ಜಿಲ್ಲೆ

ದಲಿತರ ಮೇಲೆ ಹಲ್ಲೆ, ನ್ಯಾಯಕ್ಕೆ ಒತ್ತಾಯ

ಚಿತ್ರದುರ್ಗ: ಹಿರಿಯೂರು ತಾಲೂಕಿನ ಅಡವಿ ರಾಮಜೋಗಿಹಳ್ಳಿಯಲ್ಲಿ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ
ನಾಮಫಲಕ ಅಳವಡಿಸುವ ವಿಚಾರದಲ್ಲಿ ದಲಿತರ ಮೇಲೆ ಅನ್ಯ ಕೋಮಿನವರು ಹಲ್ಲೆ ನಡೆಸಿದ್ದು, ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ ನ್ಯಾಯ ಒದಗಿಸಬೇಕು ಎಂದು ಡಾ.ಅಂಬೇಡ್ಕರ್ ಪೀಪಲ್ಸ್ ಪಾರ್ಟಿ ಯುವ ಘಟಕದ ರಾಜ್ಯ ಅಧ್ಯಕ್ಷ ಸಿ.ಎಂ. ಕೃಷ್ಣ ಒತ್ತಾಯಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾಮಫಲಕ ಅಳವಡಿಕೆ ವಿಚಾರವೊಂದೆ ಅಲ್ಲ, ಹೊಲಕ್ಕೆ ಹೋಗುವ ಮಾರ್ಗಗಳಲ್ಲೂ ಸಮಸ್ಯೆ ಇದೆ. ಇದನ್ನು ಪರಿಹರಿಸುವುದರ ಜೊತೆಗೆ ಜಿಲ್ಲಾಡಳಿತ, ಜಿಪಂ, ಕಂದಾಯ, ಸಮಾಜ ಕಲ್ಯಾಣ ಇಲಾಖೆ ಸೇರಿ ಘಟನೆ ನಡೆದಿರುವ ಗ್ರಾಮದಲ್ಲಿ ಪಂಚನಾಮೆ ನಡೆಸಿ ಅಂಬೇಡ್ಕರ್ ಭವನ, ಪ್ರತಿಮೆ ನಿರ್ಮಿಸಲೇಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಕೂಡ ಸಂವಿಧಾನ ವಿರೋಧಿ ನೀತಿ ಅನುಸರಿಸುತ್ತಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 77 ವರ್ಷಗಳಾಗಿದ್ದರೂ ಅಡವಿ ರಾಮಜೋಗಿಹಳ್ಳಿಯಲ್ಲಿ ದಲಿತರಿಗೆ ಮೂಲ ಸೌಲಭ್ಯಗಳಿಲ್ಲ. ದಲಿತರ ವಿರುದ್ಧ ರಾಜ್ಯದ ಹಲವೆಡೆ ದೌರ್ಜನ್ಯ ನಡೆಯುತ್ತಿದ್ದು, ಇದನ್ನು ತಡೆಯಲು ವಿಫಲವಾಗಿರುವ ಸರ್ಕಾರ ಮತ್ತು ಜಿಲ್ಲಾಧಿಕಾರಿ ವಿರುದ್ಧ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲು ತೀರ್ಮಾನಿಸಿದ್ದೇವೆ ಎಂದರು.

ಪಕ್ಷದ ರಾಜ್ಯ ಅಧ್ಯಕ್ಷ ಮಾರುತಿರಾವ್ ಜಂಬಗಾ, ಹೈಕೋರ್ಟ್ ವಕೀಲ ದೇವಮಿತ್ರ, ಬ್ಯಾಲಾಳ್ ಜಯಣ್ಣ ಇತರರಿದ್ದರು.