ಗುಂಡ್ಲುಪೇಟೆ: ಗ್ಯಾರಂಟಿಗಳ ಈಡೇರಿಕೆಗೆ ಪರದಾಡುತ್ತಿರುವ ರಾಜ್ಯ ಸರ್ಕಾರ ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ದಲಿತರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಆರೋಪಿಸಿದರು.
ಸಂಘಟನಾ ಪರ್ವ ಅಂಗವಾಗಿ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಾಬಾ ಸಾಹೇಬರು ಬದುಕಿದ್ದಾಗ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದ ಕಾಂಗ್ರೆಸ್ ಸದ್ಯ ದಲಿತರ ಮತಗಳ ಮೇಲೆ ಕಣ್ಣಿಟ್ಟಿದೆ. ಗ್ಯಾರಂಟಿಗಳ ಈಡೇರಿಕೆಗೆ ದಲಿತರ ಅಭಿವೃದ್ಧಿಗೆ ಮೀಸಲಿಟ್ಟಿದ್ದ ಹಣವನ್ನು ದುರ್ಬಳಕೆ ಮಾಡಿಕೊಳ್ಳುವ ಮೂಲಕ ವಂಚಿಸುತ್ತಿದೆ. ಆದ್ದರಿಂದ ಬಿಜೆಪಿ ಕಾರ್ಯಕರ್ತರು ಪ್ರತಿ ಮನೆಗೆ ತೆರಳಿ ಈ ಬಗ್ಗೆ ಜಾಗೃತಿ ಮೂಡಿಸಬೇಕು. ಕಾಂಗ್ರೆಸ್ ಸರ್ಕಾರದ ದಲಿತ ವಿರೋಧಿ ಕ್ರಮಗಳ ಬಗ್ಗೆ ಮತದಾರರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಎಸ್.ನಿರಂಜನಕುಮಾರ್ ಮಾತನಾಡಿ, ಕಾಂಗ್ರೆಸ್ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹಿಂದುಳಿದ ಹಾಗೂ ದಲಿತರ ಮತಗಳ ಮೇಲೆ ಕಣ್ಣಿಡುವ ಮೂಲಕ ದಾರಿತಪ್ಪಿಸುವ ಕೆಲಸ ಮಾಡುತ್ತಿದೆ. ಆದ್ದರಿಂದ ಕಾರ್ಯಕರ್ತರು ಹಾಗೂ ಜನಾಂಗದ ಮುಖಂಡರು ಸಮುದಾಯದ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಬಿಜೆಪಿಯನ್ನು ತಳಮಟ್ಟದಿಂದ ಸಂಘಟಿಸಬೇಕು ಎಂದು ಹೇಳಿದರು.
ಬಿಜೆಪಿ ಗುಂಡ್ಲುಪೇಟೆ ಮಂಡಲದ ಯುವ ಮೊರ್ಚಾ ಅಧ್ಯಕ್ಷರನ್ನಾಗಿ ಗುರುವಿನಪುರ ಶಿವಪ್ರಸಾದ್ ಸೇರಿದಂತೆ ನಾನಾ ಮೋರ್ಚಾಗಳಿಗೆ ಪದಾಧಿಕಾರಿಗಳನ್ನು ನಿಯೋಜಿಸಿದ ಆದೇಶ ಪತ್ರ ವಿತರಣೆ ಮಾಡಲಾಯಿತು. ಮಂಡಲಾಧ್ಯಕ್ಷ ಸಿ.ಮಹದೇವಪ್ರಸಾದ್, ಮಾಜಿ ಅಧ್ಯಕ್ಷ ಎಲ್.ಸುರೇಶ್, ತಾಲೂಕು ಪ್ರಭಾರ ನಾರಾಯಣಪ್ರಸಾದ್, ಎಸ್‌ಟಿ ಮೋರ್ಚಾ ಅಧ್ಯಕ್ಷ ಮಲ್ಲೇಶ್, ಮುಖಂಡ ಅರಕಲವಾಡಿ ನಾಗೇಂದ್ರ ಹಲವರು ಇದ್ದರು.