ಕೆ.ಎಂ.ದೊಡ್ಡಿ: ಸಮೀಪದ ಅರೆಚಾಕನಹಳ್ಳಿಯ ಶ್ರೀ ಶಂಭುಲಿಂಗೇಶ್ವರ ದೇವಾಲಯದಲ್ಲಿ ದಲಿತರಿಗೆ ಪ್ರವೇಶ ಕಲ್ಪಿಸಬೇಕು ಎಂದು ಶಾಂತಿ ಸಭೆ ನಿರ್ಧರಿಸಿತು.
ದಲಿತರಿಗೆ ಇತ್ತೀಚೆಗೆ ದೇಗುಲ ಪ್ರವೇಶ ಮತ್ತು ಪೂಜೆ ನಿರಾಕರಿಸಿದ ಪ್ರಕರಣದ ಹಿನ್ನೆಲೆಯಲ್ಲಿ ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ನಾಗಲಕ್ಷ್ಮೀ, ಪೊಲೀಸ್ ಇನ್ಸ್‌ಪೆಕ್ಟರ್ ನಂದ, ಕಂದಾಯ ನಿರೀಕ್ಷಕ ಮಹೇಶ್ ನೇತೃತ್ವದಲ್ಲಿ ಬುಧವಾರ ಆಯೋಜನೆಗೊಂಡಿದ್ದ ಸಭೆಯಲ್ಲಿ ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು. ದಲಿತರಿಗೆ ದೇವಾಲಯ ಪ್ರವೇಶ ಮತ್ತು ಪೂಜೆ ಸಲ್ಲಿಕೆಗೆ ಮುಕ್ತ ಅವಕಾಶ ಕಲ್ಪಿಸಬೇಕು. ಇಲ್ಲದಿದ್ದರೆ ಕಾನೂನು ಕ್ರಮ ವಹಿಸಬೇಕಾಗುತ್ತದೆ ಎಂದು ಅಧಿಕಾರಿಗಳು ಎಚ್ಚರಿಸಿದರು.
ಪೊಲೀಸ್ ಇನ್ಸ್‌ಪೆಕ್ಟರ್ ಆನಂದ್ ಮಾತನಾಡಿ, ಗ್ರಾಮದಲ್ಲಿ ಶಂಭುಲಿಂಗೇಶ್ವರ, ಭೈರವೇಶ್ವರ ಕೊಂಡೋತ್ಸವದ ಸಂದರ್ಭ ದಲಿತರಿಗೆ ದೇವಸ್ಥಾನ ಪ್ರವೇಶ ಮಾಡಲು ನಿರಾಕರಿಸಿದ ಘಟನೆ ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ ಎಂದರು. ಕಾನೂನು ಪ್ರಕಾರ ತಾರತಮ್ಯ ಸಲ್ಲದು. ಸರ್ವ ಸಮುದಾಯಗಳೂ ಗ್ರಾಮದಲ್ಲಿ ಒಗ್ಗಟ್ಟಿನಿಂದ ಹಬ್ಬ ಆಚರಣೆ ಮಾಡಬೇಕು ಎಂದರು.
ಕಾನೂನಿಗೆ ಗೌರವ ಸಲ್ಲಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಗ್ರಾಪಂ ಸದಸ್ಯ ಸತೀಶ್, ಸಮಾಜ ಕಲ್ಯಾಣ ಇಲಾಖೆ ಅಧೀಕ್ಷಕ ಶ್ರೀನಿವಾಸ, ಕೆಪಿಸಿಸಿ ಸದಸ್ಯ ಚಿದಂಬರ ಮೂರ್ತಿ, ಗ್ರಾಮದ ಮುಖಂಡರಾದ ಶಿವಲಿಂಗಯ್ಯ, ಚಿಕ್ಕಸ್ವಾಮಿ, ಜಾನಪದ ಕಲಾವಿದ ಸುಂದರೇಶ್, ನಾಡಗೌಡರಾದ ಕುಳ್ಳೆಗೌಡ, ಶಿವಲಿಂಗೇಗೌಡ, ಗೂಳಿಗೌಡ ಗ್ರಾಮ ಲೆಕ್ಕಿಗ ಅಕ್ಷಯ್ ಕೀರ್ತಿ ಹಾಜರಿದ್ದರು.