಕಾರಿ ನೌಕರರ ಸಾವಿನ ಪ್ರಕರಣಗಳನ್ನೂ ಮುಚ್ಚಿಹಾಕಲಾಗುತ್ತಿದೆ. ಬಿಜೆಪಿ ಕಾರ‌್ಯಕರ್ತ ವಿನಯ್ ತಿಮ್ಮಯ್ಯ ಆತ್ಮಹತ್ಯೆ ಪ್ರಕರಣದ ಆರೋಪಿ ಇದುವರೆಗೂ ಬಂಧನವಾಗಿಲ್ಲ ಎಂದರು.

ಮೂರನೇ ಹಂತದ ಬಿಜೆಪಿ ಜನಾಕ್ರೋಶ ಯಾತ್ರೆ ದಾವಣಗೆರೆಯಿಂದ ಪ್ರಾರಂಭವಾಗಿದೆ. ಹಾವೇರಿ, ಗದಗ, ಕೊಪ್ಪಳ, ಯಾದಗಿರಿ, ರಾಯಚೂರು, ಬಳ್ಳಾರಿ, ಹೊಸಪೇಟೆ ಹಾಗೂ ಏ.25ರಂದು ಚಿತ್ರದುರ್ಗ, ತುಮಕೂರಿನ ಯಾತ್ರೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜ ಯೇಂದ್ರ, ಪ್ರತಿಪಕ್ಷ ನಾಯಕರು, ಪ್ರಮುಖರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಕಾಂತರಾಜ್ ಜಾತಿ ಜನ ಗಣತಿ ಮೂಲ ವರದಿ ಎಲ್ಲಿ? ಪರಿಶಿಷ್ಟ ಜಾತಿ 101 ಜಾತಿಗಳ ಬದಲು 182 ಜಾತಿಗಳನ್ನಾಗಿ ಒಡೆದು, ಮತ ಬ್ಯಾಂಕ್‌ಗಾಗಿ ಕಾಂಗ್ರೆಸ್, ದೇಶ ಹಾಳು ಮಾಡಲು ಹೊರಟಿದೆ. ಜನಸಂಖ್ಯೆಯಲ್ಲಿ ನಂ.1 ಎಂದು ಅಲ್ಪಸಂಖ್ಯಾತರನ್ನು ಬಹುಸಂಖ್ಯಾತರನ್ನಾಗಿ ಎಂದು ತೋರಿಸಿ ಅವರ ಸವಲತ್ತು ಕಸಿದುಕೊಳ್ಳುತ್ತಿದೆ. ಧರ್ಮ ಆಧರಿಸಿದ ಮೀಸಲಿಗೆ ಸಂವಿಧಾನದಲ್ಲಿ ಅವ ಕಾಶವಿಲ್ಲ ಎಂದರು.

ಎಸ್‌ಸಿಎಸ್‌ಪಿ, ಟಿಎಸ್‌ಪಿಯ 42 ಸಾವಿರ ಕೋಟಿ ರೂ.ಅನುದಾನದಲ್ಲಿ ಪರಿಶಿಷ್ಟರಿಗೆ ಸಿಗುವುದು 7 ಸಾವಿರ ಕೋಟಿ ರೂ., ಸಿದ್ದರಾಮಯ್ಯ ಸರ್ಕಾರ ದಲಿತರನ್ನು ನೇರವಾಗಿ ವಂಚಿಸುತ್ತಿದೆ. ರೋಹಿತ್ ವೇಮುಲ ಕಾಯ್ದೆ ಮಾತನಾಡುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕಂಬಾಲಪಲ್ಲಿ ಆ್ಯಕ್ಟ್ ಬಗ್ಗೆಯೂ ಮಾತನಾಡಬೇಕು. ಇಲ್ಲಿ ಏಳು ಜನ ದಲಿತರ ಸಜೀವ ದಹನವಾಗಿ 25 ವರ್ಷಗಳಾಗಿದ್ದು, ನೋಂದವರಿಗೆ ನ್ಯಾಯ ಸಿಗುವುದು ಯಾವಾಗ? ಎಂದರು.

ಕಾಂಗ್ರೆಸ್ ಯಾವತ್ತೂ ದಲಿತರ ಪಾಲಿಗೆ ಡೇಂಜರ್. ಕಾಂಗ್ರೆಸ್‌ನ ದಲಿತ ನಾಯಕರು, ತಮ್ಮ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯಗಳ ಬಗ್ಗೆ ಬಾಯಿ ಬಿಡುವುದಿಲ್ಲ. ಅಂಬೇಡ್ಕರ್ ಸಂವಿಧಾನ ರಚಿಸಿದ್ದಾರೆ ಎಂಬುದು ಪ್ರಪಂಚಕ್ಕೆ ಗೊತ್ತಿದೆ. ಆದರೆ ಈ ಪರಿಜ್ಞಾನ ರಾಹುಲ್ ಗಾಂಧಿಗೆ ಇಲ್ಲ. ದಲಿತರ ಮೇಲಾಗುತ್ತಿರುವ ದೌರ್ಜನ್ಯ ಪ್ರಕರಣಗಳ ಕುರಿತಂತೆ ರಾಜ್ಯಸರ್ಕಾರ ಶ್ವೇತ ಪತ್ರ ಹೊರಡಿಸಲಿ ಎಂದರು.

ವಕ್ಫ್‌ಗೆ ಸಂಬಂಧಿಸಿ ಪಶ್ಚಿಮ ಬಂಗಾಳದಲ್ಲಿ ದಲಿತರ ಮೇಲೆ ದೌರ್ಜನ್ಯಗಳಾಗುತ್ತಿದ್ದರೂ ಕಾಂಗ್ರೆಸ್ ಮಾತನಾಡುತ್ತಿಲ್ಲ. ಅಂಬೇಡ್ಕರ್ ಅವರ ಸೋಲಿಗೆ ಸಾರ್ವಕರ್ ಕಾರಣವೆಂಬ ಹೇಳಿಕೆ ವಿರೋಧಿಸಿ ನಾನು ಸವಾಲು ಹಾಕಿದ ಬಳಿಕ ಸಿಎಂ ಸಿದ್ದರಾಮಯ್ಯ ಮೆತ್ತಗಾಗಿದ್ದಾರೆ ಕಾಂಗ್ರೆಸ್ ಎಂದರೆ ಭ್ರಷ್ಟಾಚಾರ, ನ್ಯಾಷನಲ್ ಹೆರಾಲ್ಡ್ ಕೇಸಲ್ಲಿ ಕಾಂಗ್ರೆಸ್ ಪ್ರತಿಭಟನೆ ಬಿಜೆಪಿ ವಿರುದ್ಧ ಅಲ್ಲ, ಅದು ಕೋರ್ಟಿನ ವಿರುದ್ಧವೆಂದು ಪ್ರತಿಪಾದಿಸಿದರು.

1924ರಲ್ಲಿ ಬೆಳಗಾವಿಗೆ ಬಂದಿದ್ದ ಮಹಾತ್ಮಗಾಂಧೀಜಿ ಅವರನ್ನು ಭೇಟಿ ಮಾಡಲು ಕಾಂಗ್ರೆಸ್ ಅಂಬೇಡ್ಕರ್ ಅವರಿಗೆ ಅವಕಾಶ ಮಾಡಿಕೊಡಲಿಲ್ಲ. ಕಾಂಗ್ರೆಸ್ ಸುಡುವ ಮನೆ ಎಂದು ಅಂಬೇಡ್ಕರ್ ಹೇಳಿದ್ದರು. ಕಾಂಗ್ರೆಸ್ ಗಿರವಿ ಅಂಗಡಿಯಾಗಿದೆ. ಸಿಬಿಐನಿಂದ ಕಮಿಷನ್ ಆರೋಪಗಳ ತನಿಖೆಯಾಗಲಿ ಎಂದರು.

ಎಂಎಲ್‌ಸಿ ಕೆ.ಎಸ್.ನವೀನ್, ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಎಸ್.ಕೆ.ಬಸವರಾಜನ್, ಪಕ್ಷದ ಜಿಲ್ಲಾಧ್ಯಕ್ಷ ಎ.ಮುರಳಿ, ಸಂಪತ್‌ಕುಮಾರ್, ಡಾ.ಸಿದ್ದಾರ್ಥ ಗುಂಡಾರ್ಪಿ, ನಾಗರಾಜ್, ಲೋಕೇಶ್, ಛಲವಾದಿ ತಿಪ್ಪೇಸ್ವಾಮಿ, ಮೋಹನ್, ನಾಗರಾಜಬೇದ್ರೆ ಇದ್ದರು.

---

ಬದ್ಧತೆ ಪ್ರದರ್ಶಿಸಲಿ

ರಾಜ್ಯ ಸರ್ಕಾರ ಪ್ರತಿ ವರ್ಷ 2 ರಿಂದ 3 ಸಾವಿರ ಕೋಟಿ ರೂ.ಅನುದಾನ ಬಿಡುಗಡೆ ಮಾಡಿದ್ದರೂ ಭದ್ರಾಮೇಲ್ದಂಡೆ ಯೋಜನೆ ಅನುಷ್ಠಾನದಲ್ಲಿ ಪ್ರಗತಿಯಾಗುತ್ತಿತ್ತು ಎಂದು ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೇಳಿದರು. ಸಕಾಲಕ್ಕೆ ಅನುದಾನ ಬಿಡುಗಡೆ ಮೂಲಕ ಕಾಂಗ್ರೆಸ್ ಬದ್ಧತೆ ಪ್ರದರ್ಶಿಸಲಿ ಎಂದರು. ಎಂಎಲ್‌ಸಿ ಕೆ.ಎಸ್.ನವೀನ್ ಕೇಂದ್ರದ ಅನುದಾನ ಬಿಡುಗಡೆಗೆ ಇರುವ ತಾಂತ್ರಿಕ ತೊಂದರೆಗಳನ್ನು ವಿವರಿಸಿದರು. 5300 ಕೋಟಿ ರೂ.ಅನುದಾನಕ್ಕಾಗಿ ಕೇಂದ್ರಕ್ಕೆ ಸಲ್ಲಿಸಿರುವ ದಾಖಲೆಗಳ ವಿವರವನ್ನು ಬಹಿರಂಗ ಪಡಿಸುವಂತೆ ನಾರಾಯಣಸ್ವಾಮಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.